ಗುರುವಾರ , ಆಗಸ್ಟ್ 22, 2019
27 °C

ಆರ್ಡಿಯಲ್ಲಿ ಬಿರುಗಾಳಿ: 8 ಗಂಟೆ ಹೆದ್ದಾರಿ ಬಂದ್

Published:
Updated:

ಸಿದ್ದಾಪುರ: ಸಿದ್ದಾಪುರ ಸಮೀಪದ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಡಿಯಲ್ಲಿ ಗುರುವಾರ ಮುಂಜಾನೆ 3.30ಕ್ಕೆ ಬೀಸಿದ ಬಿರುಗಾಳಿಗೆ ಪರಿಸರದ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಪರಿಸರದ ಅಂಗಡಿ ಮುಂಗಟ್ಟುಗಳ ಹೆಂಚು, ಸೀಟುಗಳು ಸಂಪೂರ್ಣ ಹಾರಿಹೊಗಿವೆ. ಭಾರಿ ಗಾತ್ರದ ಮರಗಳು ಬುಡ ಸಮೇತ ನೆಲಕ್ಕುರುಳಿವೆ.ಬಿರುಗಾಳಿಯಿಂದ ವಿರಾಜಪೇಟೆ- ಬೈಂದೂರು ರಾಜ್ಯ ಹೆದ್ದಾರಿಯಲ್ಲಿ 1 ಕಿ.ಮೀ ವರೆಗೆ ಭಾರಿ ಗಾತ್ರದ ಮರಗಳು ರಾಜ್ಯ ಹೆದ್ದಾರಿಗೆ ಉರುಳಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕುಂದಾಪುರ ಅಗ್ನಿಶಾಮಕ ದಳ, ಹೆಬ್ರಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ, ಆರ್ಡಿ ಪರಿಸರದ ಸ್ಥಳೀಯರು ಮತ್ತು ಗೊಳಿಯಯಂಗಡಿಯ ಹಿಂದೂ ಸಂಘಟನೆ ಸದಸ್ಯರ ಸತತ 8ಗಂಟೆಗಳ ಕಾಲ ಪರಿಶ್ರಮದಿಂದ ಬೆಳಿಗ್ಗೆ 10.30 ಸುಮಾರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಜಿಲ್ಲೆ ಮತ್ತು ಕುಂದಾಪುರ ತಾಲ್ಲೂಕಿನ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಬೆಳಗಿನ ಜಾವ 4 ಗಂಟೆಗೆ ಸ್ಥಳೀಯರು ಹಾಗೂ ಯುವಕರು, ಅರಣ್ಯ ಇಲಾಖೆ ಹೆಬ್ರಿ ಮತ್ತು  ಅಲ್ಬಾಡಿ ಘಟಕದ ಸದಸ್ಯರು, ಮುಂಜಾನೆ ಬಂದ ಕುಂದಾಪುರ ಅಗ್ನಿ ಶಾಮಕ ದಳದ ಅಧಿಕಾರಿ ಭರತ್ ಕುಮಾರ್ ಮತ್ತು ಸಿಬ್ಬಂದಿ, ಹೆಬ್ರಿ ವಲಯಾರಣ್ಯಾಧಿಕಾರಿ ಸತೀಶ್, ಕುಂದಾಪುರ ವಲಯಾರಣ್ಯಾಧಿಕಾರಿ ಲೊಹಿತ್ ಕುಮಾರ್ ನೇತೃತ್ವದಲ್ಲಿ 10ಗಂಟೆ ಸುಮಾರಿಗೆ ವಿರಾಜಪೇಟೆ ಹೆದ್ದಾರಿಯಲ್ಲಿ ಉರುಳಿದ ಮರಗಳನ್ನು ತೆರವುಗೊಳಿಸಲಾಯಿತು. ಬೆಳ್ವೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಸಹಕರಿಸಿದರು.ಮೆಸ್ಕಾಂಗೆ 8 ಲಕ್ಷ ನಷ್ಟ

ಹಾಲಾಡಿ ವಿಭಾಗ ಆರ್ಡಿ ಭಾಗದಲ್ಲಿ ಬಿರುಗಾಳಿಗೆ ಮೆಸ್ಕಾಂನ 60ಕ್ಕೂ ಹೆಚ್ಚು ವಿದ್ಯುತ್  ಕಂಬ ಉರುಳಿದ್ದು ಒಂದು ಪರಿವರ್ತಕ ಹಾನಿಗೀಡಾಗಿದೆ ಎಂದು ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿದ್ದ ಮೆಸ್ಕಾಂನ ಕುಂದಾಪುರ ಎಂಜಿನಿಯರ್ ರಾಕೇಶ್ ತಿಳಿಸಿದ್ದಾರೆ.ಹಾಲಾಡಿ ವಲಯ ಎಂಜಿನಿಯರ್ ಮಂಜುನಾಥ ಶಾನುಭೋಗ್ ನೇತೃತ್ವದಲ್ಲಿ ಸಿಬ್ಬಂದಿ ವಿದ್ಯುತ್ ಮರು ಸಂಪರ್ಕಕ್ಕಾಗಿ ಶ್ರಮಿಸುತ್ತಿದ್ದಾರೆ. ಶಾಸಕರ ಸಹಿತ ಜನಪ್ರತಿನಧಿಗಳು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

Post Comments (+)