ಶನಿವಾರ, ಜೂನ್ 19, 2021
23 °C

ಆರ್ಥಿಕತೆ ಮೇಲೆ ತೈಲ ಬೆಲೆ ಏರಿಕೆ ಪರಿಣಾಮ; ಪ್ರಣವ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್ಥಿಕತೆ ಮೇಲೆ ತೈಲ ಬೆಲೆ ಏರಿಕೆ ಪರಿಣಾಮ; ಪ್ರಣವ್ ಹೇಳಿಕೆ

 ನವದೆಹಲಿ (ಪಿಟಿಐ): ದೇಶದ ಆರ್ಥಿಕತೆಯ ಮೇಲೆ ತೈಲ ಬೆಲೆ ಏರಿಕೆಯಿಂದ ಆಗುವ ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಸಂಬಂಧಿಸಿದ ಎಲ್ಲರ ಜತೆ ಚರ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ವಿತ್ತೀಯ ಕೊರತೆ ಹಾಗೂ ಇಂಧನ ಸಬ್ಸಿಡಿ ಕುರಿತು ಉದ್ದಿಮೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಪ್ರಣವ್, ಇಂಧನ ಅಗತ್ಯಕ್ಕಾಗಿ 10ರಿಂದ 12 ಕೋಟಿ ಟನ್ ಕಚ್ಚಾ ತೈಲವನ್ನು ದೇಶ ಆಮದು ಮಾಡಿಕೊಳ್ಳಬೇಕಿದೆ. ಕಚ್ಚಾ ತೈಲ ಬೆಲೆ ಇಳಿಯದಿದ್ದಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ ದೊಡ್ಡದಾಗಿ ಕಾಡುತ್ತಿದೆ.  ಈ ಪ್ರಶ್ನೆಗೆ ಸಾಮೂಹಿಕವಾಗಿ ಉತ್ತರ ಕಂಡುಕೊಳ್ಳಬೇಕಿದೆ ಎಂದರು.ಇರಾನ್ ಸೇರಿದಂತೆ ಜಗತ್ತಿನ ಕೆಲವು ಕಡೆ ನಡೆಯುತ್ತಿರುವ ವಿಭಿನ್ನ ರಾಜಕೀಯ ಸನ್ನಿವೇಶಗಳಿಂದಾಗಿ ಕಚ್ಚಾ ತೈಲ ಬೆಲೆ ಒಂದೇ ಸಮನೆ ಏರುತ್ತಿದ್ದು, ಈ ತಿಂಗಳ ಆರಂಭದಲ್ಲಿ ಒಂದು ಬ್ಯಾರಲ್ ಬೆಲೆ 125 ಅಮೆರಿಕ ಡಾಲರ್‌ಗೆ ಏರಿತ್ತು. `ಈ ಬಗ್ಗೆ ಹಲವು ಸಲಹೆಗಳು ನಮಗೆ ಬರುತ್ತಿವೆ. ಆ ಬಗ್ಗೆ ಚಿಂತಿಸುತ್ತಿದ್ದೇವೆ. ಆದರೆ, ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆದು ಸಮರ್ಪಕ ನಿರ್ಧಾರ ಕೈಗೊಳ್ಳಲಾಗುವುದು~ ಎಂದ ಹೇಳಿದರು.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏಕಾಏಕಿ ಏರಿದ್ದರೂ ಕೇಂದ್ರ ಸರ್ಕಾರ ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲದ ಬೆಲೆ ಏರಿಸಿಲ್ಲ. ಎರಡು ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಮೇಲಿದ್ದ ನಿಯಂತ್ರಣ ತೆಗೆದುಹಾಕಿತ್ತು. ಆದರೆ, ಡೀಸೆಲ್ ಬೆಲೆಯ ಮೇಲಿನ ನಿಯಂತ್ರಣ ಸಡಿಲಿಸುವ ಕುರಿತು ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ.ಇಂಧನಕ್ಕೆ ನೀಡುವ ಸಬ್ಸಿಡಿಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ಹೊರೆ ಹೆಚ್ಚುತ್ತಿದೆ. ಈ ಆರ್ಥಿಕ ವರ್ಷದಲ್ಲಿ `ಜಿಡಿಪಿ~ (ಒಟ್ಟು ಆಂತರಿಕ ಉತ್ಪನ್ನ)ಯ ಶೇ 5.9ರಷ್ಟು ವಿತ್ತೀಯ ಕೊರತೆಯಾಗುವ ಸಾಧ್ಯತೆಯಿದೆ. 2012-13ರ ಸಾಲಿನಲ್ಲಿ ಶೇ 5.1ರಷ್ಟು ವಿತ್ತೀಯ ಕೊರತೆಯ ನಿರೀಕ್ಷೆಯಿದೆ.ಮುಂದಿನ ಆರ್ಥಿಕ ವರ್ಷದಲ್ಲಿ ಇಂಧನ ಸಬ್ಸಿಡಿಯ ಮೊತ್ತವನ್ನು `ಜಿಡಿಪಿ~ಯ ಶೇ 2ಕ್ಕಿಂತ ಕೆಳಗೆ ಇಳಿಸುವ ಹಾಗೂ ನಂತರದ ವರ್ಷಗಳಲ್ಲಿ ಅದನ್ನು ಶೇ 1.75ಕ್ಕಿಂತ ಕಡಿಮೆಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇಂಧನ ಸಬ್ಸಿಡಿಗಾಗಿ ಸದ್ಯಕ್ಕೆ 40 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.