ಸೋಮವಾರ, ಮೇ 23, 2022
30 °C

ಆರ್ಥಿಕತೆ ಸಂಕಷ್ಟದಲ್ಲಿ; ಪ್ರಣವ್ ಸಂತಸದಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರಪತಿ ಭವನದತ್ತ ಪಯಣ ಆರಂಭಿಸಿರುವ ಪ್ರಣವ್ ಮುಖರ್ಜಿ ಮಂಗಳವಾರ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ನಾಲ್ಕು ದಶಕಗಳ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು.ರೇಸ್‌ಕೋರ್ಸ್ ರಸ್ತೆಯ ಪ್ರಧಾನಿ ನಿವಾಸದಲ್ಲಿ ಮನಮೋಹನ್‌ಸಿಂಗ್ ಅವರನ್ನು ಭೇಟಿ ಮಾಡಿದ ಪ್ರಣವ್ ಮುಖರ್ಜಿ ರಾಜೀನಾಮೆ ಪತ್ರ ಸಲ್ಲಿಸಿದರು. ಇವರ ರಾಜೀನಾಮೆಯಿಂದ ತೆರವಾದ ಮಹತ್ವದ ಹಣಕಾಸು ಖಾತೆಯನ್ನು ಸದ್ಯಕ್ಕೆ ಪ್ರಧಾನಿ ಅವರೇ ತಮ್ಮ ಬಳಿ ಇಟ್ಟುಕೊಳ್ಳಲಿದ್ದು, ಯಾವುದೇ ಗಳಿಗೆಯಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.ತೀವ್ರಗತಿಯಲ್ಲಿ ಕುಸಿಯುತ್ತಿರುವ ರೂಪಾಯಿ ಮೌಲ್ಯಕ್ಕೆ ಚೇತರಿಕೆ ನೀಡುವ ಉದ್ದೇಶದಿಂದ ಆರ್ಥಿಕ ತಜ್ಞ- ಆರ್ಥಿಕ ಸುಧಾರಣಾ ಕ್ರಮಗಳ ರೂವಾರಿ ಆಗಿರುವ ಮನಮೋಹನ್‌ಸಿಂಗ್ ಅವರೇ ಹಣಕಾಸು ಖಾತೆ ಇಟ್ಟುಕೊಳ್ಳಲು ಬಯಸಿದ್ದಾರೆ. ಕೆಲ ಕಠಿಣ ತೀರ್ಮಾನಗಳ ಮೂಲಕ, ಕುಸಿಯುತ್ತಿರುವ ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸಲು ಸಿಂಗ್ ಬಯಸಿದ್ದಾರೆ. ಈ ಕಷ್ಟದ ಕೆಲಸಕ್ಕೆ ಕೆಲವು ಆರ್ಥಿಕ ತಜ್ಞರ ಸಲಹೆ- ಮಾರ್ಗದರ್ಶನ ಪಡೆಯಲಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.ಮುಂದಿನ ತಿಂಗಳ 19ರಂದು ನಡೆಯಲಿರುವ  ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ `ಅಖಾಡ~ಕ್ಕಿಳಿದಿರುವ ಪ್ರಣವ್ ಮುಖರ್ಜಿ, ಸಂಸತ್ತಿನ ಉತ್ತರ ಭಾಗದಲ್ಲಿರುವ ಹಣಕಾಸು  ಸಚಿವಾಲಯದ ಹೊರಗೆ ಪತ್ರಕರ್ತರ ಜತೆ ಮಾತನಾಡಿದರು.ಹಣಕಾಸು ಸಚಿವರಾಗಿ ಇದು ತಮ್ಮ ಕೊನೆಯ ಹೇಳಿಕೆ ಎಂದು ಅವರು ಸ್ಪಷ್ಟಪಡಿಸಿದರು. ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಎಂದು ಖಚಿತವಾದ ಬಳಿಕ ಸಂತಸದಿಂದ ಬೀಗುತ್ತಿರುವ ಪ್ರಣವ್ ಮಂಗಳವಾರವೂ ಹಸನ್ಮುಖಿಯಾಗಿದ್ದರು.`ರಾಷ್ಟ್ರಪತಿ ಭವನದತ್ತ ಪಯಣ ಆರಂಭಿಸಿರುವ ನಾನು 4 ದಶಕಗಳ ರಾಜಕೀಯ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ. ನಿಜಕ್ಕೂ ಇದು ಭಾವಪೂರ್ಣ ಸಂದರ್ಭ. ಯುಪಿಎ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ನಿಂತಿರುವ ಬಿಎಸ್‌ಪಿ, ಎಸ್‌ಪಿ, ಜೆಡಿಯು, ಶಿವಸೇನೆ, ಸಿಪಿಎಂ, ಫಾರ್ವರ್ಡ್‌ಬ್ಲಾಕ್ ಮತ್ತಿತರ ಪಕ್ಷಗಳಿಗೆ ಕೃತಜ್ಞನೆ ಸಲ್ಲಿಸುತ್ತೇನೆ~ ಎಂದರು.`ಪಶ್ಚಿಮ ಬಂಗಾಳದ ಸಣ್ಣ ಹಳ್ಳಿಯಿಂದ ಬಂದಿರುವ ನಾನು ಬಡವರು ಮತ್ತು ರೈತರ ಬದುಕನ್ನು ಹತ್ತಿರದಿಂದ ಕಂಡಿದ್ದೇನೆ. ಹಣಕಾಸು ಸಚಿವನಾಗಿ ಕೈಗೊಂಡಿರುವ ಎಲ್ಲ ತೀರ್ಮಾನಗಳೂ ಸರಿ ಎಂದು ಹೇಳುವುದಿಲ್ಲ. ಆದರೆ, ದೇಶ ಮತ್ತು ಜನರನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡಿದ್ದೇನೆ. ಮಾಧ್ಯಮಗಳು ನನ್ನನ್ನು ಟೀಕಿಸಿ ಇಲ್ಲವೆ ಮೆಚ್ಚಿ ಹೊಣೆಗಾರಿಕೆ ನೆನಪು ಮಾಡಿವೆ. ನಾನು ಸಾರ್ವಜನಿಕ ಜೀವನದಲ್ಲಿ ಇರುವವರೆಗೂ ಈ ಕೆಲಸ ಮುಂದುವರಿಯಲಿದೆ ಎಂದು ಆಶಿಸುತ್ತೇನೆ~.ನೀವು (ಮಾಧ್ಯಮಗಳ ಮಿತ್ರರು), ನಾನು ಕಾರು ಇಳಿಯುವಾಗ ಮತ್ತು ಹತ್ತುವಾಗ ವಿವಿಧ ವಿಷಯಗಳ ಮೇಲೆ ಪ್ರತಿಕ್ರಿಯೆಗೆ ಅಡ್ಡ ಹಾಕುವುದು ಸಾಮಾನ್ಯವಾಗಿತ್ತು. ನಾನೂ ಎಷ್ಟೋ ಸಲ ಮುಖ ಮುರಿದಿದ್ದೇನೆ~ ಎಂದು ಹೇಳಿ ಮುಖರ್ಜಿ ನಕ್ಕರು. ಸಚಿವರಾಗಿ ಕೊನೆಯ ಹೇಳಿಕೆ ನೀಡುವ ಸ್ವಲ್ಪ ಮೊದಲೂ, `ನೀವು ಉರಿಬಿಸಿಲಲ್ಲಿ ನಿಂತು ಏಕೆ ದಣಿಯುತ್ತೀರಿ~ ಎಂದೂ ಪತ್ರಕರ್ತರನ್ನು ಕೇಳಿದರು.ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪ್ರಧಾನಿ, ಪ್ರಣವ್ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದರು. ಇದಕ್ಕೂ   ಮೊದಲು ಪ್ರಣವ್‌ಗೆ ಹಣಕಾಸು ಸಚಿವಾಲಯದ ಅಧಿಕಾರಿಗಳು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು.2009ರಲ್ಲಿ ಪುನರಾಯ್ಕೆಯಾದ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡ ಪ್ರಣವ್ ಮುಖರ್ಜಿ ಮೂರು ವರ್ಷಗಳನ್ನು ಪೂರೈಸಿ ಇಲಾಖೆಗೆ ವಿದಾಯ ಹೇಳಿದರು.ಏರಿಳಿತಗಳ ನಡುವೆ ಹೆಜ್ಜೆ ಹಾಕಿದ `ಸಂಕಷ್ಟ ನಿವಾರಕ~ (ಟ್ರಬಲ್ ಶೂಟರ್) ದೇಶ ಸಂಕಷ್ಟದಲ್ಲಿರುವಾಗಲೇ ರಾಜೀನಾಮೆ ನೀಡಿದ್ದಾರೆ. ಗುರುವಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.