ಆರ್ಥಿಕವಾಗಿ ಹಿಂದುಳಿದವರಿಗೆ ಮನೆ

7

ಆರ್ಥಿಕವಾಗಿ ಹಿಂದುಳಿದವರಿಗೆ ಮನೆ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಜನರಿಗೂ ಸೂಕ್ತ ಮನೆ ನಿರ್ಮಿಸುವ ಕೊಡುವ ಬಗ್ಗೆ ಗಂಭೀರವಾಗಿ ಚಿಂತಿಸಿರುವ ಪಾಲಿಕೆ ಆಡಳಿತ ಈ ಸಂಬಂಧ ಮಂಗಳವಾರದ ಸಭೆಯಲ್ಲಿ ನಿರ್ಣಯ ಕೈಗೊಂಡಿತು.ಶೇಕಡಾ 22.75ರ ಅನುದಾನದಡಿ ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಾಲಿಕೆ ವತಿಯಿಂದ ಮನೆಗಳನ್ನು ನಿರ್ಮಿಸುವುದಕ್ಕೆ ಸಂಬಂಧಪಟ್ಟಂತೆ ಈವರೆಗೆ ‘ಜಾಬ್ ಕೋಡ್’ ನೀಡದಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಸಿದ್ದಯ್ಯ, ‘ಶೇ 22.75ರ ಅನುದಾನದಡಿ 477 ಕೋಟಿ ರೂಪಾಯಿ ಹಣವಿದೆ. ಈ ಅನುದಾನದಲ್ಲಿ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ 10,000 ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗದ ಜನರಿಗೂ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ಸಂಬಂಧ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಲಿಖಿತ ರೂಪದಲ್ಲಿ ಮನವಿ ಮಾಡಲಾಗಿದೆ’ ಎಂದರು.ಇದಕ್ಕೆ ಅನುಮೋದನೆ ನೀಡಿದ ಸಭೆಯು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗದ ಜನರಿಗೂ ಮನೆಗಳನ್ನು ನಿರ್ಮಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.

ಕ್ಷಮೆ ಯಾಚಿಸಿದ ಸದಸ್ಯ: ಪಂಡಿತ್ ಭೀಮಸೇನ ಜೋಷಿ ಅವರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದ ಬಿಜೆಪಿ ಸದಸ್ಯ ಶಿವಕುಮಾರ್ ಅವರು ಸಭೆಯಲ್ಲಿ ಕ್ಷಮೆ ಯಾಚಿಸಿದರು.ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಶಿವಕುಮಾರ್, ‘ಭೀಮಸೇನ ಜೋಷಿ ಅವರ ಬಗ್ಗೆ ಬಾಯಿ ತಪ್ಪಿ ಆ ರೀತಿ ಮಾತನಾಡಿದೆ. ಉದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಲಿಲ್ಲ. ನನ್ನ ತಪ್ಪಿನ ಅರಿವಾಗಿದೆ. ಹಾಗಾಗಿ ಸದಸ್ಯರು ಹಾಗೂ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ’ ಎಂದರು. ಬಳಿಕ ಮೇಯರ್ ಆ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಸೂಚಿಸಿದರು.

250 ಕೋಟಿ ಸಾಲ: ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ 250 ಕೋಟಿ ರೂಪಾಯಿ ಸಾಲ ಪಡೆಯುವ ಪ್ರಸ್ತಾವಕ್ಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry