ಆರ್ಥಿಕ ಅಸಮತೋಲನ: ಆತಂಕ

7

ಆರ್ಥಿಕ ಅಸಮತೋಲನ: ಆತಂಕ

Published:
Updated:

ತುಮಕೂರು: ವಿಶ್ವದಲ್ಲಿ ಆರ್ಥಿಕ ಅಸಮತೋಲನದ ಪರಿಣಾಮ ಸಂಪತ್ತು ಕೆಲವೇ ಜನರಲ್ಲಿ ಕ್ರೋಡೀಕರಣವಾಗುತ್ತಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆತಂಕ ವ್ಯಕ್ತಪಡಿಸಿದರು.ನಗರದಲ್ಲಿ ಸೋಮವಾರ ಸಿಐಟಿಯು ಆಯೋಜಿಸಿದ್ದ ವಿಶ್ವದಾದ್ಯಂತ ಕಾರ್ಮಿಕರ ಹೋರಾಟ ದಿನ ಉದ್ಘಾಟಿಸಿ ಮಾತನಾಡಿದರು. ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ದಿನಕ್ಕೆ 7 ಗಂಟೆ ಕೆಲಸದಂತೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಇರಬೇಕು. ಮುಂದುವರೆದ ದೇಶಗಳಲ್ಲಿ ಕಾರ್ಮಿಕರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುತ್ತಾರೆ. ಹೀಗಾಗಿ ದೇಶದ ಐಟಿ-ಬಿಟಿ ಕಂಪೆನಿಗಳು ಇದೇ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ ಎಂದು ಹೇಳಿದರು.ಅಮೆರಿಕದಲ್ಲಿ ಶೇ. 60ರಷ್ಟು ಸಂಪತ್ತು ಕೇವಲ ಹತ್ತು ಮಂದಿಯ ಕೈಯಲ್ಲಿದೆ. ಇದು ದೇಶದಲ್ಲಿ ಶೇ. 55ರಷ್ಟಿದೆ. ಶ್ರೀಮಂತರು ಐಷಾರಾಮಿ ಜೀವನ ನಡೆಸುತ್ತಿದ್ದರೆ ಬಡವರು ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.ದೇಶ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಗೌರವಯುತ ಉದ್ಯೋಗ ನೀಡಬೇಕು. ಆಹಾರ, ಮನೆ ಬಾಡಿಗೆ ಸೇರಿದಂತೆ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಿಂತ ಸ್ವಲ್ಪ ಹೆಚ್ಚು ವೇತನ ನೀಡಬೇಕು. ಉದ್ಯೋಗ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.ಕಾರ್ಮಿಕರಿಗೆ ರಕ್ಷಣೆ ಸಿಕ್ಕಾಗ ಮಾತ್ರ ಕಾರ್ಮಿಕರ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ. ದಿನೆದಿನೇ ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚುತ್ತಿದೆ. ಜೀವನ ಸಾಗಿಸುವುದು ದುಬಾರಿಯಾಗುತ್ತಿದೆ. ಹೀಗಾಗಿ ಕಾರ್ಮಿಕರ ವೇತನದಲ್ಲಿ ಹೆಚ್ಚಳವಾಗಬೇಕು ಎಂದು ಆಗ್ರಹಿಸಿದರು.ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಎನ್.ಕೆ.ಸುಬ್ರಹ್ಮಣ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಬಿ.ಉಮೇಶ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry