ಸೋಮವಾರ, ನವೆಂಬರ್ 18, 2019
25 °C

ಆರ್ಥಿಕ ಕುಸಿತ: ಪ್ರಧಾನಿ ಕಳವಳ

Published:
Updated:
ಆರ್ಥಿಕ ಕುಸಿತ: ಪ್ರಧಾನಿ ಕಳವಳ

ನವದೆಹಲಿ (ಪಿಟಿಐ): ದೇಶದಲ್ಲಿ ಪ್ರಸ್ತುತ ಉದ್ದಿಮೆಗಳು, ಹೂಡಿಕೆಗೆ ನಿರುತ್ತೇಜಕ ವಾತಾವರಣವಿದ್ದು, ಅರ್ಥವ್ಯವಸ್ಥೆ ತಾತ್ಕಾಲಿಕ ಕುಸಿತ ಕಂಡಿದೆ ಎಂದು ಅರ್ಥಶಾಸ್ತ್ರಜ್ಞರೂ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಅರ್ಥವ್ಯವಸ್ಥೆಯ ಚೇತರಿಕೆಗೆ ಸರ್ಕಾರ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳಿಂದ ಅಭಿವೃದ್ಧಿ ದರ ಶೇ 8ಕ್ಕೆ ಮರಳುವ ವಿಶ್ವಾಸವನ್ನೂ ಸಹ ಪ್ರಧಾನಿ ವ್ಯಕ್ತಪಡಿಸಿದ್ದಾರೆ.`ಅಭಿವೃದ್ಧಿ ದರ ಪ್ರಸ್ತುತ ಶೇ 5ಕ್ಕೆ ಕುಸಿದಿದೆ. ಇಡೀ ದಶಕದಲ್ಲೇ ಅತ್ಯಂತ ಕಡಿಮೆಯಾದ ಈ ವೃದ್ಧಿ ದರಕ್ಕೆ ಜಾಗತಿಕ ಆರ್ಥಿಕ ಹಿಂಜರಿಕೆ ಕಾರಣ. ದೇಶದ ಆರ್ಥಿಕ ಕ್ಷೇತ್ರ ಹುಲುಸಾಗಿ ಬೆಳೆಯಬೇಕಾದರೆ ದೇಶದೊಳಗೆ ಇರುವ ಅಡ್ಡಿ, ಆತಂಕಗಳನ್ನು ನಿವಾರಿಸಬೇಕಿದೆ' ಎಂದು ಸಿಂಗ್ ಹೇಳಿದರು.ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ಸಭೆಯಲ್ಲಿ ಏಳು ವರ್ಷಗಳ ನಂತರ ಭಾಗವಹಿಸಿದ್ದ ಸಿಂಗ್, `2007ರಲ್ಲಿ ದೇಶದಲ್ಲಿ ವಾಣಿಜ್ಯೋದ್ಯಮಿಗಳು, ಕೈಗಾರಿಕೆಗಳಿಗೆ ಅತೀವ ಉತ್ತೇಜನ ನೀಡುವ ಸಕಾರಾತ್ಮಕ ವಾತಾವರಣವಿತ್ತು. ಆದರೀಗ ಪ್ರತಿಕೂಲ ವಾತಾವರವಿದೆ. ಇದನ್ನು ಸರಿಪಡಿಸುವ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.`ಶೇ 5ರ ಅಭಿವೃದ್ಧಿ ದರದಲ್ಲಿ ನಮ್ಮ ಭವಿಷ್ಯ ಅಡಗಿಲ್ಲ. ಹಿಂದಿನ ಹತ್ತು ವರ್ಷಗಳಲ್ಲಿ ನಾವು ಸರಾಸರಿ ಶೇ 8ರ ದರದಲ್ಲಿ ಬೆಳೆದಿದ್ದೇವೆ. ನಾವು ಮತ್ತೆ ಆ ಹಂತ ತಲುಪಬಹುದು. ಆದರೆ, ಅದಕ್ಕಾಗಿ ಸರ್ಕಾರ ಕೆಲ ನಿರ್ಣಾಯಕ ನಿರ್ಧಾರಗಳನ್ನು ಶೀಘ್ರವಾಗಿ ತೆಗೆದುಕೊಳ್ಳಬೇಕಾಗುತ್ತದೆ.'`ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ರಫ್ತಿನ ಪ್ರಮಾಣ ಈಗ ಕುಸಿದಿದೆ. ಜಾಗತಿಕ ಹಿಂಜರಿಕೆಯನ್ನು ನಾವು ಸುಧಾರಿಸಲು ಸಾಧ್ಯವಿಲ್ಲ.  ಆದರೆ, ದೇಶದೊಳಗೆ ಉದ್ಭವಿಸಿರುವ  ಅಡ್ಡಿ, ಆತಂಕಗಳನ್ನು ಬಲವಂತವಾಗಿಯಾದರೂ ನಾವು ನಿವಾರಿಸಿಕೊಳ್ಳಬಹುದು'`ಈಗಿರುವ ಯೋಜನೆಯಂತೆ ಸರ್ಕಾರ 2016-17ರ ಹೊತ್ತಿಗೆ ವಿತ್ತೀಯ ಕೊರತೆಯನ್ನು ಶೇ 3ಕ್ಕೆ ಇಳಿಸಲು ನಿರ್ಧರಿಸಿದೆ. ನಮ್ಮ ಮೇಲೆ ಭರವಸೆ ಇಡಿ ಹಾಗೂ ಋಣಾತ್ಮಕ ವಾತಾವರಣದ ಕೆಸರಿನಲ್ಲಿ ಮಳುಗಬೇಡಿ' ಎಂದು ಪ್ರಧಾನಿ ಉದ್ಯಮಿಗಳಲ್ಲಿ ಮನವಿ ಮಾಡಿಕೊಂಡರು.`ಇಲ್ಲಿ ಭ್ರಷ್ಟಾಚಾರದ ಸಮಸ್ಯೆಯಿದೆ. ಆಡಳಿತಶಾಹಿಯ ನಿಷ್ಕ್ರಿಯತೆ ಮತ್ತೊಂದು ದೊಡ್ಡ ಸಮಸ್ಯೆ. ಸಮಿಶ್ರ ಸರ್ಕಾರವನ್ನು ನಿಭಾಯಿಸುವುದು ಸುಲಭವಲ್ಲ. ಹಾಗೆಂದು ಈ ಸಮಸ್ಯೆಗಳು ಈಗ ಉದ್ಭವಿಸಿದ್ದಲ್ಲ. ಶೇ 8ರ ಅಭಿವೃದ್ಧಿ ದರ ಇದ್ದಾಗಲೂ ಈ ಸಮಸ್ಯೆಗಳು ಇದ್ದವು' ಎಂದು ಸಿಂಗ್ ಹೇಳಿದರು.`ಆರ್ಥಿಕ ಕ್ಷೇತ್ರದ ಸುಧಾರಣೆಗಾಗಿ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಚಿಸಲಾದ ಹೂಡಿಕೆ ಕುರಿತ ಸಂಪುಟ ಸಮಿತಿಯಿಂದಾಗಿ (ಸಿಸಿಐ) ಹಲವು ವರ್ಷಗಳಿಂದ ನೆನೆಗುದಿಯಲ್ಲಿ ಇದ್ದ ಬೃಹತ್ ಯೋಜನೆಗಳಿಗೆ ಚಾಲನೆ ದೊರಕಿದೆ.'`ಹಾಗೆಯೇ ವಿದೇಶಿ ಹೂಡಿಕೆಯನ್ನು ಉತ್ತೇಜಿಸಲು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನೀತಿಯನ್ನು ಸರ್ಕಾರ ಸಮಗ್ರವಾಗಿ ಪುನರ್ ಪರಿಶೀಲಿಸುತ್ತಿದೆ.' `ಹೂಡಿಕೆ ಕ್ಷೇತ್ರದಲ್ಲಿನ ನಿರುತ್ಸಾಹವನ್ನು ತಗ್ಗಿಸಬೇಕಿದೆ. ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಲ್ಲಿ ಇರುವ ಅಡೆತಡೆ ನಿವಾರಿಸಬೇಕಿದೆ' ಎಂದು ಸಿಂಗ್ ಹೇಳಿದರು.`ಸಮ್ಮಿಶ್ರ ಸರ್ಕಾರ ಅಂದರೆ ತಂತಿ ಮೇಲಿನ ಕಸರತ್ತು'

ನವದೆಹಲಿ (ಪಿಟಿಐ):
ಯುಪಿಎ ಮೈತ್ರಿಕೂಟದಿಂದ ಡಿಎಂಕೆ ಹೊರಬ್ದ್ದಿದ ಕೆಲವೇ ದಿನಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಮ್ಮಿಶ್ರ ಸರ್ಕಾರ ನಡೆಸುವುದು ಸುಲಭವಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಆಡಳಿತದಲ್ಲಿ ಕೆಲವು ಲೋಪದೋಷ ಇದ್ದಿರಬಹುದು. ಆದರೆ, ಪ್ರಜಾಪ್ರಭುತ್ವದ ಒಂದು ಲಾಭವೆಂದರೆ ಆ ಕೊರತೆಗಳನ್ನು ಮುಕ್ತವಾಗಿ ಜನರ ಮುಂದೆ ಇಡಬಹುದು ಎಂದು ಸಿಂಗ್ ಹೇಳಿದ್ದಾರೆ.ಮುಂದಿನ ತಿಂಗಳು 9 ವರ್ಷ ಪೂರೈಸಲಿರುವ ಯುಪಿಎ ಸರ್ಕಾರದಿಂದ ಆರು ತಿಂಗಳ ಅವಧಿಯಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆ ಹೊರಬಿದ್ದಿವೆ. ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಸಮಾಜವಾದಿ ಪಕ್ಷ ಸಹ ಆಗಾಗ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಿದೆ.ಜೆಪಿಸಿ ಮುಂದೆ ಹಾಜರಾಗಲು ಸಿಂಗ್ ನಕಾರ

ನವದೆಹಲಿ (ಪಿಟಿಐ):
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮುಂದೆ ಹಾಜರಾಗಲು ಪ್ರಧಾನಿ ಮನಮೋಹನ್ ಸಿಂಗ್ ನಿರಾಕರಿಸಿದ್ದಾರೆ.

ಈ ಕುರಿತು ಸಮಿತಿಯ ಸದಸ್ಯ ಹಾಗೂ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿಂಗ್, ಈ ವಿಚಾರದಲ್ಲಿ ಸಮಿತಿಯೇ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೇ ಇದರಲ್ಲಿ ನಾನು ಮುಚ್ಚಿಡುವುದು ಏನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳೆಲ್ಲ ಜೆಪಿಸಿ ಬಳಿ ಇವೆ. ಯಾವ ವ್ಯಕ್ತಿಗಳನ್ನು ಸಾಕ್ಷ್ಯ ಹೇಳಲು ಕರೆಯಬೇಕು ಎಂಬ ವಿಚಾರ ಜೆಪಿಸಿ ಹಾಗೂ ಅದರ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ಪ್ರಧಾನಿ ಸಿನ್ಹಾಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)