ಮಂಗಳವಾರ, ಏಪ್ರಿಲ್ 20, 2021
30 °C

ಆರ್ಥಿಕ ಪ್ರಗತಿ ಶೇ 6.7ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್ಥಿಕ ಪ್ರಗತಿ ಶೇ 6.7ಕ್ಕೆ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ 6.7ರ ಪ್ರಮಾಣಕ್ಕೆ ಹೆಚ್ಚಲಿದೆ. ಆದರೆ, ಡೀಸೆಲ್ ಬೆಲೆ ಏರಿಕೆ ಮತ್ತು ಎಲ್‌ಪಿಜಿ, ರಸಗೊಬ್ಬರ ಸಬ್ಸಿಡಿ, ಬಹು ಬಗೆ ಬ್ರಾಂಡ್‌ಗಳ ಚಿಲ್ಲರೆ ಮಾರಾಟ ವಲಯದ ನೇರ ವಿದೇಶಿ ಹೂಡಿಕೆ  ವಿಚಾರಗಳಲ್ಲಿ ಸರ್ಕಾರ ದಿಟ್ಟತನದ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ(ಪಿಎಂಇಎಸಿ) ಶುಕ್ರವಾರ ಹೇಳಿದೆ.2012-13ನೇ ಸಾಲಿನ ದೇಶದ `ಆರ್ಥಿಕ ಮುನ್ನೋಟ~ ವರದಿಯನ್ನು ಶುಕ್ರವಾರ ಪ್ರಕಟಿಸಿರುವ `ಪಿಎಂಇಎಸಿ~, ಮುಂಗಾರು ಮಳೆ ಕೊರತೆಯ ಪರಿಣಾಮ ಕೃಷಿ ಕ್ಷೇತ್ರದ ಪ್ರಗತಿಯನ್ನು ಶೇ 0.5ಕ್ಕೆ ತಗ್ಗಿಸಲಿದೆ. ಇದು ಹಣದುಬ್ಬರದ ಮೇಲೆ ಒತ್ತಡ ಹೇರಲಿದೆ. ಪರಿಣಾಮ ಹಣದುಬ್ಬರವೂ ಶೇ 6.5- ಶೇ 7ರ ಪ್ರಮಾಣಕ್ಕೇರಲಿದೆ ಎಂದು ಭವಿಷ್ಯ ನುಡಿದಿದೆ.`ಆರ್ಥಿಕ ಪ್ರಗತಿ ಶೇ 6.7ರಷ್ಟು ಉತ್ತಮ ಮಟ್ಟದಲ್ಲಿರಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ `ಪಿಎಂಇಎಸಿ~ ಅಧ್ಯಕ್ಷ ಸಿ.ರಂಗರಾಜನ್, ವರ್ಷದ ದ್ವಿತೀಯಾರ್ಧದಲ್ಲಿ ಪರಿಕರ ತಯಾರಿಕಾ ವಲಯದ ಕೊಡುಗೆಯಲ್ಲಿ (ಜಿಡಿಪಿಯ ಶೇ 4.5ರಷ್ಟು) ಗಣನೀಯ ಸುಧಾರಣೆ ಕಂಡುಬರುವ ವಿಶ್ವಾಸವಿದೆ ಎಂದರು.ಇದಕ್ಕೂ ಮುನ್ನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ `ಮುನ್ನೋಟ ವರದಿ~ ಸಲ್ಲಿಸಿದ ರಂಗರಾಜನ್, `ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮತ್ತಿತರ ಸಂಸ್ಥೆಗಳು ನೀಡಿದ್ದ ಪ್ರಮಾಣಕ್ಕಿಂತಲೂ ಪಿಎಂಇಎಸಿ ಈಗ ನೀಡಿರುವ ಆರ್ಥಿಕ ಪ್ರಗತಿಯ ಮುನ್ನೋಟ ಉತ್ತಮ ಮಟ್ಟದೇ ಆಗಿದೆ~ ಎಂದರು.ಆರ್‌ಬಿಐ ಈ ಮೊದಲು ಜಿಡಿಪಿ ಶೇ 6.5ರಷ್ಟಿರಲಿದೆ ಎಂದಿದ್ದರೆ, ರೇಟಿಂಗ್ ಸಂಸ್ಥೆ `ಮೂಡಿ~ ಮತ್ತು `ಕ್ರಿಸಿಲ್~ ಶೇ 5.5ರ ಅಂದಾಜು ಮಾಡಿದ್ದವು. ಕೇಂದ್ರ ಅಂಕಿ-ಅಂಶ ಸಂಸ್ಥೆ(ಸಿಎಸ್‌ಒ) ಈ ಬಾರಿಯ ಜಿಡಿಪಿ 9 ವರ್ಷಗಳಲ್ಲಿಯೇ ಕನಿಷ್ಠ (ಶೇ 6.5) ಮಟ್ಟದ್ದಾಗಿರಲಿದೆ ಎಂದಿತ್ತು.ಸದ್ಯದ ಜಾಗತಿಕ ಸಂಕಷ್ಟಗಳನ್ನೂ ಗಮನದಲ್ಲಿಟ್ಟುಕೊಂಡೇ ದೇಶದ ಪ್ರಗತಿ ಗತಿಯನ್ನು ಹೆಚ್ಚಿಸಬೇಕಿದ್ದರೆ ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಬೇಕಿದೆ. ದೇಶೀಯ ವಿಮಾನ ಯಾನ ಸಂಸ್ಥೆಗಳಲ್ಲಿ ವಿದೇಶಿ ಕಂಪೆನಿಗಳಿಗೆ (ಶೇ 49) ಹೂಡಿಕೆಗೆ ಅವಕಾಶ ಮಾಡಿಕೊಡಬೇಕಿದೆ. ವಿತ್ತೀಯ ಮತ್ತು ಚಾಲ್ತಿ ಖಾತೆಯಲ್ಲಿನ ಕೊರತೆಯನ್ನು ತಗ್ಗಿಸಬೇಕಿದೆ.ತೆರಿಗೆ ವ್ಯವಸ್ಥೆಯಲ್ಲಿ ನಾಳಿನ ಆಗುಹೋಗು ಮುಂಚಿತವಾಗಿಯೇ ತಿಳಿದುಕೊಳ್ಳುವುದನ್ನು ಸಾಧ್ಯವಾಗಿಸಬೇಕಿದೆ. ಮುಖ್ಯವಾಗಿ ಹೂಡಿಕೆದಾರರಲ್ಲಿ ವಿಶ್ವಾಸ ಮರಳುವಂತೆ ಮಾಡಬೇಕಿದೆ. ಅದಕ್ಕಾಗಿ ಆದಾಯ ತೆರಿಗೆ ಮತ್ತು `ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮ~(ಜಿಎಎಆರ್)ಗಳಲ್ಲಿ ಸುಧಾರಣೆ ತರಬೇಕಿದೆ ಎಂದು ರಂಗರಾಜನ್ ಸಲಹೆ ನೀಡಿದ್ದಾರೆ.ಚಿನ್ನ ಆಮದು ತಗ್ಗಿಸಬೇಕು. ಮ್ಯೂಚುವಲ್ ಫಂಡ್ ಮತ್ತು ವಿಮಾ ಕ್ಷೇತ್ರ ಉತ್ತೇಜಿಸಲು ನಿಯಂತ್ರಣ ಕಾಯ್ದೆಗಳಲ್ಲಿ ಬದಲಾವಣೆ ಮಾಡಬೇಕು. ಬಹುಬಗೆ ಬ್ರಾಂಡ್ ಚಿಲ್ಲರೆ ಮಾರಾಟ ವಲಯಕ್ಕೆ(ಶೇ 29) ನೇರ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.`ಸರಕು ಮತ್ತು ಸೇವಾ ತೆರಿಗೆ~(ಜಿಎಸ್‌ಟಿ) ನೀತಿ ಜಾರಿ ತೆರಿಗೆ ಸುಧಾರಣೆಗಳ ಮಾರ್ಗದಲ್ಲಿನ ಪ್ರಮುಖ ಮೈಲಿಗಲ್ಲಾಗಲಿದೆ~ ಎಂದಿರುವ ರಂಗರಾಜನ್, ಕೇಂದ್ರದ ಹಣಕಾಸು ಸ್ಥಿತಿಗೆ ಹೋಲಿಸಿದರೆ ರಾಜ್ಯಗಳ ಪರಿಸ್ಥಿತಿಯೇ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ದೇಶದಲ್ಲಿನ ಉಳಿತಾಯ ಚಟುವಟಿಕೆ ಪ್ರಮಾಣ 2010-11ರಲ್ಲಿ ಶೇ 32ರಷ್ಟಿದ್ದುದು, ಈ ವರ್ಷ ಶೇ 30.4ಕ್ಕೆ ತಗ್ಗಿದೆ. ಸಮಾಧಾನದ ಸಂಗತಿ ಎಂದರೆ ಚಾಲ್ತಿ ಖಾತೆ ಕೊರತೆ ವಿಚಾರದಲ್ಲಿ (ಶೇ 4.2ರಿಂದ ಶೇ 3.6ಕ್ಕೆ ತಗ್ಗಿರುವುದು) ಸುಧಾರಣೆಯಾಗಿದೆ. ಹೂಡಿಕೆ ಹರಿವಿನ ಪ್ರಮಾಣವೂ 6780 ಕೋಟಿ ಡಾಲರ್‌ನಿಂದ 7320 ಕೋಟಿ ಡಾಲರ್‌ಗೆ ಹೆಚ್ಚಿದೆ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.