ಆರ್ಥಿಕ ವೃದ್ಧಿಗೆ ಸಾಮರಸ್ಯ ಅಗತ್ಯ

6

ಆರ್ಥಿಕ ವೃದ್ಧಿಗೆ ಸಾಮರಸ್ಯ ಅಗತ್ಯ

Published:
Updated:

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಅರ್ಧ ವಾರ್ಷಿಕ ಆರ್ಥಿಕ ವಿಶ್ಲೇಷಣೆಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ (2012-13) ಆರ್ಥಿಕ ವೃದ್ಧಿ ದರವು ಮುಂಗಡ ಪತ್ರದಲ್ಲಿ ಅಂದಾಜು ಮಾಡಿದ ದರಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಇರಲಿದೆ. ದ್ವಿತೀಯಾರ್ಧದಲ್ಲಿ ಒಟ್ಟಾರೆ ಅರ್ಥವ್ಯವಸ್ಥೆಯ ಚೇತರಿಕೆಯಾಗಲಿದೆ ಎಂದು ಹೇಳಿರುವುದು  ಆಶಾವಾದಕ್ಕಿಂತ ಹೆಚ್ಚಾಗಿ ಸರ್ಕಾರ ಈ ನಿಟ್ಟಿನಲ್ಲಿ ತಳೆಯಬೇಕಾದ ಎಚ್ಚರಿಕೆಯ ನಿಲುವುಗಳಿಗೆ ಮುನ್ಸೂಚನೆಯಾಗಬೇಕು.ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಹೊಸ ಸುಧಾರಣಾ ಕ್ರಮಗಳ ಹೊರತಾಗಿಯೂ `ಜಿಡಿಪಿ' ದರ ಕಡಿಮೆ ಪ್ರಮಾಣದಲ್ಲಿಯೇ ಇರಲಿರುವುದು ಎಚ್ಚರಿಕೆಯ ಪಾಠವಾಗಬೇಕಾಗಿದೆ. ಈ ನಿರಾಶೆಯ ಮಧ್ಯೆಯೇ, ವರಮಾನ ವೃದ್ಧಿ ಮುನ್ನೋಟ ಮಾತ್ರ ಕೊಂಚಮಟ್ಟಿಗೆ ಆಶಾದಾಯಕವಾಗಿದೆ. ವಿಶ್ವದಾದ್ಯಂತ ಈಗಲೂ ಹಣಕಾಸು ಬಿಕ್ಕಟ್ಟಿನ ಪರಿಸ್ಥಿತಿ ಇದ್ದರೂ, ದೇಶದ ಅರ್ಥವ್ಯವಸ್ಥೆ ಸುಧಾರಿಸುತ್ತಿರುವ ಸ್ಪಷ್ಟ ಸಂಕೇತಗಳಿವೆ ಎಂದು ಹೇಳಿರುವುದು ಭರವಸೆದಾಯಕವಾಗಿದೆ.ತಯಾರಿಕಾ ರಂಗದ ಆಶಾದಾಯಕ ಬೆಳವಣಿಗೆ, ಉತ್ತಮ ಹಿಂಗಾರು ಫಸಲು, ಸೇವಾರಂಗದಲ್ಲಿ ಚೇತರಿಕೆ, ಹಣದುಬ್ಬರ ಪರಿಸ್ಥಿತಿ ಸುಧಾರಣೆ ಮುಂತಾದವು ನಿಧಾನಗತಿಯ ಆರ್ಥಿಕ ಪರಿಸ್ಥಿತಿಯ ಚಿತ್ರಣವನ್ನು ತ್ವರಿತವಾಗಿ ಅಲ್ಲದಿದ್ದರೂ ನಿಧಾನವಾಗಿ ಬದಲಿಸಲಿರುವುದು ಸಮಾಧಾನಕರ ಸಂಗತಿ. ಹೂಡಿಕೆದಾರರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬುವ ಮುಂಗಡಪತ್ರ, ಯೋಜನೆಗಳ ತ್ವರಿತ ಮಂಜೂರಾತಿ ಮತ್ತು ಹಣಕಾಸು ಮಾರುಕಟ್ಟೆಯ ಸುಧಾರಣೆಯ ಕ್ರಮಗಳು ಆರ್ಥಿಕ ಚೇತರಿಕೆಗೆ ಖಂಡಿತವಾಗಿಯೂ ಇನ್ನಷ್ಟು ಪುಷ್ಟಿ ನೀಡಲಿವೆ.ಸರ್ಕಾರದ ಈ ಅರ್ಧವಾರ್ಷಿಕ ಸ್ವಯಂ ಅಂದಾಜಿನ ಪ್ರಕಾರ, ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕ ಬೆಳವಣಿಗೆ ದರ ಚೇತರಿಕೆ ಕಾಣಲಿದೆ, ಅದಕ್ಕೆ ಪೂರಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಬಲ ನೀಡುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರ ಆಶಿಸಿದ್ದರೂ ಅದಕ್ಕೆ ಸದ್ಯಕ್ಕಂತೂ ಸೂಕ್ತ ಬೆಂಬಲ ಸಿಕ್ಕಿಲ್ಲ. ಮಂಗಳವಾರವಷ್ಟೇ ಪ್ರಕಟಗೊಂಡ `ಆರ್‌ಬಿಐ'ನ ತ್ರೈಮಾಸಿಕ ಮಧ್ಯಂತರ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬ್ಯಾಂಕ್ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್‌ನ ಈ  ನಡೆ ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿದೆ.`ಜಿಡಿಪಿ' ದರ ಚೇತರಿಸಿಕೊಳ್ಳಲು ವಿತ್ತೀಯ ಮತ್ತು ಹಣಕಾಸು ನೀತಿಗಳು ಬೆಂಬಲ ನೀಡುವಂತಿರಬೇಕು.  ಸರ್ಕಾರ ಮತ್ತು ಆರ್‌ಬಿಐ ಅನುಸರಿಸುತ್ತಿರುವ ಧೋರಣೆ ಮಾತ್ರ ಪರಸ್ಪರ ವ್ಯತಿರಿಕ್ತವಾಗಿದೆ. ಒಂದೆಡೆ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದರೆ, ಇನ್ನೊಂದೆಡೆ ಆರ್‌ಬಿಐ ಹಣದುಬ್ಬರ ನಿಗ್ರಹವೇ ತನ್ನ ಸದ್ಯದ ಮೊದಲ ಆದ್ಯತೆ ಎಂದು ಹೇಳುತ್ತಿದೆ. ಸಾಮರಸ್ಯದ ಕೊರತೆ ಫಲವಾಗಿ ಅರ್ಥವ್ಯವಸ್ಥೆ ಬಡವಾಗುತ್ತಿರುವುದು ತಪ್ಪಬೇಕಾಗಿದೆ. ಮುಂಬರುವ ದಿನಗಳಲ್ಲಿ  ಅಭಿವೃದ್ಧಿಗೆ ಒತ್ತು ನೀಡುವುದಾಗಿ ಆರ್‌ಬಿಐ ತಿಳಿಸಿರುವುದು ಮಾತ್ರ ಸಕಾರಾತ್ಮಕ ಬೆಳವಣಿಗೆಯಾಗಿದೆ.ಹೂಡಿಕೆದಾರರ ಆತ್ಮವಿಶ್ವಾಸವನ್ನು ನಿರಂತರವಾಗಿ ಉತ್ತೇಜಿಸಲು ಇಂತಹ ಕ್ರಮ ಅನಿವಾರ್ಯವಾಗಿದೆ. ಕೈಗಾರಿಕಾ ವಲಯ ಮತ್ತು ಹಣಕಾಸು ಸಚಿವಾಲಯವು, ಬಡ್ಡಿದರ ಕಡಿತ ಮಾಡಬೇಕೆಂದು `ಆರ್‌ಬಿಐ' ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿವೆ. ಕಠಿಣ  ಹಣಕಾಸು ನೀತಿ ಸಡಿಲಿಕೆಯಿಂದ ಆರ್ಥಿಕ ಬೆಳವಣಿಗೆಗೆ ಪುನಶ್ಚೇತನ ದೊರೆಯಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಂಬರುವ ದಿನಗಳಲ್ಲಾದರೂ ಬಡ್ಡಿದರ ಕಡಿತಗೊಳ್ಳಲೇಬೇಕಾಗಿದೆ. ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಹಣದುಬ್ಬರ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ನಿರೀಕ್ಷೆಯೂ, ಆರ್‌ಬಿಐನ ಕಠಿಣ ಹಣಕಾಸು ನೀತಿ ಸಡಿಲಗೊಳ್ಳಲು ನೆರವಾಗಿ ಅಭಿವೃದ್ಧಿಯ ಚಕ್ರ ಇನ್ನಷ್ಟು ವೇಗವಾಗಿ  ತಿರುಗಲು ನೆರವಾಗಲಿದೆ ಎಂದು ಆಶಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry