ಆರ್ಥಿಕ ವೃದ್ಧಿ ಆಶಾದಾಯಕ: ರಾಜನ್

7
`ಪ್ರಗತಿಗೆ ಇನ್ನಷ್ಟು ಪ್ರಯತ್ನ ಅಗತ್ಯ'

ಆರ್ಥಿಕ ವೃದ್ಧಿ ಆಶಾದಾಯಕ: ರಾಜನ್

Published:
Updated:

ನವದೆಹಲಿ(ಪಿಟಿಐ): ದೇಶದ ಆರ್ಥಿಕ ವೃದ್ಧಿ ಸದ್ಯ ಸುಸ್ಥಿರತೆ ಹಾದಿಯಲ್ಲಿರುವಂತೆ ಗೋಚರಿಸುತ್ತಿದೆ. ಹಾಗಾಗಿ ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆದು ಆರ್ಥಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ರಘುರಾಮ್ ರಾಜನ್ ಹೇಳಿದ್ದಾರೆ.`ಸದ್ಯ ದೇಶದ ಆರ್ಥಿಕ ಪ್ರಗತಿ ಆಶಾದಾಯಕವಾಗಿದೆ. ಸರ್ಕಾರದ ಪ್ರತಿಯೊಂದು ಕ್ರಮವೂ ಇದನ್ನು ಇನ್ನಷ್ಟು ಸದೃಢಗೊಳಿಸುವಂತೆಯೇ ಇದೆ. ಅಕ್ಟೋಬರ್‌ನಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಕಂಡು ಬಂದಿರುವ ಶೇ 8.2ರಷ್ಟು ವೃದ್ಧಿಯೂ ಈ ಅಂಶವನ್ನು ಖಚಿತಪಡಿಸುತ್ತದೆ' ಎಂದು ಇಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.ಅಕ್ಟೋಬರ್‌ನಲ್ಲಿ ದಾಖಲಾಗಿರುವ ಕೈಗಾರಿಕಾ ಕ್ಷೇತ್ರದ ಶೇ 8.2ರಷ್ಟು ಪ್ರಗತಿಯು ಕಳೆದ 16 ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿದ್ದು, ಅಚ್ಚರಿ ಬೆಳವಣಿಗೆ ಎನಿಸಿದೆ. ಪ್ರಧಾನ ಸರಕುಗಳು(ಕ್ಯಾಪಿಟಲ್ ಗೂಡ್ಸ್), ಪರಿಕರಗಳ ತಯಾರಿಕೆ ವಲಯದ ಅತ್ಯುತ್ತಮ ಸಾಧನೆಯೇ ಈ ದಾಖಲೆ ವೃದ್ಧಿದರಕ್ಕೆ ಕಾರಣವಾಗಿದೆ.ವಿದೇಶಿ ಪ್ರಭಾವ

`ದೇಶದ ಆರ್ಥಿಕ ಪ್ರಗತಿಯು ಸದ್ಯ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿನ ಪರಿಸ್ಥಿತಿಗಳಿಂದ ಪ್ರಭಾವಿತವಾಗುತ್ತಿದೆ. ದೇಶೀಯ ಸಂಪನ್ಮೂಲ ವಲಯ ಮತ್ತು ಮಾರುಕಟ್ಟೆ ಫಲಿತಾಂಶಗಳೂ ಆರ್ಥಿಕ ಪ್ರಗತಿ ಮೇಲೆ ಹೆಚ್ಚಿನ ಪರಿಣಾಮ ಬೀರಬೇಕಾದ ಅಗತ್ಯವಿದೆ' ಎಂದು ರಾಜನ್ ಅಭಿಪ್ರಾಯಪಟ್ಟರು.ಯೂರೋಪ್‌ನಲ್ಲಿನ ಪರಿಸ್ಥಿತಿ ಭಾರತದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ಬಹಳ ಸ್ಪಷ್ಟ. ರಫ್ತು ವಹಿವಾಟು ದೇಶದ ಉತ್ಪಾದನೆಯ ಒಂದು ಭಾಗವೇ ಆಗಿದೆ. ಇತ್ತೀಚೆಗೆ ಆಗಿರುವಂತೆ ರಫ್ತು ಪ್ರಮಾಣ ತಗ್ಗಿದರೆ ಸಹಜವಾಗಿಯೇ ಆರ್ಥಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತದೆ ಎಂದರು.ಅಮೆರಿಕ ಮತ್ತು ಯೂರೋಪ್‌ನಲ್ಲಿನ ಮಂದಗತಿ ಪ್ರಗತಿ ಕಾರಣದಿಂದಾಗಿ ಅಲ್ಲಿನ ಮಾರುಕಟ್ಟೆಯಲ್ಲಿ ಭಾರತದ ಬಹಳಷ್ಟು ಸರಕುಗಳಿಗೆ ಬೇಡಿಕೆ ತಗ್ಗಿದೆ. ಇದರ ಫಲಶ್ರುತಿ ಎಂಬಂತೆ, ಏಳು ತಿಂಗಳಿನಿಂದಲೂ ಭಾರತದ ರಫ್ತು ಪ್ರಮಾಣ ಕುಸಿಯುತ್ತಲೇ ಇದೆ. ನವೆಂಬರ್‌ನಲ್ಲಿಯೂ ರಫ್ತು ಶೇ 4.17ಕ್ಕೆ ಇಳಿದಿದೆ.ಇದೆಲ್ಲದರ ಪ್ರತಿಧ್ವನಿ ಎಂಬಂತೆ, ಈ ಸಾಲಿನ ಪ್ರಥಮಾರ್ಧದಲ್ಲಿ ದೇಶದ ಒಟ್ಟಾರೆ ಉತ್ಪಾದನೆ(ಜಿಡಿಪಿ) ಪ್ರಮಾಣವೂ ಶೇ 5.4ಕ್ಕಿಳಿದಿದೆ. ಹಿಂದಿನ ವರ್ಷ ಶೇ 7.3ರಷ್ಟಿದ್ದಿತು ಎಂಬುದು ಉಲ್ಲೇಖಾರ್ಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry