ಆರ್ಥಿಕ ಸಂಕಷ್ಟದಲ್ಲಿ ಹಾನಗಲ್

7

ಆರ್ಥಿಕ ಸಂಕಷ್ಟದಲ್ಲಿ ಹಾನಗಲ್

Published:
Updated:

ಮುಂಬೈ (ಪಿಟಿಐ): ಅಮೋಘ ಅಭಿನಯದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಖ್ಯಾತ ಹಿರಿಯ ಚಿತ್ರನಟ ಎ.ಕೆ. ಹಾನಗಲ್ (95) ತಮ್ಮ ವೈದ್ಯಕೀಯ ವೆಚ್ಚವನ್ನೂ ಭರಿಸಲು ಸಾಧ್ಯವಾಗದ ಆರ್ಥಿಕ ದುಸ್ಥಿತಿಯಲ್ಲಿದ್ದಾರೆ. ಮುಂಬೈನ ಗ್ರಾಮವೊಂದರಲ್ಲಿ ತಮ್ಮ ಪುತ್ರ ಛಾಯಾಗ್ರಾಹಕ ವಿಜಯ್ (74) ಅವರೊಂದಿಗೆ ವಾಸವಿರುವ ಹಾನಗಲ್ ಇಳಿವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರ ಚಿಕಿತ್ಸೆಗೆ ತಿಂಗಳಿಗೆ 15 ಸಾವಿರ ರೂಪಾಯಿ ತಗಲುತ್ತದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅವರಿಗೆ ಈ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಾಗದೆ ಅವರು ಮನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ.‘ಔಷಧಗಳು ತುಂಬಾ ವೆಚ್ಚದಾಯಕವಾಗಿವೆ. ಪ್ರತಿ ತಿಂಗಳೂ ಅಧಿಕ ಹಣ ಖರ್ಚಾಗುತ್ತಿದೆ.ಇದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ನನಗೂ ಸಹ ವಯಸ್ಸಾಗಿದ್ದು, ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. 2009ರಲ್ಲಿ ಒಂದು ತಿಂಗಳವರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರ ಪುತ್ರ ವಿಜಯ್ ತಿಳಿಸಿದರು.‘ದಿನವಿಡೀ ಅವರು ಹಾಸಿಗೆ ಮೇಲೆಯೇ ಕಳೆಯಬೇಕಾಗಿದೆ. ಆದರೆ ಉರುಗೋಲುಗಳ ಸಹಾಯದಿಂದ ಸ್ನಾನದ ಕೋಣೆವರೆಗೆ ತೆರಳಬಲ್ಲರು. 24 ಗಂಟೆಯೂ ಅವರ ಸೇವೆಗಾಗಿ ಸಹಾಯಕರೊಬ್ಬರನ್ನು ನೇಮಿಸಲಾಗಿದೆ. ಆರೋಗ್ಯ ಕ್ಷೀಣಿಸಿದ್ದರಿಂದ ಕಳೆದ ಎಂಟು ವರ್ಷಗಳಿಂದ ಯಾವ ಕೆಲಸವನ್ನೂ ಮಾಡಲಾಗುತ್ತಿಲ್ಲ. ನಮ್ಮ ಉಳಿತಾಯದ ಹಣವೂ ಬಹುತೇಕ ಮುಗಿದುಹೋಗಿದೆ’ ಎಂದು ಅವರು ಹೇಳಿದರು.‘ಹಾನಗಲ್ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಅಶೋಕ್ ಚವಾಣ್ ಕಳೆದ ವರ್ಷ ರೂ 51 ಸಾವಿರ ನೀಡಿದ್ದರೆ, ಚಿತ್ರ ಮತ್ತು ಕಿರುತೆರೆ ಕಲಾವಿದರ ಸಂಘ 50 ಸಾವಿರ ಸಹಾಯ ಮಾಡಿದೆ. ಅಲ್ಲದೆ ಹಲವಾರು ಕಲಾವಿದರು ವೈಯಕ್ತಿಕವಾಗಿಯೂ ಸಹಾಯ ಹಸ್ತ ಚಾಚಿದ್ದಾರೆ’ ಎಂದರು. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಚಿತ್ರ ಘಟಕದ ಅಧ್ಯಕ್ಷ ಅಮೆಯ್ ಖೋಪ್ಕರ್ ಹಾನಗಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದು, ಅವರ ಮುಂದಿನ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸಲು ನಿರ್ಧರಿಸಿದ್ದಾರೆ.1917ರಲ್ಲಿ ಸಿಯಾಲ್‌ಕೋಟ್‌ನಲ್ಲಿ ಜನಿಸಿದ ಅವತಾರ್ ಕಿಶನ್ ಹಾನಗಲ್ ದೇಶ ವಿಭಜನೆ ನಂತರ ಪಾಕ್‌ನಿಂದ ಮುಂಬೈಗೆ ವಲಸೆಬಂದರು. ಬಲರಾಜ್ ಸಹಾನಿಮತ್ತು ಕೈಫಿ ಆಜ್ಮಿ ಅವರೊಂದಿಗೆ ಐಪಿಟಿಎ ರಂಗತಂಡದಲ್ಲಿ ತೊಡಗಿಸಿಕೊಂಡರು.50ನೇ ವಯಸ್ಸಿನಲ್ಲಿ ‘ತೀಸ್ರಿ ಕಸಮ್’ ಚಿತ್ರದ ಪಾತ್ರದೊಂದಿಗೆ ಹಿಂದಿಚಿತ್ರರಂಗಕ್ಕೆ ಪ್ರವೇಶಿಸಿದರು. ಜನಪ್ರಿಯ ‘ಶೋಲೆ’, ‘ಗುಡ್ಡಿ’ ಸೇರಿ 125ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry