ಮಂಗಳವಾರ, ಮೇ 24, 2022
31 °C

ಆರ್ಥಿಕ ಸಮೀಕ್ಷೆ ಒಳನೋಟ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2011-12ನೇ ಸಾಲಿನ ಬಜೆಟ್ ಮಂಡಿಸುವ ಮುನ್ನ ಸಂಸತ್‌ನಲ್ಲಿ ಕಳೆದ ವಾರ ಮಂಡಿಸಿದ ಆರ್ಥಿಕ ಸಮೀಕ್ಷೆಯು, ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕ ವೃದ್ಧಿ ದರದ (ಜಿಡಿಪಿ) ಬಗ್ಗೆ ಹುಮ್ಮಸ್ಸಿನ ಚಿತ್ರಣ ನೀಡಿದೆ.

ದೇಶದ ಅರ್ಥ ವ್ಯವಸ್ಥೆಯ ನೈಜ ಚಿತ್ರಣ ಮತ್ತು ಭವಿಷ್ಯದ ಮುನ್ನೋಟ ಒ

5ನೇ ಅತಿ ದೊಡ್ಡ ಆರ್ಥಿಕ ಶಕ್ತಿ
ಇದೇ ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆಯು, ಸರ್ಕಾರದ ವರಮಾನ, ವಿದೇಶಿ ಕರೆನ್ಸಿ ಮೀಸಲು ಸಂಗ್ರಹ, ಸರಕು, ಸೇವೆ, ಮಾನವ ಸಂಪನ್ಮೂಲದ ರಫ್ತು ಆಧರಿಸಿ  ಸರ್ಕಾರದ ‘ಆರ್ಥಿಕ ಶಕ್ತಿ’ ಅಳೆದಿದೆ. ಆ ಮಾನದಂಡದ ಪ್ರಕಾರ, ವಿಶ್ವದ ಆರ್ಥಿಕತೆಯಲ್ಲಿ ದೇಶದ ಸ್ಥಾನಮಾನವು 5ನೇ ಸ್ಥಾನಕ್ಕೆ ಏರಿದೆ. 2000ರಲ್ಲಿ 10ನೇ ಸ್ಥಾನದಲ್ಲಿತ್ತು. ಸರ್ಕಾರದ ಆರ್ಥಿಕ ಶಕ್ತಿಯ ಹೊಸ ಸೂಚ್ಯಂಕ ನಂಬಬಹುದಾದರೆ, ಭಾರತ ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಅಮೆರಿಕ, ಚೀನಾ, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಬರಲಿದ್ದು, ಬ್ರಿಟನ್ ಅಥವಾ ಫ್ರಾನ್ಸ್‌ಗಿಂತ ಮುನ್ನಡೆಯಲ್ಲಿ ಇರಲಿದೆ.

ದಗಿಸುವ ಸಮೀಕ್ಷೆಯ ಅಂಕಿ ಅಂಶಗಳನ್ನೆ ನಂಬಬಹುದಾದರೆ,  ಮುಂದಿನ ಹಣಕಾಸು ವರ್ಷದಲ್ಲಿ ’ಜಿಡಿಪಿ’ ವೃದ್ಧಿಯು ಪ್ರಸಕ್ತ ಸಾಲಿನ ಶೇ 8.6ರಷ್ಟು ಮೀರಿ ಶೇ 9ರಷ್ಟು ಹೆಚ್ಚಳ ದಾಖಲಿಸಲಿದೆ. ದೇಶದ ಅರ್ಥ ವ್ಯವಸ್ಥೆಯು  ಮೂಲಸೌಕರ್ಯಗಳ ಕೊರತೆ ಮತ್ತು ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಆಹಾರ ಧಾನ್ಯಗಳ ಪೂರೈಕೆ ಅಭಾವ, ಜಾಗತಿಕ ಅರ್ಥ ವ್ಯವಸ್ಥೆಯ ನಾಜೂಕಿನ ಪರಿಸ್ಥಿತಿ ಮತ್ತಿತರ ಪ್ರತಿಕೂಲತೆಗಳ ಮಧ್ಯೆಯೂ ಈ ಮಟ್ಟದ ವೃದ್ಧಿ ದಾಖಲಿಸಲಿರುವುದು ಮಹತ್ವದ ವಿದ್ಯಮಾನ ಎನ್ನುವುದರಲ್ಲಿ ಸಂದೇಹವೇ ಇಲ್ಲ.

 ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಶೇ 57.3ರಷ್ಟು ಪಾಲು ಹೊಂದಿರುವ ಸೇವಾ ರಂಗವು ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವ ಮುಖ್ಯ ಎಂಜಿನ್ ಆಗಿದೆ ಎಂದು ಬೊಟ್ಟು ಮಾಡಿರುವ ಸಮೀಕ್ಷೆಯು, ಅರ್ಥ ವ್ಯವಸ್ಥೆಯಲ್ಲಿ ಸದ್ಯಕ್ಕೆ ಎಲ್ಲ ವಲಯಗಳೂ  ಹಿತಕರವಾಗಿವೆ ಎನ್ನುವ ಅರ್ಥಧ್ವನಿಸುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಅವಶ್ಯಕ ಸರಕುಗಳ ಬೆಲೆಗಳು ಕಳವಳಕ್ಕೆ ಎಡೆ ಮಾಡಿಕೊಟ್ಟಿದ್ದು, ಬೆಲೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂಬರುವ ದಿನಗಳಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಬೆಲೆ ಏರಿಕೆಗೆ ಪೂರೈಕೆ ಕೊರತೆ, ಬೇಡಿಕೆ ಹೆಚ್ಚಳ, ಅಂತರರಾಷ್ಟ್ರೀಯ ವಿದ್ಯಮಾನಗಳು ಕಾರಣ ಎಂದು  ಸಮೀಕ್ಷೆಯಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ.

ಭವಿಷ್ಯದಲ್ಲಿನ ಅಭಿವೃದ್ಧಿಗೆ ಸದ್ಯಕ್ಕೆ ಮೂಲ ಸೌಕರ್ಯ ರಂಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲಾಗುತ್ತಿರುವುದು ಕಾರಣ ಎಂದು ತಿಳಿಸಲಾಗಿದ್ದರೂ, ಬಹುತೇಕ ಯೋಜನೆಗಳು ಆಮೆನಡಿಗೆಯಲ್ಲಿ ನಡೆಯುತ್ತಿದ್ದು, ಮೂಲ ಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಭೂ ಸ್ವಾಧೀನ ಮತ್ತು ಪರಿಸರ ಸಚಿವಾಲಯದ ಅನುಮತಿ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ಉಳಿತಾಯ ದರ  ಶೇ 33ಕ್ಕಿಂತ ಹೆಚ್ಚಿಗೆ ಮತ್ತು ಬಂಡವಾಳ ಹೂಡಿಕೆ ದರ  ಶೇ 36.5ರಷ್ಟು ಇರುವ ಹಿನ್ನೆಲೆಯಲ್ಲಿ ದೇಶದ ಅರ್ಥ ವ್ಯವಸ್ಥೆಯ ಭವಿಷ್ಯ   ತುಂಬ ಪ್ರಖರವಾಗಿರಲಿದೆ ಎಂದು ನಂಬಲು ಸಾಕಷ್ಟು ಕಾರಣಗಳಿವೆ.

 

ಸಬ್ಸಿಡಿ ದುರ್ಬಳಕೆಗೆ ಕಡಿವಾಣ

ಹಲವಾರು ಸರಕು ಮತ್ತು ಸೇವೆಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಗಳಿಂದ (ರಿಯಾಯ್ತಿ) ಭಾರಿ ಪ್ರಮಾಣದ ಹಣ ಸೋರಿಕೆಯಾಗುತ್ತಿದ್ದು, ಉದ್ದೇಶ ವ್ಯರ್ಥವಾಗುತ್ತಿರುವುದರತ್ತ ಸಮೀಕ್ಷೆಯಲ್ಲಿ  ಗಮನ ಸೆಳೆಯಲಾಗಿದೆ. ಈ ಸಮಸ್ಯೆಗೆ ಸೂಚಿಸಿರುವ  ಪರಿಹಾರ ಸೂತ್ರವನ್ನು ಗಂಭೀರವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾದರೆ ಸಬ್ಸಿಡಿ ನೀಡುವ ಉದ್ದೇಶಕ್ಕೆ ಖಂಡಿತವಾಗಿಯೂ ಹೊಸ ಅರ್ಥ ಬರಲಿದೆ.

ಸೀಮೆಎಣ್ಣೆ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ಮೂಲಕ ನಗದು ಸಬ್ಸಿಡಿ ನೀಡಲು ಮತ್ತು ಸೀಮೆಎಣ್ಣೆ ಬೆಲೆಗಳನ್ನು ನಿಯಂತ್ರಣ ಮುಕ್ತಗೊಳಿಸುವ ಸಲಹೆಗಳು ಸಬ್ಸಿಡಿ ಸೋರಿಕೆ ಮತ್ತು ಸೀಮೆಎಣ್ಣೆ ಕಲಬೆರಕೆ ತಡೆಯಲು ಸಾಧ್ಯವಾದಿತು ಎಂದು ಆಶಿಸಲಾಗಿದೆ. ಅಗತ್ಯ ಇರುವವರಿಗೆ ನೇರವಾಗಿ ಹಣ ವಿತರಿಸುವ ಹೊಸ ವಿಧಾನ ಅಳವಡಿಕೆ ಸಲಹೆ ಜಾರಿಗೆ ತರಲು ಪ್ರಾಮಾಣಿಕವಾಗಿ ಮನಸ್ಸು ಮಾಡುವುದೇ? ಕಾದು ನೋಡಬೇಕು.

ಬಂಡವಾಳ ಹೂಡಿಕೆ ಪ್ರಮಾಣವು ಇನ್ನೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮುಂಚಿನ ದಿನಗಳಿಗೆ ಮರಳಿಲ್ಲ. ಹಣದುಬ್ಬರ ಗರಿಷ್ಠ ಪ್ರಮಾಣದಲ್ಲಿ ಇದೆ. ಕೃಷಿ ರಂಗದ ಬೆಳವಣಿಗೆ ಇನ್ನೂ ಏರಿಳಿತದಿಂದಲೇ ಕೂಡಿದೆ. ಆಟೊಮೊಬೈಲ್ ರಂಗ ಹೊರತುಪಡಿಸಿ ಇತರ ಕೈಗಾರಿಕೆ ಮತ್ತು ಮೂಲಸೌಕರ್ಯ ರಂಗದ ಬೆಳವಣಿಗೆಯೂ ಏರಿಳಿತದಿಂದ ಕೂಡಿದೆ. ಉಳಿತಾಯ ಮತ್ತು ಬಂಡವಾಳ ಹೂಡಿಕೆ ಯ ಅಂತರವೂ ಹೆಚ್ಚಿಗೆ ಇದೆ.

ಬಂಡವಾಳದ ಚಲನವಲನಕ್ಕೆ ಹೊರತಾದ ವಿದೇಶಿ ವಿನಿಮಯದ ಒಳ ಹರಿವು ಮತ್ತು ಹೊರ ಹರಿವಿನ ಮಧ್ಯೆ ಇರುವ ವ್ಯತ್ಯಾಸವು ಮತ್ತು ಸರಕು, ಸೇವೆಗಳ ವಿದೇಶ ವ್ಯಾಪಾರದಲ್ಲಿನ ವ್ಯತ್ಯಾಸ ಒಳಗೊಂಡಿರುವ  ಚಾಲ್ತಿ ಖಾತೆ ಕೊರತೆಯು ಐತಿಹಾಸಿಕವಾಗಿ ಗರಿಷ್ಠ ಪ್ರಮಾಣದಲ್ಲಿ ಇದೆ. ಆರು ಪ್ರಮುಖ ವಲಯಗಳ ಬೆಳವಣಿಗೆಯೂ ದುರ್ಬಲವಾಗಿದೆ. ಈ ಎಲ್ಲ ಸಮಸ್ಯೆಗಳ ಹೊರತಾಗಿಯೂ, ಅರ್ಥ ವ್ಯವಸ್ಥೆಯು ಶೇ 9ರಷ್ಟು ವೃದ್ಧಿಯಾಗುವುದು ಎಂದು ಆರ್ಥಿಕ ಸಮೀಕ್ಷೆಯು ಹೊಸ ಭರವಸೆ ಮೂಡಿಸಿದೆ.

ಮೇಲೆ ಉಲ್ಲೇಖಿಸಿರುವ ಪ್ರತಿಕೂಲ ಬೆಳವಣಿಗೆಗಳ ಕಾರಣಕ್ಕೇನೆ, ಈ ಪರಿ ಬೆಳವಣಿಗೆ ಸಾಧ್ಯವೇ? ಎನ್ನುವುದು ಆರ್ಥಿಕ ಪರಿಣತರ ಅನುಮಾನವಾಗಿದೆ.

ಈ ಪ್ರಮಾಣದ ಆರ್ಥಿಕ ಬೆಳವಣಿಗೆ ದರ ಸಾಧಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ. ಕಳೆದ ನಾಲ್ಕು ತಿಂಗಳಲ್ಲಿನ ವಿದ್ಯಮಾನಗಳು ಇಡೀ ಜಾಗತಿಕ ಪರಿಸ್ಥಿತಿಯ ಚಿತ್ರಣವನ್ನೇ ಬದಲಾಯಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬಿಕ್ಕಟ್ಟು ದೇಶಿ ಆರ್ಥಿಕತೆಗೆ ದೊಡ್ಡ ಸವಾಲು ಒಡ್ಡಲಿದೆ ಎನ್ನುವುದನ್ನೂ ನಾವಿಲ್ಲಿ ನಿರ್ಲಕ್ಷಿಸುವಂತಿಲ್ಲ.

ಸಮೀಕ್ಷೆಯು ಮೂರು ಆರ್ಥಿಕ ಮುಖ್ಯ ಬೆಳವಣಿಗೆಗಳನ್ನು ಬಹುವಾಗಿ ನಿರೀಕ್ಷಿಸಿದೆ. ಅಪೇಕ್ಷಿತವಲ್ಲದ ಹಣದುಬ್ಬರದ ಕಟ್ಟುನಿಟ್ಟಿನ ನಿಯಂತ್ರಣ, ಬಡವರ ಆದಾಯ ಹೆಚ್ಚಳದ ಮೂಲಕ  ಬೇಡಿಕೆ ಏರಿಕೆ ಮತ್ತು ಆರ್ಥಿಕ ಸೇರ್ಪಡೆ ಮೂಲಕ ಉಳಿತಾಯದ ಹಣ ಚಲಾವಣೆಗೆ ತರುವುದು. ಈ ನಿಟ್ಟಿನಲ್ಲಿ  ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಆಧಾರದ ಮೇಲೆ ಆರ್ಥಿಕ ಪ್ರಗತಿಯ ಚಕ್ರ ಉರುಳಲಿದೆ.ಶೇ 9ರಷ್ಟು ಆರ್ಥಿಕ ವೃದ್ಧಿ ಸಾಧ್ಯವಾಗಲು ಉಳಿತಾಯ ಮತ್ತು ಹೂಡಿಕೆಯಲ್ಲಿನ ಸುಸ್ಥಿರ ಹೆಚ್ಚಳ, ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು, ಸೇವೆ, ಹಣಕಾಸು, ವಿಮೆ, ರಿಯಲ್ ಎಸ್ಟೇಟ್, ಸಾರಿಗೆ ಮತ್ತು ಸಂಪರ್ಕ ರಂಗದಲ್ಲಿ ಗರಿಷ್ಠ ಬೆಳವಣಿಗೆಯ ಸಾಧ್ಯತೆಗಳು ಇವೆ.  ಕೈಗಾರಿಕಾ ಉತ್ಪಾದನೆ ಕುಸಿತವು ತಾತ್ಕಾಲಿಕ ಅಡಚಣೆಗಳಷ್ಟೆ, ಅವು ದೀರ್ಘಕಾಲದ ಸಮಸ್ಯೆಗಳಲ್ಲ.

ಮುಕ್ತ ವ್ಯಾಪಾರ ನಿರ್ಬಂಧಿಸುವ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ (ಎಪಿಎಂಸಿ), ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಸಬ್ಸಿಡಿಗಳನ್ನು ನೇರವಾಗಿ ಪಾವತಿಸಿ ಭ್ರಷ್ಟಾಚಾರ ನಿಯಂತ್ರಿಸುವ ಸುಧಾರಣಾ ಕ್ರಮಗಳನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.ಒಟ್ಟಾರೆ ಆರ್ಥಿಕ ಸಮೀಕ್ಷೆಯು ದೇಶದ ಅರ್ಥ ವ್ಯವಸ್ಥೆಯ ಭವಿಷ್ಯದ ಮುನ್ನೋಟದ ಬಗ್ಗೆ ಗಮನಾರ್ಹವಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರೂ ಆಂತರಿಕ ಮತ್ತು ಬಾಹ್ಯ ವಿದ್ಯಮಾನಗಳು ಬೀರಬಹುದಾದ ಪ್ರಭಾವವನ್ನು  ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲಿಕ್ಕಾಗದು.          

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.