ಮಂಗಳವಾರ, ಮೇ 17, 2022
25 °C

ಆರ್ಥಿಕ ಸ್ಥಿತಿ ಗಂಭೀರ:ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ(2012-13) ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಕೈಗಾರಿಕೆ ಪ್ರಗತಿಯು ತೀವ್ರ ಇಳಿಕೆ ಕಾಣಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹೇಳಿವೆ.ಕೇಂದ್ರ ತ್ವರಿತ ಮತ್ತು ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಗರಿಷ್ಠ ಮಟ್ಟದ ಆರ್ಥಿಕ ತಲ್ಲಣಗಳನ್ನು ಎದುರಿಸೇಕಾಗಿ ಬರುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.ಇವೆರಡೂ ಸಂಸ್ಥೆಗಳು ಇತ್ತೀಚೆಗೆ ದೇಶದ ಉದ್ಯಮ ಕ್ಷೇತ್ರದಲ್ಲಿನ ವಿಶ್ವಾಸದ ಕುರಿತು ಸಮೀಕ್ಷೆ ನಡೆಸಿದ್ದವು. `ಸಿಐಐ~ ಕೇವಲ ಕೈಗಾರಿಕಾ ಪ್ರಗತಿ ಕುರಿತು ಅಧ್ಯಯನ ನಡೆಸಿದ್ದರೆ, `ಅಸೋಚಾಂ~ ಇಡೀ ಅರ್ಥ ವ್ಯವಸ್ಥೆಯ ಕುರಿತು ಅಭಿಪ್ರಾಯ ಸಂಗ್ರಹಿಸಿತ್ತು.ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) 9 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದು ಕಳವಳಕಾರಿ ಸಂಗತಿ. ರೂಪಾಯಿ ಅಪಮೌಲ್ಯದಿಂದ ಇತರೆ ಅನೇಕ ಸಮಸ್ಯೆಗಳು ಸೃಷ್ಟಿಯಾಗಿವೆ. ದೇಶೀಯ ಮಟ್ಟದಲ್ಲಿ ಗರಿಷ್ಠ ಬಡ್ಡಿ ದರ, ಹಣದುಬ್ಬರ ಒತ್ತಡ ಇತ್ಯಾದಿ ಸಂಗತಿಗಳು ಆರ್ಥಿಕ ಪ್ರಗತಿಗೆ ಹಿನ್ನಡೆ ತಂದಿವೆ ಎಂದು ಹೇಳಿವೆ.ಮಾರ್ಚ್‌ನಲ್ಲಿನ ಕೈಗಾರಿಕೆ ಪ್ರಗತಿಯು ಐದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶೇ 3.5ಕ್ಕೆ ಕುಸಿತ ಕಂಡಿದೆ. `ಸಿಐಐ~ ಸಮೀಕ್ಷೆಯಲ್ಲಿ ಭಾಗವಹಿಸಿದ 114 ರಂಗಗಳಿಗೆ ಸೇರಿದ 35 ಸಾವಿರಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ವೃದ್ಧಿ ದರ ಕುಸಿಯಲು ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಬಡ್ಡಿದರ ಹೆಚ್ಚಳವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.ಕಳೆದ 6 ತಿಂಗಳಿಂದ ಉದ್ಯಮ ವಲಯ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ, ಸದ್ಯದ ಪರಿಸ್ಥಿತಿ ಗಮನಿಸಿದರೆ ಇನ್ನೂ 3-4 ತಿಂಗಳವರೆಗೆ ಪರಿಸ್ಥಿತಿ ಸುಧಾರಿಸುವ ಸೂಚನೆಗಳಿಲ್ಲ. ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮಾರುಕಟ್ಟೆಗೆ ರಫ್ತು ವಹಿವಾಟು ಹೊರತುಪಡಿಸಿದರೆ ಉಳಿದ ಕಡೆಗಳಿಂದ ಬೇಡಿಕೆ ತೀವ್ರವಾಗಿ ಕುಸಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.ದೇಶದ ಒಟ್ಟಾರೆ `ಜಿಡಿಪಿ~ಗೆ ಕೃಷಿ ವಲಯದ ಕೊಡುಗೆ ಶೇ 20ಕ್ಕಿಂತಲೂ ಕಡಿಮೆ ಇದೆ.ಶೇ 60ರಿಂದ 70ರಷ್ಟು ಜನ ಕೃಷಿಯಲ್ಲೇ ತೊಡಗಿಸಿಕೊಂಡಿದ್ದರೂ ಪರಿಸ್ಥಿತಿ ಹೀಗೇ ಇದೆ ಎಂದು `ಅಸೋಚಾಂ~ ಕಾರ್ಯದರ್ಶಿ ರಾಜ್‌ಕುಮಾರ್ ದೂತ್ ಹೇಳಿದ್ದಾರೆ.12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ (2012-17) ದೇಶದ ವಾರ್ಷಿಕ ಸರಾಸರಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8ರಷ್ಟು ಇರಲಿದೆ ಎಂದು ಕೇಂದ್ರ ಯೋಜನಾ ಆಯೋಗ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.