ಆರ್ಮಿ ಗ್ರೀನ್‌ಗೆ ಎರಡನೇ ಗೆಲುವು

7

ಆರ್ಮಿ ಗ್ರೀನ್‌ಗೆ ಎರಡನೇ ಗೆಲುವು

Published:
Updated:

ಬೆಂಗಳೂರು: ಐದು ನಿಮಿಷದ ಅಂತರದಲ್ಲಿ ಮೂರು ಗೋಲು ಕಲೆ ಹಾಕಿದ ಆರ್ಮಿ ಗ್ರೀನ್ ತಂಡದವರು ಕೊಡವ ಸಮಾಜ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ 15ನೇ ವರ್ಷದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಹಾಕಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್ಮಿ 3-0ಗೋಲುಗಳಿಂದ ಎಎಸ್‌ಸಿ ಎದುರು ಜಯಿಸಿತು.ಬಿನೋಯ್ 50ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಇದಾದ ಎರಡು ನಿಮಿಷಗಳ ನಂತರ ಇದೇ ಆಟಗಾರ ಮತ್ತೊಂದು ಗೋಲು ತಂದಿಟ್ಟರು. ನಂತರ ಬಿರ್ಸು 55ನೇ ನಿಮಿಷದಲ್ಲಿ ಗೋಲು ಕಲೆ ಹಾಕಿ ಆರ್ಮಿ ಗೆಲುವಿಗೆ ಕಾರಣರಾದರು. ಈ ತಂಡ ಮೊದಲ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್ ತಂಡವನ್ನು ಮಣಿಸಿತ್ತು.ಕೆನರಾ ಬ್ಯಾಂಕ್ 3-2ಗೋಲುಗಳಿಂದ ಪಿಸಿಟಿಸಿ ತಂಡದ ಎದುರು ಕಷ್ಟಪಟ್ಟು ಗೆಲುವು ಸಾಧಿಸಿತು. ವಿಜಯಿ ತಂಡದ ಸುನಿಲ್ ಬೆಂಜಮಿನ್ (5 ಹಾಗೂ 16ನೇ ನಿಮಿಷ), ಮುದ್ದಪ್ಪ (28ನೇ ನಿ) ಗೋಲು ತಂದಿಟ್ಟರು.

 ಪಿಸಿಟಿಸಿ ತಂಡದ ಕೆ. ಅನೂಪ್ ಹಾಗೂ ರಾಜೇಶ್ ಕ್ರಮವಾಗಿ 14 ಮತ್ತು 43ನೇ ನಿಮಿಷದಲ್ಲಿ ಗೋಲು ಗಳಿಸಿ ಪೈಪೋಟಿ ಒಡ್ಡಿದರು. ವಿಜಯಿ ತಂಡ ವಿರಾಮದ ವೇಳೆಗೆ 3-2ರಲ್ಲಿ ಮುನ್ನಡೆ ಹೊಂದಿತ್ತು. ದ್ವಿತೀಯಾರ್ಧದಲ್ಲಿ ಒಂದು ಗೋಲು ಕಲೆ ಹಾಕಿದ ಪಿಸಿಟಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.ಕೆಎಸ್‌ಪಿಗೆ ಮಣಿದ ಬಿಇಎಂಎಲ್: ಏಕಪಕ್ಷೀಯವಾಗಿ ಕೊನೆಗೊಂಡ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) 5-0ಗೋಲುಗಳಿಂದ ಬೆಂಗಳೂರಿನ ಬಿಇಎಂಎಲ್ ಎದುರು ವಿಜಯ ಪಡೆಯಿತು.

ಚೇತನ್ ಕುಮಾರ್ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದೇ ಆಟಗಾರ 19ನೇ ನಿಮಿಷದಲ್ಲಿ ಇನ್ನೊಂದು ಗೋಲು ತಂದಿಟ್ಟರು. ಮಹೇಶ್ (32ನೇ ನಿ.), ಪ್ರದೀಪ್ (38 ಮತ್ತು 55ನೇ ನಿ) ಚೆಂಡನ್ನು ಗುರಿ ಸೇರಿಸಿ ಗೆಲುವಿನ ನಗೆ ಬೀರಿದರು. ಭಾನುವಾರ ಪಂದ್ಯಗಳು ನಡೆಯುವುದಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry