ಶನಿವಾರ, ಡಿಸೆಂಬರ್ 7, 2019
25 °C

ಆರ್‌ಎಸ್‌ಎಸ್‌ನಿಂದ ಬೃಹತ್ ಪಥಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಎಸ್‌ಎಸ್‌ನಿಂದ ಬೃಹತ್ ಪಥಸಂಚಲನ

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ  (ಆರ್‌ಎಸ್‌ಎಸ್) ಏರ್ಪಡಿಸಿರುವ `ಹಿಂದೂ ಶಕ್ತಿ ಸಂಗಮ~ ಶಿಬಿರದ ಅಂಗವಾಗಿ ಅವಳಿನಗರದಲ್ಲಿ ಶನಿವಾರ ಬೃಹತ್ ಪಥಸಂಚಲನ ನಡೆಯಿತು. 25,000ಕ್ಕೂ ಅಧಿಕ ಸ್ವಯಂಸೇವಕರು ಗಣವೇಷಧಾರಿಗಳಾಗಿ ಪಾಲ್ಗೊಂಡು ಗಮನಸೆಳೆದರು.ಹುಬ್ಬಳ್ಳಿಯಲ್ಲಿ ಮೂರು ಕಡೆಗಳಿಂದ ಆರಂಭವಾದ ಪಥಸಂಚಲನ, ನಗರದ ಹೃದಯ ಭಾಗವಾದ ಕಿತ್ತೂರು ಚನ್ನಮ್ಮ ಸರ್ಕಲ್‌ನಲ್ಲಿ ಒಂದಾಯಿತು. ಹನ್ನೆರಡು ಸಾಲುಗಳಲ್ಲಿ ಶಿಸ್ತುಬದ್ಧವಾಗಿ ನಡೆದ ಸ್ವಯಂಸೇವಕರು, ಕಿಕ್ಕಿರಿದು ಸೇರಿದ್ದ ಜನರಲ್ಲಿ ಅಭಿಮಾನ ಉಕ್ಕುವಂತೆ ಮಾಡಿದರು. ಘೋಷ ವಾದ್ಯದ ನಡುವೆ ನೆಹರೂ ಮೈದಾನ ತಲುಪುವ ಮೂಲಕ ಪಥ ಸಂಚಲನ ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ರಾಷ್ಟ್ರ ಹಾಗೂ ಹಿಂದೂ ಪರ ಘೋಷಣೆಗಳು ಮೊಳಗಿದವು.ಧಾರವಾಡದಲ್ಲಿ ಕೆ.ಇ.ಬೋರ್ಡ್ಸ್ ಶಾಲಾ ಮೈದಾನದಿಂದ ಆರ್.ಎನ್. ಶೆಟ್ಟಿ ಕ್ರೀಡಾಂಗಣದವರೆಗೆ ಪಥ ಸಂಚಲನ ನಡೆಯಿತು. ಸುಮಾರು ಐದು ಸಾವಿರ ಸ್ವಯಂಸೇವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಪಥಸಂಚಲನದಲ್ಲಿ ಪ್ರತಿಯೊಂದು ಗುಂಪು ಸರಾಸರಿ 4.5 ಕಿ.ಮೀ. ದೂರ ಕ್ರಮಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ವಯಂಸೇವಕರನ್ನು ಹಲವು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪನ್ನು ಘೋಷ ವಾದ್ಯಕರ ತಂಡ ಮುನ್ನಡೆಸುತ್ತಿತ್ತು. ಪಥಸಂಚಲನದ ನಾಲ್ಕೂ ಬದಿ ಪೊಲೀಸರ ಬೆಂಗಾವಲಿತ್ತು. ಪಥ ಸಂಚಲನ ಶಾಂತವಾಗಿ ಮುಕ್ತಾಯವಾಯಿತು.ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ, ಬಿಹಾರದ ಮಾಜಿ ರಾಜ್ಯಪಾಲ ನ್ಯಾ. ರಾಮಾ ಜೋಯಿಸ್, ದಕ್ಷಿಣ-ಮಧ್ಯ ಪ್ರಾಂತದ ಸಂಚಾಲಕ ನ್ಯಾ. ಪರ್ವತರಾವ್, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಅನಂತಕುಮಾರ್ ಸೇರಿ ಲಕ್ಷಾಂತರ ಜನ ಪಥಸಂಚಲನಕ್ಕೆ ಸಾಕ್ಷಿಯಾದರು.

 

ಪ್ರತಿಕ್ರಿಯಿಸಿ (+)