ಗುರುವಾರ , ಜೂನ್ 24, 2021
28 °C
ಚುನಾವಣಾ ಚುಟುಕು

ಆರ್‌ಜೆಡಿಯಲ್ಲಿ ಮತ್ತೆ ಬಂಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಐಎಎನ್‌ಎಸ್‌): ಲೋಕಸಭೆ ಚುನಾವಣೆಯಲ್ಲಿ ಪುತ್ರಿಗೆ ಟಿಕೆಟ್‌ ನೀಡಿರುವ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಕ್ರಮಕ್ಕೆ ಅವರದೇ ಪಕ್ಷದ ಹಿರಿಯ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಲಾಲು ಅವರ ನಿಕಟವರ್ತಿಯಾಗಿರುವ ರಾಜ್ಯಸಭೆ ಸದಸ್ಯ, ಆರ್‌ಜೆಡಿಯ ಹಿರಿಯ ಮುಖಂಡ ರಾಮಕೀರ್ಪಾಲ್‌ ಯಾದವ್‌ ಅವರು ಪಾಟಲೀಪುತ್ರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಆದರೆ, ಗುರುವಾರ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಲಾಲು ಅವರ ಪುತ್ರಿ ಮೀಸಾ ಭಾರತಿ ಅವರು ಪಾಟಲೀಪುತ್ರದ ಅಭ್ಯರ್ಥಿ­ಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ರಾಮ­ಕೀರ್ಪಾಲ್‌ ಮುನಿಸಿಕೊಂಡು ಪಕ್ಷ ತೊರೆಯಲು ಮುಂದಾಗಿ­ದ್ದಾರೆ. ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಮೂಲ­ಗಳು ತಿಳಿಸಿವೆ. ಇನ್ನೂ ಕೆಲ ನಾಯಕರು ರಾಮಕೀರ್ಪಾಲ್‌ ಅವರ ಹಾದಿ ತುಳಿಯಲಿದ್ದಾರೆ ಎನ್ನಲಾಗಿದೆ.ಕೇಜ್ರಿವಾಲ್‌ ಬಂಧನಕ್ಕೆ ತಕ್ಷಣದ ಪ್ರತಿಕ್ರಿಯೆ

ನವದೆಹಲಿ (ಪಿಟಿಐ):
ಬಿಜೆಪಿ ಕಚೇರಿ ಎದುರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ‘ಆಮ್‌ ಆದ್ಮಿ’ ಪಕ್ಷಕ್ಕೆ (ಎಎಪಿ) ಜಿಲ್ಲಾ ಚುನಾವಣಾಧಿಕಾರಿ ನೀಡಿದ್ದ ಕಾರಣ ಕೇಳಿ ನೋಟಿಸ್‌ಗೆ ಎಎಪಿ ಶುಕ್ರವಾರ ಉತ್ತರಿಸಿದೆ.

‘ಗುಜರಾತ್‌ನಲ್ಲಿ ಅರವಿಂದ ಕೇಜ್ರಿವಾಲ್‌ ಅವರ ಬಂಧನಕ್ಕೆ ಪ್ರತಿಯಾಗಿ ತತ್‌ಕ್ಷಣಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅದಾಗಿತ್ತು’ ಎಂದು ವಿವರಣೆ ನೀಡಿದೆ.ಒಡಿಶಾ: ಬಿಜೆಡಿ– ಜೆಎಂಎಂ ಮೈತ್ರಿ

ಭುವನೇಶ್ವರ (ಐಎಎನ್‌ಎಸ್):
ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಜತೆ ಸೀಟು ಹಂಚಿಕೆ ಮಾತುಕತೆ ನಡೆಸುತ್ತೇವೆ ಎಂದು ಬಿಜು ಜನತಾದಳ (ಬಿಜೆಡಿ) ಹೇಳಿದೆ.‘ಸದ್ಯ ಜೆಎಂಎಂ ಪ್ರಾಬಲ್ಯವಿರುವ ಮಯೂರ್‌ಭಂಜ್‌ ಹಾಗೂ ಸುಂದರಗಡ ಜಿಲ್ಲೆಗಳಲ್ಲಿ  ಮಾತ್ರ ಸೀಟು ಹಂಚಿಕೆ ಮಾಡಿಕೊಳ್ಳಲಿದ್ದೇವೆ. ಈ ಕುರಿತು ಚರ್ಚೆ ನಡೆಯುತ್ತಿದೆ’ ಎಂದು ಬಿಜೆಡಿ ಮುಖಂಡ ಹಾಗೂ ಪಂಚಾಯತಿ ರಾಜ್‌ ಸಚಿವ ಕಲ್ಪತರು ದಾಸ್‌ ಅವರು ಶುಕ್ರವಾರ ತಿಳಿಸಿದ್ದಾರೆ.ರಾಜ್ಯದ 21 ಲೋಕಸಭೆ ಹಾಗೂ 147 ವಿಧಾನಸಭೆ ಕ್ಷೇತ್ರಗಳಿಗೆ ಏ. 10,17ರಂದು ಮತದಾನ ನಡೆಯಲಿದೆ.ಸಿಪಿಎಂ, ಸಿಪಿಐಗೆ ಡಿಪಿಎ ಆಹ್ವಾನ

ಚೆನ್ನೈ (ಪಿಟಿಐ):
ಸೀಟು ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ, ಎಐಎಡಿಎಂಕೆ ಮೈತ್ರಿಯಿಂದ ಗುರುವಾರ ಹೊರ ನಡೆದ ಸಿಪಿಐ ಮತ್ತು ಸಿಪಿಎಂ ಪಕ್ಷ­ಗ­ಳನ್ನು ಡಿಎಂಕೆ ಜೊತೆ ಮೈತ್ರಿ ಮಾಡುವಂತೆ ಓಲೈಸಲಾಗು­ತ್ತಿದೆ.ಡಿಎಂಕೆ ಮುಂದಾಳತ್ವದ ಡೆಮಾಕ್ರಟಿಕ್‌ ಪ್ರೊಗ್ರೆಸಿವ್‌ ಅಲಯನ್ಸ್‌ನಲ್ಲಿ (ಡಿಪಿಎ) ಸೇರುವಂತೆ ಡಿಕೆ (ದ್ರಾವಿಡರ್‌ ಕಳಗಂ) ಮುಖಂಡ ಕೆ.ವೀರಮಣಿ ಅವರು ಈ ಎರಡು ಎಡ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.‘ಮಿತ್ರ ಪಕ್ಷಗಳಿಗೆ ಮನ್ನಣೆ ನೀಡದೇ ಐದು ವರ್ಷಗಳ ಮೈತ್ರಿಗೆ ಎಐಎಡಿಎಂಕೆ ಅವಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಮತ್ತು ಸಿಪಿಐ ಏಕಾಂಗಿಯಾಗಿ ಚುನಾವಣೆ ಎದುರಿಸುವುದಕ್ಕಿಂತ, ಸಮಾನ ಸಿದ್ಧಾಂತ ಹೊಂದಿರುವ ಪಕ್ಷಗಳೊಂದಿಗೆ ಸೇರಿ ಮುನ್ನಡೆಯುವುದು ಒಳಿತು’ ಎಂದು ವೀರಮಣಿ ಅವರು ಆಹ್ವಾನ ನೀಡಿದರು.ವಾರಾಣಸಿಯಿಂದ ಮೋದಿ: ಅಭಿಯಾನ

ಲಖನೌ (ಐಎಎನ್‌ಎಸ್‌):
ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿ, ಪಕ್ಷದ ಕಾರ್ಯಕರ್ತರು ಶುಕ್ರವಾರ ಸಹಿ ಸಂಗ್ರಹಣಾ ಅಭಿಯಾನ ಆರಂಭಿಸಿದ್ದಾರೆ.ಇಲ್ಲಿನ ಗಡೌಲಿಯಾ ಪ್ರದೇಶದಲ್ಲಿ ಬೃಹತ್ ಫಲಕಗಳು ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ‘ಮೋದಿ ಸೇನೆ’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.