ಭಾನುವಾರ, ಏಪ್ರಿಲ್ 18, 2021
33 °C

ಆರ್‌ಟಿಇ: ಅಧಿಸೂಚನೆ ರದ್ದತಿಗೆ ಕೋರಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಸಿಕ 30ಸಾವಿರ ರೂಪಾಯಿಗಳ ಆದಾಯ ಇರುವವರನ್ನೂ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಸೇರಿಸಿ ಕಳೆದ ಮೇ 8ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯ ರದ್ದತಿ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.ಕೆ.ನಾಗೇಶ್ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.ಕಡುಬಡ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಹಿಂದುಳಿದ ವರ್ಗದವರನ್ನು ಹೊರತುಪಡಿಸಿ, ಮಾಸಿಕ 30 ಸಾವಿರ ರೂಪಾಯಿ ಆದಾಯ ಪಡೆಯುವವರಿಗೂ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ. ಇದರಿಂದ ಬಡವರನ್ನು ಶಿಕ್ಷಣದಿಂದ ವಂಚನೆ ಮಾಡಿದಂತಾಗಿದೆ ಎನ್ನುವುದು ಅರ್ಜಿದಾರರ ಆರೋಪ.ಸೀಟು ಹಂಚಿಕೆಯಲ್ಲಿ ಅಕ್ರಮ: ಪದವಿ ಹಾಗೂ ಸ್ನಾತಕೋತ್ತರ ಪದವಿ ವೈದ್ಯಕೀಯ ಕಾಲೇಜುಗಳ ಸೀಟು ಹಂಚಿಕೆಯಲ್ಲಿ ಅಕ್ರಮ ನಡೆಯುತ್ತಿದ್ದು, ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.ಅಂಬಳಿಕೆ ಹಿರಿಯಣ್ಣ ಅವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಪರಿಷತ್ತು, ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಾಮೆಡ್-ಕೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.`ವಿಕಿರಣ ವಿಜ್ಞಾನ ವಿಭಾಗಕ್ಕೆ ಎರಡು ಕೋಟಿ ರೂಪಾಯಿ, ಸ್ತ್ರೀರೋಗ ವಿಜ್ಞಾನ ವಿಭಾಗಲ್ಲೆ ಒಂದೂವರೆ ಕೋಟಿ ಹೀಗೆ ಒಂದೊಂದು ವಿಷಯಕ್ಕೆ ಕೋಟಿಗಳ ಲೆಕ್ಕದಲ್ಲಿ ಹಣ ನಿಗದಿ ಮಾಡಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತಿದೆ. ಹಣ ನೀಡುವ ಹಾಗೂ ಪಡೆಯುವವರನ್ನು ಪತ್ತೆಹಚ್ಚುವುದು ಸರ್ಕಾರಕ್ಕೆ ಕಷ್ಟಕರವಾದ ಮಾತೇನಲ್ಲ. ಅದರ ಹೊರತಾಗಿಯೂ ಶಿಕ್ಷಣ ಇಲಾಖೆ ಮೌನ ತಾಳಿದೆ.

 

ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡುವ ಅಗತ್ಯ ಇದೆ~ ಎಂದು ಅರ್ಜಿದಾರರು ತಿಳಿಸಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಮನವಿ: ಬನಶಂಕರಿ 2ನೇ ಹಂತದಲ್ಲಿನ ಯಡಿಯೂರು ನಾಗಸಂದ್ರ ಕೊಳೆಗೇರಿಯಲ್ಲಿ ಹೈಕೋರ್ಟ್ ಆದೇಶದ ಹೊರತಾಗಿಯೂ ಮೂಲ ಸೌಕರ್ಯ ನೀಡಿಲ್ಲ ಎಂದು ದೂರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.ಸುಬ್ರಹ್ಮಣ್ಯ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಬಿಬಿಎಂಪಿ, ಬಿಡಿಎ, ಕೊಳಚೆ ನಿರ್ಮೂಲನಾ ಮಂಡಳಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.`ಎರಡು ತಿಂಗಳಿನಲ್ಲಿ ಸೌಕರ್ಯ ಒದಗಿಸುವಂತೆ ಬಿಡಿಎಗೆ 2009ರಲ್ಲಿ ಯೇ ಕೋರ್ಟ್ ಆದೇಶಿಸಿತ್ತು. ಇದು ಕೊಳಚೆ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಬರುವ ಕಾರಣ, ತಾನು ಸೌಕರ್ಯ ಒದಗಿಸಲಾಗದು ಎಂದು ಹೇಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇನ್ನೊಂದು ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ವಜಾ ಮಾಡಿದ್ದ ಕೋರ್ಟ್, ತನ್ನ ಆದೇಶ ಪಾಲನೆ ಮಾಡುವಂತೆ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಇದುವರೆಗೆ ಸೌಕರ್ಯ ಕಲ್ಪಿಸಿಲ್ಲ. ಆದುದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಲು ಆದೇಶಿಸಬೇಕು~ ಎಂದು ಅರ್ಜಿಯಲ್ಲಿ ಕೋರಲಾಗಿದೆ.ಸಿಐಡಿ ವರದಿ ಅನುಷ್ಠಾನಕ್ಕೆ ಕೋರಿಕೆ: ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ವಾರಣಾಸಿ ಬಳಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಶಾಮೀಲಾಗಿ ಸುಮಾರು 10 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ಕಬಳಿಸಿದ್ದಾರೆ ಎಂದು ದೂರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.ದಾಖಲೆಗಳನ್ನು ತಿರುಚಿ ಲಿಂಗಪ್ಪ ರೆಡ್ಡಿ ಹಾಗೂ ಇತರರು ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ಸಿಐಡಿ ವರದಿ ನೀಡಿದರೂ, ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೆ.ಪಿಳ್ಳಪ್ಪ ಅವರು ದೂರಿದ್ದಾರೆ. ಸಿಐಡಿ ವರದಿಯಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು ಎಂದು ಅವರು ಕೋರಿದ್ದಾರೆ. ಸರ್ಕಾರಕ್ಕೆ ನೋಟಿ ಜಾರಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.`ಗೂಬೆ ಕೂರಿಸುವುದು ಬೇಡ~


ಎಂಬಿಎ ಕೋರ್ಸ್ ಆರಂಭಿಸುವ ಕಾಲೇಜುಗಳು ಅದನ್ನು ಪ್ರಾರಂಭಿಸಲು ಅಗತ್ಯ ಸೌಕರ್ಯ ಹೊಂದಿದೆಯೇ ಎಂಬುದನ್ನು ನೋಡುವುದು `ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು~ ವ್ಯಾಪ್ತಿಗೆ ಒಳಪಡುತ್ತದೆಯೇ ವಿನಾ ತನ್ನ ವ್ಯಾಪ್ತಿಗೆ ಅಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೈಕೋರ್ಟ್‌ನಿಂದ ಗುರುವಾರ ತರಾಟೆಗೆ ಒಳಗಾಯಿತು.`ನಿಮ್ಮ ಜವಾಬ್ದಾರಿಯನ್ನು ಬೇರೆಯವರ ತಲೆಯ ಮೇಲೆ ಹಾಕಬೇಡಿ. ಎಂಬಿಎ ಕೋರ್ಸ್ ಆರಂಭಿಸುವ ಮುನ್ನ ಭಾರತೀಯ ವಾಣಿಜ್ಯ ನಿರ್ವಹಣಾ ಸಂಸ್ಥೆಯ (ಐಐಬಿಎಂ) ಗುಣಮಟ್ಟವನ್ನು ಆ ಕಾಲೇಜುಗಳು ಹೊಂದಿವೆಯೇ ಎಂಬುದನ್ನು ತಿಳಿದುಕೊಳ್ಳಿ. ಈ ಕೋರ್ಸ್ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯವನ್ನು ಕಾಲೇಜು ಹೊಂದಿದೆಯೇ ಎಂಬುದನ್ನು ತಪಾಸಣೆ ಮಾಡಿ ವಿಚಾರಿಸಿ. ಅದನ್ನು ಬಿಟ್ಟು ಬೇರೊಬ್ಬರ ಮೇಲೆ ಗೂಬೆ ಕೂರಿಸುವುದು ಬೇಡ~ ಎಂದು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಹೇಳಿದರು.`ಮೂಲಸೌಕರ್ಯ, ತಜ್ಞ ಬೋಧಕ ಸಿಬ್ಬಂದಿ ಇಲ್ಲದಿದ್ದರೂ  ಈ ಕೋರ್ಸ್‌ಗೆ ವಿ.ವಿ ಅನುಮತಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಯಾರು ಬೇಕಾದರೂ ಈ ಪದವಿ ಪಡೆಯುವ ಪರಿಸ್ಥಿತಿ ಉಂಟಾಗಿದೆ~ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ಎಂಬಿಎ ಪದವಿಗೆ ತಮಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ ಡಿ.ಟಿ. ಗೌಡ ಎಂಬ ವಿದ್ಯಾರ್ಥಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.