ಆರ್‌ಟಿಇ: ಪೋಷಕರ ಗೊಂದಲ ನಿವಾರಣೆ ಯತ್ನ

7

ಆರ್‌ಟಿಇ: ಪೋಷಕರ ಗೊಂದಲ ನಿವಾರಣೆ ಯತ್ನ

Published:
Updated:

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಸೇರ್ಪಡೆ ಪ್ರಕ್ರಿಯೆ ಸಂಬಂಧ ಪೋಷಕರು ಹಲವು ಬಗೆಯಲ್ಲಿ ಗೊಂದಲ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿ ಪೋಷಕರ ಗೊಂದಲ ದೂರ ಮಾಡುವ ಯತ್ನ ಮಾಡಿದೆ.ಕಾಯ್ದೆಯ ವ್ಯಾಖ್ಯಾನ, ಶುಲ್ಕ ಮರುಪಾವತಿ, ವಿದ್ಯಾರ್ಥಿಗಳ ವಯೋಮಿತಿ, ನೆರೆಹೊರೆ ಶಾಲೆಗಳು ಸೇರಿದಂತೆ ಪೋಷಕರು ಎದುರಿಸುತ್ತಿರುವ ಗೊಂದಲಗಳ ಬಗ್ಗೆ ಈ ಸುತ್ತೋಲೆಯಲ್ಲಿ ಉತ್ತರ ನೀಡಲಾಗಿದೆ. 2013-14ನೇ ಸಾಲಿನ ಪ್ರವೇಶ ಅರ್ಜಿಗಳನ್ನು ಸಲ್ಲಿಸುವ ದಿನಾಂಕ ಜನವರಿ 7ರಿಂದ ಆರಂಭವಾಗಿ ಫೆಬ್ರುವರಿ 5ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ನೆನಪಿಸಲಾಗಿದೆ.*ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೆ ತಾರತಮ್ಯ ನೀತಿ ಅನುಸರಿಸಿದರೆ ಏನು ಕ್ರಮ ಕೈಗೊಳ್ಳಲಾಗುತ್ತದೆ?

ಶಿಕ್ಷಣ ಹಕ್ಕು ಕಾಯ್ದೆಗಳು 2009 ಮತ್ತು ನಿಯಮಗಳು 2012ರ ಪ್ರಕಾರ ಮೀಸಲಾತಿ ಸೌಲಭ್ಯದಡಿ ದಾಖಲಾದ ಮಕ್ಕಳಿಗೆ ತಾರತಮ್ಯ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಕುರಿತು ಲಿಖಿತ ದೂರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಸಲ್ಲಿಸಬಹುದು.*ಅಲ್ಪಸಂಖ್ಯಾತ ಶಾಲೆಗಳನ್ನು ಹೊರತುಪಡಿಸಿ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ. ಅಲ್ಪಸಂಖ್ಯಾತ ಶಾಲೆಗಳ ಬಗ್ಗೆ ಮಾಹಿತಿ ಎಲ್ಲಿ ದೊರಕುತ್ತದೆ?

 ಅಲ್ಪಸಂಖ್ಯಾತ ಶಾಲೆಗಳೆಂದು ಮಾನ್ಯತೆ ಪಡೆದ ಶಾಲೆಗಳ ಪಟ್ಟಿ ಇಲಾಖೆಯ ವೆಬ್‌ಸೈಟ್ www.schooleducation.kar.in ನಲ್ಲಿ ದೊರಕುತ್ತದೆ.*ಐದು ವರ್ಷ, ಆರು ವರ್ಷ, ಯಾವ ವರ್ಷದ ಮಗು ಕಾಯ್ದೆ ವ್ಯಾಪ್ತಿಗೆ ಬರುತ್ತದೆ?

 ಆರ್‌ಟಿಇ ಪ್ರಕಾರ ಆರು ವರ್ಷ ಪೂರೈಸಿದ ಮಗುವನ್ನು ಒಂದನೇ ತರಗತಿಗೆ ದಾಖಲು ಮಾಡುವುದು ಕಡ್ಡಾಯ. ಐದು ವರ್ಷ ಪೂರ್ಣಗೊಳಿಸಿದ, ಆರು ವರ್ಷ ಪೂರ್ಣಗೊಳಿಸದೇ ಇರುವ ಮಕ್ಕಳನ್ನು ಸ್ವ ಇಚ್ಛೆಯ ಮೇರೆಗೆ ಒಂದನೇ ತರಗತಿಗೆ ದಾಖಲಿಸಬಹುದು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪೂರ್ವ ಪ್ರಾಥಮಿಕ ತರಗತಿಗೆ ದಾಖಲು ಮಾಡಬಹುದು. *ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ದೂರನ್ನು ಯಾರಿಗೆ ಸಲ್ಲಿಸಬೇಕು?

 ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವನ್ನು ರಚಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವರು. ಬಾಧಿತರಾದವರು ಈ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು.*ಕೆಲವು ಖಾಸಗಿ ಶಾಲೆಗಳಲ್ಲಿ ಯಾವುದೇ ಮಾಹಿತಿ ಬಂದಿರುವುದಿಲ್ಲ ಎಂಬ ಸಬೂಬು ನೀಡಿ ಅರ್ಜಿಗಳನ್ನು ಸ್ವೀಕಾರ ಮಾಡುತ್ತಿಲ್ಲ. ಅಂತಹ ಶಾಲೆಗಳ ವಿರುದ್ಧ ಕ್ರಮ ಏನು?

 ಈ ಕಾಯ್ದೆ 2012-13ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಿರುವ ಬಗ್ಗೆ ಇಲಾಖೆಯಿಂದ ಸುತ್ತೋಲೆ ಹಾಗೂ ಆದೇಶಗಳನ್ನು ಹೊರಡಿಸಲಾಗಿದೆ. ಈ ಸುತ್ತೋಲೆಗಳನ್ನು ಎಲ್ಲ ಹಂತದ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಎಲ್ಲ ಖಾಸಗಿ ಶಾಲೆಗಳಿಗೂ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಮೂಲಕ ಸುತ್ತೋಲೆಯನ್ನು ತಲುಪಿಸಲಾಗಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಸಹ ಸುತ್ತೋಲೆಯನ್ನು ಪ್ರಕಟಿಸಲಾಗಿದೆ. ಅರ್ಜಿ ಸ್ವೀಕರಿಸದೆ ಇದ್ದ ಪಕ್ಷದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ದೂರು ಸಲ್ಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.*ಎಸ್‌ಸಿ/ಎಸ್‌ಟಿ ವರ್ಗದವರು ಸರ್ಕಾರಿ ನೌಕರರಾಗಿದ್ದರೂ ಅರ್ಜಿ ಸಲ್ಲಿಸಲು ಅರ್ಹರೇ?

 ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬಹುದು.*ಪುರಸಭೆ/ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳು ಎರಡು/ಮೂರು ಇದ್ದು ವಾರ್ಡ್ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಈ ಸಂದರ್ಭದಲ್ಲಿ ಪೋಷಕರು ಯಾವ ಶಾಲೆಗೂ ಬೇಕಾದರೂ ಅರ್ಜಿ ಸಲ್ಲಿಸಬಹುದೇ?

 ಪೋಷಕರು ವಾಸವಾಗಿರುವ ವಾರ್ಡ್ ವ್ಯಾಪ್ತಿಯಲ್ಲಿನ ಯಾವ ಶಾಲೆಗೂ ಅರ್ಜಿ ಸಲ್ಲಿಸಬಹುದು.*`ಪ್ರತಿಷ್ಠಿತ' ಖಾಸಗಿ ಶಾಲೆಗಳು ನಗರ ವ್ಯಾಪ್ತಿಯಲ್ಲೇ ಇವೆ. ಅಂತಹ ಶಾಲೆಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಕ್ಕಳನ್ನೂ ಸೇರಿಸಲು ಅವಕಾಶ ಇದೆಯೇ?

 ಕಾಯ್ದೆ ಮತ್ತು ನಿಯಮಗಳ ಪ್ರಕಾರ ಶಾಲೆ ಇರುವ ಗ್ರಾಮ ಅಥವಾ ನಗರ ಪ್ರದೇಶದ ಒಂದು ವಾರ್ಡ್ ಅನ್ನು `ನೆರೆಹೊರೆ' ಎಂದು ವ್ಯಾಖ್ಯಾನಿಸಲಾಗಿದೆ. ಆ ಪ್ರಕಾರ ನೆರೆಹೊರೆಯಲ್ಲಿ ವಾಸಿಸುವ ಮಕ್ಕಳಿಗೆ ದಾಖಲಾತಿಯಲ್ಲಿ ಆದ್ಯತೆ ನೀಡಬೇಕಾಗುತ್ತದೆ. ಆಯಾ ನೆರೆಹೊರೆಯ ಎಲ್ಲ ಮಕ್ಕಳಿಗೆ ಪ್ರವೇಶ ನೀಡಿದ ಬಳಿಕ ಹೊರಗಿನ ಮಕ್ಕಳನ್ನು ಪರಿಗಣಿಸಲಾಗುತ್ತದೆ.*ಕಾಯ್ದೆಯಡಿ ಶಾಲೆಗೆ ಸೇರಿಸಿದ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಸಂಬಂಧಿಸಿದ ಶಾಲೆಯವರು ನೀಡುತ್ತಾರೆಯೇ?

 ಆ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳನ್ನು ನೀಡುವ ಪದ್ಧತಿ ಇದ್ದರೆ ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೂ ಉಚಿತವಾಗಿ ನೀಡಬೇಕು. ಒಂದು ವೇಳೆ ಆಡಳಿತ ಮಂಡಳಿ ಪಠ್ಯಪುಸ್ತಕ, ಸಮವಸ್ತ್ರ ಖರ್ಚನ್ನು ಶಾಲೆಯ ಒಟ್ಟು ವೆಚ್ಚದಲ್ಲಿ ಸೇರಿಸಿದ್ದರೆ, ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೂ ಸಹ ಉಚಿತವಾಗಿ ನೀಡಬೇಕು.*ಕಾಯ್ದೆಯಡಿ ವಲಸೆ ಬಂದ ಮಕ್ಕಳಿಗೆ ಸಿಗುವ ಸೌಲಭ್ಯವೇನು?

 ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವ ಮಕ್ಕಳು ಅಲ್ಲಿನ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ ಅಂತಹ ಮಕ್ಕಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಸೌಲಭ್ಯ ಪಡೆಯಲು ಹಾಜರುಪಡಿಸಬೇಕಾದ ದೃಢೀಕರಣ ಪತ್ರದ ನಮೂನೆಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.*ಐಸಿಎಸ್‌ಇ/ಸಿಬಿಎಸ್‌ಇ/ಐಬಿಎಸ್ ಪಠ್ಯಕ್ರಮದ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಅವಕಾಶ ಇದೆಯೇ?

ಕಾಯ್ದೆ ಪ್ರಕಾರ ಪೋಷಕರ ವಾಸಸ್ಥಳದ ನೆರೆಹೊರೆಯಲ್ಲಿರುವ ಯಾವುದೇ ಶಾಲೆಯಲ್ಲಿ ಮಕ್ಕಳನ್ನು ಸೇರಿಸಲು ಅವಕಾಶ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry