ಶುಕ್ರವಾರ, ಜೂನ್ 18, 2021
23 °C
ಬಿಇಓಗೆ ಪೋಷಕರ ದೂರು: ಪ್ರತಿಭಟನೆ

ಆರ್‌ಟಿಇ: ವಂತಿಗೆ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ  ಒಂದನೇ ತರಗತಿಗೆ ಆಯ್ಕೆಯಾಗಿರುವ ಮಕ್ಕಳಿಂದ ರಾಜಾಜಿನಗರದ ಭಾಷ್ಯಂ ವೃತ್ತದ ಬಳಿಯ ಈಸ್ಟ್‌ ವೆಸ್ಟ್ ಅಕಾಡೆಮಿಯಲ್ಲಿ ವಂತಿಗೆ (ಡೊನೇಷನ್‌) ಕೇಳಲಾಗಿದೆ ಎಂದು ಆರೋಪಿಸಿ ಪೋಷಕರು  ಉತ್ತರ ವಲಯ–1 (ರಾಜಾಜಿನಗರ) ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ ಅವರಿಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ.ಇದೇ ವೇಳೆ, ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ದೂರಿಗೆ ಒಟ್ಟು 14 ಮಂದಿ ಪೋಷಕರು ಸಹಿ ಹಾಕಿದ್ದಾರೆ.‘2014–15ನೇ ಶೈಕ್ಷಣಿಕ ವರ್ಷದಲ್ಲಿ ಶೇ 25 ಮೀಸಲಾತಿ ಅಡಿಯಲ್ಲಿ ಈ ಶಾಲೆಯಲ್ಲಿ 20 ಮಕ್ಕಳ ಸೇರ್ಪಡೆಗೆ ಅವಕಾಶ ಇದೆ. 20 ಮಕ್ಕಳಿಗೆ ದಾಖಲಾತಿ ನೀಡಲು ಆಡಳಿತ ಮಂಡಳಿ ಒಪ್ಪಿದೆ. ಈ ನಡುವೆ, ಪೋಷಕರಿಗೆ ಕರೆ ಮಾಡಿದ ಆಡಳಿತ ಮಂಡಳಿ ಸದಸ್ಯರು ವಂತಿಗೆ ನೀಡುವಂತೆ ಒತ್ತಡ ಹೇರಿದ್ದಾರೆ. ಪ್ರತಿಯೊಬ್ಬ ಪೋಷಕರಿಂದ ವಂತಿಗೆ ರೂಪದಲ್ಲಿ ರೂ. 25,000 ಕೇಳಿದ್ದಾರೆ’ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.‘ಆಡಳಿತ ಮಂಡಳಿಯವರು ಆರಂಭದಲ್ಲಿ ರೂ. 15,000 ನೀಡುವಂತೆ ತಿಳಿಸಿದ್ದಾರೆ. ಉಳಿದ ರೂ. 10,000 ಮೊತ್ತವನ್ನು ಸ್ವಲ್ಪ ದಿನ ಬಿಟ್ಟು ನೀಡುವಂತೆ ಕೇಳಿಕೊಂಡಿದ್ದಾರೆ. ಸಮವಸ್ತ್ರ ಹಾಗೂ ಪುಸ್ತಕವನ್ನು ಪೋಷಕರೇ ಖರೀದಿ ಮಾಡಬೇಕು ಎಂದು ತಿಳಿಸಿದ್ದಾರೆ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ಕಂಪ್ಯೂಟರ್‌, ಸಂಗೀತ ಶಿಕ್ಷಣ, ಯೋಗ ಶಿಕ್ಷಣ ನೀಡಲು ಈ ವಂತಿಗೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ’ ಎಂದು ಪೋಷಕರು ದೂರಿದರು.‘ಶುಕ್ರವಾರ ಸಂಜೆ ಪೋಷಕರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅವರ ಪ್ರತಿಕ್ರಿಯೆ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಗೋಪಾಲಕೃಷ್ಣ ತಿಳಿಸಿದರು.‘ಆರ್‌ಟಿಇ ಅಡಿ ವಂತಿಗೆ ವಸೂಲಿ ಮಾಡಲು ಅವಕಾಶ ಇಲ್ಲ. ವಂತಿಗೆ ವಸೂಲಿ ಮಾಡಿದ ಶಾಲೆಯ ಮಾನ್ಯತೆ ರದ್ದುಪಡಿಸಬಹುದು. ಹೀಗಾಗಿ ಶಿಕ್ಷಣ ಇಲಾಖೆ ಈ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆರ್‌ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್‌ ಒತ್ತಾಯಿಸಿದರು.‘ಪಠ್ಯೇತರ ಚಟುವಟಿಕೆಗೆ ಪ್ರತಿಯೊಬ್ಬ ಪೋಷಕರು ಹೆಚ್ಚುವರಿ ಶುಲ್ಕ ಪಾವತಿಸುತ್ತಿದ್ದಾರೆ. ಇಂತಹ ಚಟುವಟಿಕೆ  ಅಗತ್ಯ ಇಲ್ಲದವರು ಹೆಚ್ಚುವರಿ ಶುಲ್ಕ ನೀಡಬೇಕಿಲ್ಲ. ಆರ್‌ಟಿಇ ಮಕ್ಕಳಿಂದ ಶುಲ್ಕಕ್ಕೆ ಒತ್ತಡ ಹೇರಿಲ್ಲ. ಶುಲ್ಕ ನೀಡದ ಮಕ್ಕಳಿಗೆ ಪ್ರವೇಶವನ್ನೂ ನಿರಾಕರಿಸಿಲ್ಲ’ ಎಂದು ಶಾಲೆಯ ಪ್ರಾಂಶುಪಾಲರಾದ ಶೋಭಾ ಸಿಂಗ್‌ ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.