ಆರ್‌ಟಿಇ : ವಿದ್ಯಾರ್ಥಿಗಳ ಶುಲ್ಕ ಮರುಪಾವತಿ

7
ಮೊದಲ ಕಂತು ರೂ 27.90 ಕೋಟಿ ಬಿಡುಗಡೆ

ಆರ್‌ಟಿಇ : ವಿದ್ಯಾರ್ಥಿಗಳ ಶುಲ್ಕ ಮರುಪಾವತಿ

Published:
Updated:
ಆರ್‌ಟಿಇ : ವಿದ್ಯಾರ್ಥಿಗಳ ಶುಲ್ಕ ಮರುಪಾವತಿ

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2012-13ನೇ ಸಾಲಿನಲ್ಲಿ ದಾಖಲಾದ ಖಾಸಗಿ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಥಮ ಕಂತಿನ 26.90 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಜಿಲ್ಲಾವಾರು ಅನುದಾನ ಹಂಚಿಕೆ ಮಾಡಲಾಗಿದೆ.ಪ್ರಥಮ ಹಂತದಲ್ಲಿ ಶೇ 50ರಷ್ಟು ಶುಲ್ಕವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಶೇ 50 ಮೊತ್ತವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಈಗಾಗಲೇ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಪೂರ್ವ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗೆ 5,924 ರೂಪಾಯಿ ಹಾಗೂ ಒಂದನೇ ತರಗತಿ ವಿದ್ಯಾರ್ಥಿಗೆ 11,848 ರೂಪಾಯಿಯಂತೆ ಗರಿಷ್ಠ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಕ್ಲೇಮು ಮಾಡಿದ ಶಾಲೆಯ ಶುಲ್ಕ ಈ ಮೊತ್ತಗಳಿಗಿಂತ ಕಡಿಮೆ ಇದ್ದಲ್ಲಿ ಆ ಶುಲ್ಕದ ದರದಲ್ಲಿಯೇ ಪಾವತಿಸಲು ಸೂಚಿಸಲಾಗಿದೆ. ಧಾರವಾಡ ಆಯುಕ್ತರ ವಲಯದಲ್ಲಿ 9 ಜಿಲ್ಲೆಗಳಲ್ಲಿ ಎಲ್‌ಕೆಜಿ/ಯುಕೆಜಿಗೆ 2318 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಮೊದಲ ಕಂತಿನಲ್ಲಿ 68,65,916 ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಂದನೇ ತರಗತಿಗೆ 12421 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಮೊದಲ ಕಂತಿನಲ್ಲಿ 7,35,82,004 ರೂಪಾಯಿ ಬಿಡುಗಡೆ ಮಾಡಲಾಗಿದೆ.ಗುಲ್ಬರ್ಗ ಆಯುಕ್ತರ ವಲಯ ವ್ಯಾಪ್ತಿಯಲ್ಲಿ ಆರು ಜಿಲ್ಲೆಗಳಲ್ಲಿ ಎಲ್‌ಕೆಜಿ/ಯುಕೆಜಿಗೆ 1081 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಮೊದಲ ಕಂತಿನಲ್ಲಿ 32,01,922 ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಂದನೇ ತರಗತಿಗೆ 10,845 ವಿದ್ಯಾರ್ಥಿಗಳು ಸೇರ್ಪಡೆಯಾದ ಹಿನ್ನೆಲೆಯಲ್ಲಿ 6,42,45,780 ರೂಪಾಯಿ ಬಿಡುಗಡೆ ಮಾಡಲಾಗಿದೆ.ಉಳಿದ 19 ಶೈಕ್ಷಣಿಕ ಜಿಲ್ಲೆಗಳಲ್ಲಿ ಎಲ್‌ಕೆಜಿ/ಯುಕೆಜಿಗೆ 2,249 ವಿದ್ಯಾರ್ಥಿಗಳು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ 6,66,158 ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಂದನೇ ತರಗತಿಗೆ 20,345 ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ 12,05,23,780 ರೂಪಾಯಿ ಬಿಡುಗಡೆ ಮಾಡಲಾಗಿದೆ.ಪ್ರಥಮ ಕಂತನ್ನು ಸೆಪ್ಟೆಂಬರ್‌ನಲ್ಲಿ ಹಾಗೂ ಎರಡನೇ ಕಂತನ್ನು ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಲಾಖೆ ಘೋಷಿಸಿತ್ತು. ಇಲಾಖೆ ಅಧಿಕಾರಿಗಳ ನಿಧಾನಗತಿ ಧೋರಣೆ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ದಾಖಲೆಗಳನ್ನು ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಅನುದಾನ ಬಿಡುಗಡೆ ತಡವಾಗಿತ್ತು. ಜನವರಿ 15ರೊಳಗೆ ಆರ್‌ಟಿಇ ಗೊಂದಲಗಳನ್ನು ಈಡೇರಿಸಬೇಕು.

ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಎಚ್ಚರಿಸಿದ ಹಿನ್ನೆಲೆಯಲ್ಲಿ ಇಲಾಖೆ ಅನುದಾನ ಬಿಡುಗಡೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಂಡಿದೆ. ಈ ಅನುದಾನವನ್ನು ಖಜಾನೆಯಿಂದ ಬಿಡುಗಡೆ ಮಾಡಲು ಸುತ್ತೋಲೆಗಳಲ್ಲಿ ಸೂಚನೆಗಳನ್ನು ನೀಡಲಾಗಿತ್ತು. ಸುತ್ತೋಲೆ ಪ್ರಕಾರ ಶುಲ್ಕದ ಮೊತ್ತವನ್ನು ತುರ್ತು ಬಿಲ್ಲಿನಲ್ಲಿ ಡ್ರಾ ಮಾಡಲು ತಿಳಿಸಲಾಗಿತ್ತು. ಆದರೆ, ಆಡಳಿತಾತ್ಮಕ ಕಾರಣಗಳಿಂದ ತುರ್ತು ಬಿಲ್ಲಿನಲ್ಲಿ ಡ್ರಾ ಮಾಡುವುದನ್ನು ಕೈಬಿಟ್ಟು ಸಿಟಿಎಸ್-8ರ ಅನುದಾನ ಬಿಲ್ಲಿನಲ್ಲಿ ಉಪನಿರ್ದೇಶಕರ ಮೇಲು ಸಹಿ ಪಡೆದು ಬಿಡುಗಡೆ ಮಾಡಲು ತಿಳಿಸಲಾಗಿದೆ.ಖಜಾನೆಯಿಂದ ಶುಲ್ಕವನ್ನು ಡ್ರಾ ಮಾಡುವಾಗ ಸಂಬಂಧಪಟ್ಟ ಶಾಲೆಯು ಆಡಳಿತ ಮಂಡಳಿಯ ಬ್ಯಾಂಕ್ ಖಾತೆಗೆ ಇಸಿಎಸ್ ಮೂಲಕ ಪಾವತಿಯಾಗುವಂತೆ ಅನುಬಂಧವನ್ನು ಲಗತ್ತಿಸಬೇಕು. ಕೂಡಲೇ ಮರುಪಾವತಿ ಶುಲ್ಕವನ್ನು ಖಜಾನೆಯಿಂದ ಡ್ರಾ ಮಾಡಿ ಶಾಲೆಗಳ ಆಡಳಿತ ಮಂಡಳಿಗಳ ಖಾತೆಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ವಿಳಂಬವಾದಲ್ಲಿ ಸಂಬಂಧಿಸಿದ ಉಪನಿರ್ದೇಶಕರು/ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎ.ದೇವಪ್ರಕಾಶ್ ಎಚ್ಚರಿಸಿದ್ದಾರೆ.ಡಿಡಿಪಿಐ/ಬಿಇಒ ಪಾಲಿಸಬೇಕಾದ ಮಾರ್ಗಸೂಚಿ:

ಮಕ್ಕಳ ಶುಲ್ಕ ಮರುಪಾವತಿ ಕುರಿತು ಬೇಡಿಕೆ ಪಟ್ಟಿಯನ್ನು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮೂನೆ 6 ಮತ್ತು 6(ಎ)ಯಲ್ಲಿ ಮುಖ್ಯ ಶಿಕ್ಷಕರ ದೃಢೀಕರಣ ಪಡೆದು ನಂತರ ಈ ಪಟ್ಟಿಯ ಆಧಾರದಲ್ಲಿ ಎಲ್ಲ ಶಾಲೆಗಳ ಬೇಡಿಕೆ ಪಟ್ಟಿಯನ್ನು ನಮೂನೆ 7 ಮತ್ತು 7(ಎ)ರಲ್ಲಿ ಕ್ರೋಡೀಕರಿಸಿ ದೃಢೀಕರಿಸಿ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು.ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮೂನೆ 6, 6(ಎ) ಮತ್ತೊಮ್ಮೆ ಪರಿಶೀಲಿಸಿ ಆಡಳಿತ ಮಂಡಳಿಗಳ ಖಾತೆಗೆ ಜಮಾ ಮಾಡಬೇಕು. ಶಾಲೆಯಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಖಚಿತಪಡಿಸಿಕೊಳ್ಳಬೇಕು. ಜಿಲ್ಲಾ ಉಪನಿರ್ದೇಶಕರಿಗೆ ಬಿಡುಗಡೆಯಾದ ಮೊತ್ತವನ್ನು ಉಪನಿರ್ದೇಶಕರು ತಮ್ಮ ವಲಯ/ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮರುಹಂಚಿಕೆ ಮಾಡಬೇಕು.

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಪೂರ್ವಪ್ರಾಥಮಿಕ ವಿಭಾಗಕ್ಕೆ 45 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಪ್ರಥಮ ಕಂತಿನಲ್ಲಿ 1,33,290 ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಂದನೇ ತರಗತಿಗೆ 1,942 ವಿದ್ಯಾರ್ಥಿಗಳು ದಾಖಲಾಗಿದ್ದು, ಮೊದಲ ಕಂತಿನಲ್ಲಿ 1,15,04,408 ರೂಪಾಯಿ ಬಿಡುಗಡೆ ಮಾಡಲಾಗಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗಕ್ಕೆ 689 ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ ಆರಂಭಿಕ ಕಂತಿನಲ್ಲಿ 20,40,818 ರೂಪಾಯಿ, ಒಂದನೇ ತರಗತಿಗೆ 2,031 ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ 1,20,31,644 ರೂಪಾಯಿ ಬಿಡುಗಡೆ ಮಾಡಲಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್‌ಕೆಜಿಗೆ 90 ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ ಮೊದಲ ಕಂತಿನಲ್ಲಿ 2,66,580 ರೂಪಾಯಿ, ಒಂದನೇ ತರಗತಿಗೆ 1,069 ವಿದ್ಯಾರ್ಥಿಗಳು ದಾಖಲಾದ ಹಿನ್ನೆಲೆಯಲ್ಲಿ 63,32,756 ರೂಪಾಯಿ ಬಿಡುಗಡೆ ಮಾಡಲಾಗಿದೆ.ಪೂರ್ವಪ್ರಾಥಮಿಕ ಶೂನ್ಯ ಸಾಧನೆ

ದಾವಣಗೆರೆ, ಉಡುಪಿ, ಹಾಸನ, ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗಕ್ಕೆ ಯಾವುದೇ ವಿದ್ಯಾರ್ಥಿಗಳು ದಾಖಲಾಗಿಲ್ಲ.ವೆಬ್‌ಸೈಟ್‌ನಲ್ಲಿ ಲಭ್ಯ

ಆರ್‌ಟಿಇ ಅಡಿಯಲ್ಲಿ 2013-14ನೇ ಸಾಲಿನ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಗಾಗಿ ಶಾಲಾವಾರು ಲಭ್ಯವಿರುವ ಸೀಟುಗಳ ವಿವರಗಳನ್ನು http://schooleducation.kar.nic.in ಮತ್ತು ಗ್ರಾಮಪಂಚಾಯ್ತಿ ವೆಬ್‌ಸೈಟ್‌ನಲ್ಲಿ ಜ.5 ರಂದು ಪ್ರಕಟಿಸಲಾಗುವುದು. ಅಂದಿನಿಂದಲೇ ಮಕ್ಕಳ ದಾಖಲಾತಿಗಾಗಿ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry