ಶನಿವಾರ, ನವೆಂಬರ್ 16, 2019
21 °C
ಶುಲ್ಕ ಪಾವತಿಗೆ ಪೋಷಕರಿಗೆ ಒತ್ತಡ

ಆರ್‌ಟಿಇ- ಶಾಲೆಯ ಹೊಸ ಬಗೆ `ತಕರಾರು'

Published:
Updated:

ಶಿಕ್ಷಣದ ದಿಕ್ಕು

ಬೆಂಗಳೂರು: `ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಸೇರ್ಪಡೆಯಾದ ವಿದ್ಯಾರ್ಥಿಗಳ ಶುಲ್ಕವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಸ್ಥೆಗೆ ಈವರೆಗೂ ಪಾವತಿಸಿಲ್ಲ. ಹೀಗಾಗಿ ನೀವು ಸಂಸ್ಥೆಗೆ ಶುಲ್ಕ ಪಾವತಿಸಿ. ಇಲಾಖೆ ಹಣ ಪಾವತಿಸಿದರೆ ನಿಮ್ಮ ಹಣವನ್ನು ವಾಪಸ್ ಮಾಡುತ್ತೇವೆ'.-ರಾಜರಾಜೇಶ್ವರಿ ನಗರದ ಮೂರನೇ ಹಂತದ ಖಾಸಗಿ ಶಾಲೆಯೊಂದು ಪೋಷಕರಲ್ಲಿ ಮನವಿ ಮಾಡಿಕೊಂಡಿರುವುದು ಹೀಗೆ. ಸಂಸ್ಥೆಯ ಮನವಿಯಿಂದ ಪೋಷಕರು ದ್ವಂದ್ವಕ್ಕೆ ಸಿಲುಕಿದ್ದಾರೆ.`ಕಳೆದ ವರ್ಷ ನನ್ನ ಮಗಳನ್ನು ಆರ್‌ಟಿಇ ಅಡಿಯಲ್ಲಿ ಬಿಇಎಂಎಲ್ ಬಡಾವಣೆಯ ಬೆಟ್ ಕಾನ್ವೆಂಟ್‌ಗೆ ಒಂದನೇ ತರಗತಿಗೆ ಸೇರಿಸಿದೆ. 2012-13ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಶಾಲಾ ಆಡಳಿತ ಮಂಡಳಿಯವರು ಯಾವುದೇ ಬೇಡಿಕೆ ಮುಂದಿಡಲಿಲ್ಲ. ಇತ್ತೀಚೆಗೆ ಸಂಸ್ಥೆಯು ಶುಲ್ಕ ಪಾವತಿಸುವಂತೆ ವಿನಂತಿಸಿದೆ' ಎಂದು ಪೋಷಕ ಸತೀಶ್ `ಪ್ರಜಾವಾಣಿ'ಗೆ ತಿಳಿಸಿದರು.ಸರ್ಕಾರ ಹಣ ಪಾವತಿ ಮಾಡದ ಕಾರಣ ಸಮಸ್ಯೆಯಾಗಿದೆ ಎಂದು ಶಾಲೆಯ ವಾದ. ಶಾಲೆಯವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈಗ ನಮಗೆ ದಿಕ್ಕೇ ತೋಚದಂತಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಗೊಂದಲವನ್ನು ತಿಳಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

`ಕಾಯ್ದೆಯ ಪ್ರಕಾರ ಶಾಲಾ ಆಡಳಿತ ಮಂಡಳಿ ಪೋಷಕರಲ್ಲಿ ಶುಲ್ಕ ಪಾವತಿಸುವಂತೆ ಬೇಡಿಕೆ ಸಲ್ಲಿಸುವಂತಿಲ್ಲ. ಶಿಕ್ಷಣ ಇಲಾಖೆ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಈವರೆಗೂ ಶುಲ್ಕ ಮರುಪಾವತಿ ಮಾಡಿಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲಾಖೆ ಮರುಪಾವತಿ ಮಾಡುವುದು ವಿಳಂಬವಾದರೆ ಪೋಷಕರು ಶುಲ್ಕ ಪಾವತಿಸಬೇಕೇ ಎಂಬ ಗೊಂದಲ ಹಲವು ಪೋಷಕರನ್ನು ಕಾಡುತ್ತಿದೆ.ಇಲಾಖೆಯ ಅಧಿಕಾರಿಗಳು ಈ ಸಂಬಂಧ ಶಾಲಾ ಆಡಳಿತ ಮಂಡಳಿಗಳೊಂದಿಗೆ ಸಮಾಲೋಚಿಸಿ ಗೊಂದಲ ನಿವಾರಿಸಬೇಕು' ಎಂದು ಆರ್‌ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್ ವಿನಂತಿಸಿದರು.

ಪ್ರತಿಕ್ರಿಯಿಸಿ (+)