ಶನಿವಾರ, ಜುಲೈ 24, 2021
28 °C

ಆರ್‌ಟಿಐ ಪ್ರಕಾರ ಮಾಹಿತಿ ಕೇಳಿದ ಕುಟುಂಬಕ್ಕೆ ಪ್ರಾಣ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮಾಹಿತಿ ಹಕ್ಕು ಕಾಯ್ದೆಯಡಿ ಭ್ರಷ್ಟಾಚಾರ ಬಯಲಿಗೆಳೆಯಲು ಪ್ರಯತ್ನಿಸಿದ ಕುಟುಂಬವೊಂದು ಪ್ರಾಣ ರಕ್ಷಣೆಗಾಗಿ ಪೊಲೀಸರ ಮೊರೆ ಹೊಕ್ಕರೂ ರಕ್ಷಣೆ ಸಿಗದೆ ಪರದಾಡುತ್ತಿದೆ.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯಲ್ಲಿ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ಬೂದಿಬೆಟ್ಟ ಗ್ರಾ.ಪಂ.ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿರುವುದನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಸಾರವಾಟಪುರ ಗ್ರಾಮದ ಎನ್.ನಾಗರಾಜು ಬಯಲಿಗೆಳೆದಿದ್ದಾರೆ. ಲೋಕಾಯುಕ್ತಕ್ಕೆ ದಾಖಲೆಗಳ ಸಮೇತ ದೂರು ಸಹ ಸಲ್ಲಿಸಿದ್ದಾರೆ.ಈ ಬಗ್ಗೆ ಲೋಕಾಯುಕ್ತರು ದಾಳಿ ನಡೆಸಿ ಅಕ್ರಮಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಗುತ್ತಿಗೆದಾರ, ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿ ನಾಗರಾಜ್ ಹಾಗೂ ಅವರ ತಮ್ಮ ನರಸಪ್ಪ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕತೊಡಗಿದ್ದಾರೆ.ಈ ಸಂಬಂಧ ವೈ.ಎನ್.ಹೊಸಕೋಟೆ ಪೊಲೀಸರಿಗೆ ನಾಗರಾಜ್ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ, ಮಧುಗಿರಿ ಡಿವೈಎಸ್ಪಿಗೂ ದೂರು ನೀಡಿದ್ದಾರೆ, ಇದೀಗ ಪ್ರಾಣ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ಸಲ್ಲಿಸಿದ್ದಾರೆ.‘ನಾವು ಯಾವುದಕ್ಕೂ ಬಗ್ಗದೇ ಇದ್ದಾಗ ಪೊಲೀಸ್ ಅಧಿಕಾರಿಯೊಬ್ಬರಿಂದಲೇ ಬೆದರಿಕೆ ಹಾಕಿಸಲಾಗುತ್ತಿದೆ. ಲೋಕಾಯುಕ್ತರಿಗೆ ಸಲ್ಲಿಸಿರುವ ಪ್ರಕರಣ ವಾಪಸ್ ಪಡೆಯದಿದ್ದರೆ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರದಿಂದ ನಿರಂತರ ಕರೆ ಮಾಡಿ ಬೆದರಿಸುತ್ತಿದ್ದಾರೆ. ಇದರಿಂದ ಹೆದರಿ ಊರು ಬಿಟ್ಟು ಹೆಂಡತಿ ಮಕ್ಕಳೊಂದಿಗೆ ತುಮಕೂರಿಗೆ ಬಂದಿದ್ದಾಗಿ’ ನರಸಪ್ಪ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದರು.ತಮ್ಮನ್ನು ರಕ್ಷಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಲು ಎರಡು ದಿನಗಳಿಂದ ಮಾಡುತ್ತಿರುವ ಯತ್ನ ಕೂಡ ಕೈಗೂಡಿಲ್ಲ. ಮನೆಯಲ್ಲಿರುವ ನಾಲ್ಕು ದನ, ಕುರಿಯನ್ನು ಕೊಟ್ಟಿಗೆಯಲ್ಲಿ ಕೂಡಿ ಬಂದಿದ್ದು ಅವುಗಳ ಸ್ಥಿತಿ ಏನಾಗಿದೆಯೋ ಎಂಬುದು ಗೊತ್ತಿಲ್ಲ ಎಂದು ನರಸಪ್ಪ ಭಾನುವಾರ ಅಳುತ್ತಾ ದುಃಖ ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.