ಸೋಮವಾರ, ಏಪ್ರಿಲ್ 12, 2021
29 °C

ಆರ್‌ಟಿಐ ವಿಚಾರಣೆಗೆ ಗ್ರಾಹಕ ಆಯೋಗ ತಡೆ

ಪ್ರಜಾವಾಣಿ ವಾರ್ತೆ/ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಧಾರವಾಡ: ಸರ್ಕಾರದ ಬಳಿ ಇರುವ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಅರ್ಜಿ ಹಾಕಿ, ಅದು ದೊರೆಯದೇ ಇದ್ದಾಗ ಗ್ರಾಹಕ ದೂರುಗಳ ಪರಿಹಾರ ವೇದಿಕೆ ಮೂಲಕ ಪಡೆದುಕೊಳ್ಳುವ ಸಲುವಾಗಿ ದೂರು ದಾಖಲಿಸಿದರೆ ಅದನ್ನು ವಿಚಾರಣೆಗೆ ಸ್ವೀಕರಿಸಬಾರದು ಎಂದು ರಾಜ್ಯ ಗ್ರಾಹಕ ದೂರುಗಳ ಪರಿಹಾರ ಆಯೋಗ ಜಿಲ್ಲಾ ವೇದಿಕೆಗಳಿಗೆ ಕಳಿಸಿದ ಮಹತ್ವದ ಸುತ್ತೋಲೆಯಲ್ಲಿ ಸೂಚಿಸಿದೆ.ರಾಜ್ಯ ಮಾಹಿತಿ ಆಯೋಗವು ಬಳ್ಳಾರಿ ತಹಶೀಲ್ದಾರ್ ಅವರ ವಿರುದ್ಧ ಕೆ.ವೇಣುಗೋಪಾಲ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ (ಜುಲೈ 17) ಕೊಟ್ಟಿರುವ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಗ್ರಾಹಕ ಆಯೋಗ ಈ ಸುತ್ತೋಲೆ ಹೊರಡಿಸಿದೆ. ಇದೂ ಸೇರಿ ಇನ್ನೂ ಬೇರೆ ಕಾರಣಗಳನ್ನು ಆಧಾರವಾಗಿ ಇಟ್ಟುಕೊಂಡು ಧಾರವಾಡ ಜಿಲ್ಲಾ ಗ್ರಾಹಕ ವೇದಿಕೆಯು ಹುಬ್ಬಳ್ಳಿಯ ಶಗುನ್ ಹೈಟ್ಸ್ ಮತ್ತು ಮಹಾನಗರಪಾಲಿಕೆ ಆಯುಕ್ತರ ನಡುವಿನ ಪ್ರಕರಣದ ವಿಚಾರಣೆಗೆ ನಿರಾಕರಿಸಿದೆ.ರಾಜ್ಯ ಗ್ರಾಹಕ ಆಯೋಗದ ಸುತ್ತೋಲೆ ಹಾಗೂ ಧಾರವಾಡ ಗ್ರಾಹಕ ವೇದಿಕೆ ವಿಚಾರಣೆ ನಡೆಸಲು ನಿರಾಕರಿಸಿದ ದಾಖಲೆ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.ಮೈಸೂರಿನ ಡಾ.ಎಸ್.ಪಿ.ತಿರುಮಲರಾವ್ ಪ್ರಕರಣದಲ್ಲಿ 2005ರ ರಾಷ್ಟ್ರೀಯ ಗ್ರಾಹಕ ದೂರುಗಳ ಪರಿಹಾರ ಆಯೋಗ ನೀಡಿದ ತೀರ್ಪಿಗೆ ಇದು ವಿರುದ್ಧವಾಗಿದೆ. ತಿರುಮಲರಾವ್ ಮಾಹಿತಿ ಹಕ್ಕು ಕಾಯ್ದೆಯಡಿ ಮೈಸೂರು ಮಹಾನಗರ ಪಾಲಿಕೆಯಿಂದ ಸರಿಯಾದ ಮಾಹಿತಿ ಪಡೆಯಲು ವಿಫಲರಾದಾಗ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಪ್ರಶ್ನಿಸಿದ್ದರು. ಆಗ ಆಯೋಗ ಆರ್‌ಟಿಐ ಕಾಯ್ದೆಯಡಿ ಮಾಹಿತಿ ಪಡೆಯಲು ವಿಫಲರಾದವರು ಗ್ರಾಹಕ ಕಾಯ್ದೆಯಡಿ ಪರಿಹಾರ ಪಡೆಯಬಹುದು ಎಂದು ಮಹತ್ವದ ತೀರ್ಪು ನೀಡಿತ್ತು.ಇದಲ್ಲದೆ, ಉಷಾರಾಣಿ ಅಗರ್‌ವಾಲ್ ಎಂಬುವವರು 2006ರಲ್ಲಿ ಉತ್ತರಾಖಂಡದ ಹಲ್ದವಾನಿ ನಗರಪಾಲಿಕೆ ವಿರುದ್ಧ ಹಾಕಿದ್ದ ಅರ್ಜಿ ವಿಚಾರಣೆ ಕಾಲಕ್ಕೆ ಕೂಡ ಗ್ರಾಹಕ ಹಿತರಕ್ಷಣೆ ಕಾಯ್ದೆಯಡಿ ಪರಿಹಾರ ಪಡೆಯಬಹುದು ಎಂದು ರಾಷ್ಟ್ರೀಯ ಆಯೋಗ ತಿಳಿಸಿತ್ತು.ಸುತ್ತೋಲೆಯ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲ ಚಾಮರಾಜ ಬಾಂಗಿ, `ಜೀವ ವಿಮಾ ನಿಗಮ, ಬ್ಯಾಂಕ್, ರೈಲ್ವೆ, ಅಂಚೆ ಇಲಾಖೆ, ಮೊದಲಾದ ಕೇಂದ್ರ ಸರ್ಕಾರಿ ನಿಯಂತ್ರಣದ ಸಂಸ್ಥೆಗಳು ಗ್ರಾಹಕರ ದೂರುಗಳ ಪರಿಹಾರಕ್ಕೆ ತಮ್ಮದೇ ಒಂಬುಡ್ಸ್‌ಮನ್‌ರನ್ನು ಹೊಂದಿವೆ~ ಎಂದರು.ಆದರೂ ಈ ಸಂಸ್ಥೆಗಳ ಗ್ರಾಹಕರು ತಮ್ಮ ತಕರಾರುಗಳಿಗೆ ಗ್ರಾಹಕ ವೇದಿಕೆಯಲ್ಲಿ ಪರಿಹಾರ ಪಡೆದ ಅಸಂಖ್ಯ ಉದಾಹರಣೆಗಳಿವೆ. ಸದ್ಯಕ್ಕೆ ಜಾರಿಯಲ್ಲಿರುವ ಬೇರೆ ಯಾವುದೇ ಕಾಯ್ದೆಯಡಿ ನಿರ್ಬಂಧವಿದ್ದರೂ, ಗ್ರಾಹಕ ಹಿತರಕ್ಷಣೆ ಕಾಯ್ದೆಯ 3ನೇ ವಿಧಿಯಡಿ ದೂರು ವಿಚಾರಿಸಿ ಪರಿಹಾರ ನೀಡಲು ಗ್ರಾಹಕ ವೇದಿಕೆಗಳಿಗೆ ಅಧಿಕಾರವಿದೆ ಎಂಬ ತೀರ್ಪುಗಳು ಸುತ್ತೋಲೆಯಿಂದ ನಿರರ್ಥಕವಾಗುತ್ತವೆ~ ಎಂದು ಚಾಮರಾಜ ಬಾಂಗಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.