ಬುಧವಾರ, ಮೇ 18, 2022
27 °C

ಆರ್‌ಟಿಐ ಶಕ್ತಿ ಕುಂದಿಸುವುದಿಲ್ಲ: ಪ್ರಧಾನಿ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಯಾವುದೇ ಕಾರಣಕ್ಕೂ ದುರ್ಬಲಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ಪಾರದರ್ಶಕತೆ ಮೂಡಿಸಲು ಸರ್ಕಾರ ಇದನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸುತ್ತದೆ~ ಎಂದು ಶುಕ್ರವಾರ ತಿಳಿಸಿದರು.ಈ ಪಾರದರ್ಶಕ ಕಾಯ್ದೆಯು ಸರ್ಕಾರದ ಉದ್ದೇಶಿತ ಕಾರ್ಯವಿಧಾನದಲ್ಲಿ ವ್ಯತಿರಿಕ್ತ ಪರಿಣಾಮ ಬೀರಕೂಡದು ಹಾಗೂ ದಕ್ಷ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಕುಂದಿಸಬಾರದು ಎಂದು  ಕಿವಿಮಾತು ಹೇಳಿದರು.ಕೇಂದ್ರ ಮಾಹಿತಿ ಆಯೋಗದ ಎರಡು ದಿನಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಮಾಹಿತಿ ಬಹಿರಂಗ, ಸೀಮಿತ ಅವಧಿ ಹಾಗೂ ಸಾರ್ವಜನಿಕ ಅಧಿಕಾರಿಗಳಿಗೆ ಲಭ್ಯ ಇರುವ ಸಂಪನ್ಮೂಲಗಳ ನಡುವೆ ಸಮತೋಲನ ಕಾಪಾಡುವ ಅಗತ್ಯವೂ ಇದೆ ಎಂದು ಅಭಿಪ್ರಾಯಪಟ್ಟರು.ಸರ್ಕಾರದಲ್ಲಿ ಕೆಲವರಿಗೆ ಈ ಕಾಯ್ದೆಯು ತಮ್ಮ ಕಾರ್ಯವ್ಯಾಪ್ತಿ ಅತಿಕ್ರಮಿಸುತ್ತದೆ ಎಂಬ ಭಾವನೆ ಇದೆ. ಸಮ್ಮೇಳನದಲ್ಲಿ ಈ ವಿಷಯವೂ ಚರ್ಚೆಯಾಗುವ ನಿರೀಕ್ಷೆ ಇದೆ.ಅನ್ಯಾಯ ಹಾಗೂ ಅಕ್ರಮಗಳನ್ನು ಬಯಲಿಗೆಳೆಯುವ ಅಧಿಕಾರಿಗಳಿಗೆ ರಕ್ಷಣೆ ನೀಡುವ ಕಾಯ್ದೆಯೊಂದನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲಾಗುತ್ತದೆ ಎಂದು ಪ್ರಧಾನಿ ಸಿಂಗ್ ತಿಳಿಸಿದರು.ಆರ್‌ಟಿಐ ಕಾಯ್ದೆಯಲ್ಲಿ ವಿನಾಯಿತಿ ನೀಡಿರುವ ಕೆಲವೊಂದು ವಿಧಿಗಳನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಇವುಗಳು ಸದುದ್ದೇಶದಿಂದ ಕೂಡಿವೆಯೇ ಅಥವಾ ಏನಾದರೂ ಮಾರ್ಪಾಡಿನ ಅಗತ್ಯವಿದೆಯೇ ಎನ್ನುವುದನ್ನು ಪರಾಮರ್ಶಿಸಲಾಗುತ್ತದೆ. ಅಲ್ಲದೆ ಇದರಲ್ಲಿ ಖಾಸಗಿತನಕ್ಕೆ ಸಂಬಂಧಿಸಿದ ಅಂಶಗಳನ್ನೂ ಗಮನಿಸಬೇಕಾಗಿದೆ ಎಂದರು.ಆರ್‌ಟಿಐ ಕಾಯ್ದೆ ಅಡಿಯಲ್ಲಿ ಜನರು ಖಾಸಗಿ ಸಂಸ್ಥೆಗಳಿಂದಲೂ ಮಾಹಿತಿ ಪಡೆಯಬಹುದು ಎಂದೂ ಸಿಂಗ್ ವಿವರಿಸಿದರು.ಇದಕ್ಕೂ ಮುನ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರ, ಆಯೋಗಕ್ಕೆ ಸ್ವಂತ ಕಟ್ಟಡ ಬೇಕೆನ್ನುವ ಬೇಡಿಕೆ ಪ್ರಸ್ತಾಪಿಸಿದರು. ಕೇಂದ್ರ ಚುನಾವಣಾ ಆಯೋಗದಂತೆಯೇ ಮಾಹಿತಿ ಆಯೋಗವನ್ನೂ ಸಾಂವಿಧಾನಿಕ ಮಂಡಳಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಂಡರು.ಆಡಳಿತಕ್ಕೆ ಅಡ್ಡಿಯೇ?: ಆರ್‌ಟಿಐ ಕಾಯ್ದೆಯು ಆಡಳಿತಕ್ಕೆ ಅಡ್ಡಿಯಾಗುವುದೇ ಎನ್ನುವುದನ್ನು ಪರಾಮರ್ಶಿಸಬೇಕಾದ ಅಗತ್ಯವಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.