ಶುಕ್ರವಾರ, ಮೇ 20, 2022
27 °C

ಆರ್‌ಟಿಪಿಎಸ್‌ನಲ್ಲಿ ಅಗ್ನಿ: ಎಂಟು ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಇಲ್ಲಿನ ಆರ್‌ಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎರಡನೇ ಘಟಕದ ಬಾಯ್ಲರ್‌ನಲ್ಲಿ ಬುಧವಾರ ಮುಂಜಾನೆ ಅಗ್ನಿ ಆಕಸ್ಮಿಕ ಸಂಭವಿಸಿ ಎಂಟು ಜನರು ಗಾಯಗೊಂಡಿದ್ದಾರೆ.ಗಾಯಗೊಂಡವರಲ್ಲಿ ಜಿಂದಾವಲಿ ಹಾಗೂ ನರಸಪ್ಪ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಆರು ಗಾಯಾಳುಗಳು ಶಕ್ತಿ ನಗರದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತೀವ್ರವಾಗಿ ಗಾಯಗೊಂಡಿರುವ ಇಬ್ಬರಲ್ಲಿ ಜಿಂದಾವಲಿ ಅವರು ರಾಯಚೂರು ತಾಲ್ಲೂಕು ಜೇಗರಕಲ್ ಗ್ರಾಮದವರಾಗಿದ್ದು, ಗುತ್ತಿಗೆ ನೌಕರರಾಗಿದ್ದಾರೆ. ನರಸಪ್ಪ ಕೆಪಿಸಿ ನೌಕರರಾಗಿದ್ದು ಶಕ್ತಿ ನಗರದ ನಿವಾಸಿ.ಶಕ್ತಿನಗರದ ಗೂಡ್‌ಸಾಬ್, ಹೆಗ್ಗಸನಹಳ್ಳಿ ಗ್ರಾಮದ ಮಲ್ಲಪ್ಪ, ಕರೇಕಲ್ ಗ್ರಾಮದ ಜೆಮ್‌ಶೆಡ್ ಅಲಿ, ಜೇಗರಕಲ್ ಗ್ರಾಮದ ಭೀಮಪ್ಪ, ವಿಜಾಪುರದ ಮಹಮ್ಮದ್ ರಫೀಕ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ರಫೀಕ್ ಗುತ್ತಿಗೆ ನೌಕರರಾಗಿದ್ದು, ಉಳಿದವರು ಕೆಪಿಸಿ ನೌಕರರಾಗಿದ್ದಾರೆ.ಘಟನೆ ವಿವರ: ಆರ್‌ಟಿಪಿಎಸ್‌ನ ಏಳು ಘಟಕಗಳಿಗೂ ಬಾಯ್ಲರ್ ಇದೆ. ಘಟಕಗಳಿಗೆ ಕಲ್ಲಿದ್ದಲು ಬಳಸಿದ ಬಳಿಕ ಸುಟ್ಟ ಕಲ್ಲಿದ್ದಲಿನ ಬೂದಿ ಮಿಶ್ರಿತ ಕೆಂಡ (ಸ್ಲ್ಯಾಗ್) ಕೆಳಗಡೆ ಗುಡ್ಡೆಯಾಕಾರ ಬೀಳುತ್ತದೆ. ಈ ರೀತಿ ಬಿದ್ದ ಬೂದಿ ಮಿಶ್ರಿತ ಕೆಂಡವನ್ನು ಕಾರ್ಮಿಕರು ಉಪಕರಣಗಳಿಂದ ಗುದ್ದಿ ಪುಡಿ ಮಾಡಿ ನಿತ್ಯ ಹೊರ ತೆಗೆಯುತ್ತಾರೆ.ಬುಧವಾರ ಎರಡನೇ ಘಟಕದ ಬಾಯ್ಲರ್ ಕೆಳಗಡೆ ಶೇಖರಣೆಗೊಂಡ ಬೂದಿ ಮಿಶ್ರಿತ ಕೆಂಡವನ್ನು ಸ್ವಚ್ಛಗೊಳಿಸುತ್ತ್ದ್ದಿದಾಗ ಏಕಾಏಕಿ 2ನೇ ಘಟಕ ತಟಕ್ಕನೆ ಕಳಚಿಕೊಂಡು (ಟ್ರಿಪ್)ದರಿಂದ ಕಲ್ಲಿದ್ದಲು ಸುಡುತ್ತಿದ್ದ ಬೆಂಕಿಯು ಬಾಯ್ಲರ್‌ನ ಆಚೆಗೆ ಕೆನ್ನಾಲಿಗೆ ಚಾಚಿದೆ. ಬೂದಿ ಮಿಶ್ರಿತ ಕೆಂಡ ಸಿಡಿದು ಅವಘಡಕ್ಕೆ ಕಾರಣವಾಗಿದೆ ಎಂದು ಆರ್‌ಟಿಪಿಎಸ್ ತಜ್ಞರು ಹಾಗೂ ಈ ಘಟಕದಲ್ಲಿ ಕೆಲಸ ಮಾಡುವ ನೌಕರರು ತಿಳಿಸಿದ್ದಾರೆ.ಗುತ್ತಿಗೆ ನೌಕರರು ಹಾಗೂ ಕೆಪಿಸಿ ಕಾಯಂ ನೌಕರರು ಸೇರಿ ಎಲ್ಲ ರೀತಿ ನೌಕರರು ಇಲ್ಲಿ ಕೆಲಸ ಮಾಡುತ್ತಾರೆ. ಈ ಘಟಕದ ಬೂದಿಮಿಶ್ರಿತ ಕೆಂಡ ತೆಗೆಯುವ ವಿಭಾಗದಲ್ಲಿ ಕನಿಷ್ಠ 25 ನೌಕರರು ಕೆಲಸ ಮಾಡುತ್ತಾರೆ. ಇದರಲ್ಲಿ ಗುತ್ತಿಗೆ ಕಾರ್ಮಿಕರೂ ಇದ್ದಾರೆ. ಈ ನೌಕರರು ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದಾರೆ. 8 ಗಂಟೆ ಹೊತ್ತಿಗೆ ಸ್ಲ್ಯಾಗ್ ತೆಗೆಯುವಾಗ ಈ ಘಟನೆ ಸಂಭವಿಸಿದೆ.`ಸ್ಲ್ಯಾಗ್ ತೆಗೆಯುವಾಗ ಮುಂದುಗಡೆ ಗುತ್ತಿಗೆ ನೌಕರರಾದ ಜಿಂದಾವಲಿ, ನರಸಪ್ಪ ಮತ್ತಿತರರಿದ್ದರು. ಇನ್ನುಳಿದ ಆರೇಳು ಜನರು ಅವರ ಹಿಂದುಗಡೆ ಇದ್ದೆವು. ಇನ್ನೂ 10-15 ಜನ ನಮ್ಮ ಹಿಂದೆ ಇದ್ದರು. ಯುನಿಟ್ ಹಠಾತ್ ಟ್ರಿಪ್ ಆಗಿ ಬೆಂಕಿ ಕೆನ್ನಾಲಿಗೆ ಚಾಚಿತು. ನೋಡ ನೋಡುತ್ತಿದ್ದಂತೆಯೇ ಸ್ಲ್ಯಾಗ್ ಹೊರ ಚಿಮ್ಮಿತು. ಜಿಂದಾವಲಿ ಹಾಗೂ ನರಸಪ್ಪ ಹೆಚ್ಚು ಗಾಯಗೊಂಡರು. ಅವರ ಹಿಂದುಗಡೆ ಇದ್ದ ನಮಗೂ ಗಾಯವಾಯಿತು~ ಎಂದು ಕೆಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಘಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಶಶಿಕುಮಾರ ಮತ್ತು ಆರ್‌ಟಿಪಿಎಸ್ ಅಧಿಕಾರಿಗಳಿಗೆ ವಿವರಿಸಿದರು.ಹಿಂದೆಂದೂ ಕಂಡಿರಲಿಲ್ಲ: `ಎರಡೂವರೆ ದಶಕ ಕಾಲ ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂಥ ದುರ್ಘಟನೆ ಆಗಿರಲಿಲ್ಲ. ಆಗಾಗ ಸಣ್ಣಪುಟ್ಟ ಗಾಯಗಳಾಗುತ್ತಿದ್ದವು. ಇಷ್ಟೊಂದು ತೀವ್ರ ಪ್ರಮಾಣದ ಗಾಯಗಳಾಗಿಲ್ಲ. ಸದ್ಯ ವಿದ್ಯುತ್ ಬೇಡಿಕೆ ಹೆಚ್ಚು ಇದೆ. ಸಾಮಾನ್ಯ ದಿನಗಳಲ್ಲಿ ಮತ್ತು ಈಗಿನ ದಿನಗಳಲ್ಲಿ ಸದಾ ಒತ್ತಡದಲ್ಲಿಯೇ ಮಾಡುವ ಕೆಲಸ ನಮ್ಮದು. ಈ ಅವಘಡ ಆಕಸ್ಮಿಕ ಮತ್ತು ತಾಂತ್ರಿಕ ಕಾರಣಗಳಿಂದ ಆಗಿರುವಂಥದ್ದು~ ಎಂದು ಆರ್‌ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ಜೆ.ವಿ.ಎಲ್. ರೆಡ್ಡಿ ಹಾಗೂ ಆರ್‌ಟಿಪಿಎಸ್ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ಮೃತ್ಯುಂಜಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.