ಆರ್‌ಟಿಪಿಎಸ್: ಮತ್ತೆ 1ನೇ ಘಟಕ ಬಂದ್

7

ಆರ್‌ಟಿಪಿಎಸ್: ಮತ್ತೆ 1ನೇ ಘಟಕ ಬಂದ್

Published:
Updated:

ರಾಯಚೂರು: ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) 8 ಘಟಕಗಳಲ್ಲಿ ಮೂರು ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಆರು ಘಟಕಗಳಲ್ಲಿ ಒಂದು ಘಟಕ ಮತ್ತೆ ಸ್ಥಗಿತಗೊಂಡಿದೆ. ಹೀಗಾಗಿ 1,000 ಮೆಗಾವಾಟ್ ವಿದ್ಯುತ್ ಉತ್ಪಾದನೆ 800 ಮೆಗಾವಾಟ್‌ಗೆ ತಗ್ಗಿದೆ.ಮೊದಲು 3 ಮತ್ತು 8ನೇ ಘಟಕ ಮಾತ್ರ ದುರಸ್ತಿಯಲ್ಲಿದ್ದವು. ಸೋಮವಾರ 1ನೇ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ತೋಯ್ದ ಮತ್ತು ಕಳಪೆ ಕಲ್ಲಿದ್ದಲು ಬಳಕೆ ಇದಕ್ಕೆ ಕಾರಣವಾಗಿದೆ.ಈ ಘಟಕ ದುರಸ್ತಿಯಾಗಲು ಕನಿಷ್ಠ 15 ದಿನ ಆಗಲಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ. ಇದರಿಂದ 160ರಿಂದ 180 ಮೆಗಾವಾಟ್ ವಿದ್ಯುತ್ ಲಭಿಸದಂತಾಗಿದೆ. ಕಳಪೆ ಕಲ್ಲಿದ್ದಲು ಬಳಸುತ್ತಿರುವುದು, ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿರುವುದು, ತಾಂತ್ರಿಕ ಕಾರಣದಿಂದ ಈ ಬಿಕ್ಕಟ್ಟು ಎದುರಾಗಿದೆ.ಎರಡು ದಿನಗಳಿಂದ ಆರ್‌ಟಿಪಿಎಸ್‌ಗೆ ಪ್ರತಿನಿತ್ಯ ತಾಲ್ಚೇರಿ, ವೆಸ್ಟ್ ಕೋಲ್ ಮೈನ್‌ನಿಂದ ಎರಡು ರೇಕ್( ಒಂದು ರೇಕ್‌ನಲ್ಲಿ 3500 ಟನ್) ಪೂರೈಕೆ ಆಗುತ್ತಿದೆ. ಕಳಪೆ ಮತ್ತು ತೋಯ್ದ ಕಲ್ಲಿದ್ದಲು ಬಳಕೆಯಿಂದ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಹೆಚ್ಚಾಗಿದೆ.

ಈ ರೀತಿ ಕಳಪೆ ಕಲ್ಲಿದ್ದಲು ಬಳಕೆ ಮತ್ತು ನಿರಂತರ ಒತ್ತಡದಿಂದ ಸೋಮವಾರ 1ನೇ ಘಟಕ ಸ್ಥಗಿತಗೊಂಡಿದ್ದಾಗಿ ಆರ್‌ಟಿಪಿಎಸ್ ಅಧಿಕಾರಿಗಳು ಹೇಳುತ್ತಾರೆ.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry