ಶುಕ್ರವಾರ, ಜೂನ್ 18, 2021
24 °C

ಆರ್‌ಟಿಪಿಗೆ ಅನುದಾನ; ಸಿಎಂ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ಬಹು ಮಹತ್ವಾಕಾಂಕ್ಷೆಯ ರೈಸ್ ಟೆಕ್ನಾಲಜಿ ಪಾರ್ಕ್‌ಗೆ ರಾಜಕೀಯ ಕಾರಣದಿಂದ ಅನುದಾನ, ಅಭಿವೃದ್ಧಿ ವಿಳಂಬವಾಗಿದೆ. ಬರುವ ತಿಂಗಳಲ್ಲಿ ಸರ್ಕಾರ ಘೋಷಣೆ ಮಾಡಿರುವ 10 ಕೋಟಿ ಅನುದಾನ ಬಿಡುಗಡೆಯಾಗುವುದು. ಮುಖ್ಯಮಂತ್ರಿಗಳೆ ಆಗಮಿಸಿ ಆರ್‌ಟಿಪಿ ಯೋಜನೆಯ ಜೊತೆಗೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಹೇಳಿದರು.ಇಲ್ಲಿಯ ಭತ್ತ ಮತ್ತು ಅಕ್ಕಿ ಉತ್ಪನ್ನಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಸಮೀಪದ ಸಿದ್ದಾಪೂರದಲ್ಲಿ 2.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಮತ್ತೊಂಡು ಎಪಿಎಂಸಿ, ಉಪ ನೋಂದಣಿ, ಮುಂದಿನ ತಿಂಗಳಲ್ಲೆ ಆರಂಭವಾಗಲಿರುವ ಉಪ ಖಜಾನೆ ಯಾರೂ ಮಾಡದ ಕೆಲಸಗಳಾಗಿದ್ದವು. ಇವನ್ನು ಮಾಡಿ ಇತಿಹಾಸ ನಿರ್ಮಿಸಿದ ಸಂತೃಪ್ತಿ ತಮಗಿದೆ.ಹೈದ್ರಾಬಾದ- ಕರ್ನಾಟಕ ಭಾಗದಲ್ಲಿಯ ಎಪಿಎಂಸಿ ತಮ್ಮ ಅವಧಿಯಲ್ಲಿ ನಿಂತು ನೋಡುವಂತೆ ಅಭಿವೃದ್ಧಿ ಮಾಡಿರುವುದಾಗಿ ಹೇಳಿದರು.ಸಮುದಾಯ ಭವನ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಮಾತನಾಡಿ ಜನಪ್ರತಿನಿಧಿಗಳು ಜನಸಾಮಾನ್ಯರ ಬದುಕು ಹಸನಾಗಿಸಲು  ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು.

 

ಗ್ರಾಮಸ್ಥರೂ ಅಭಿವೃದ್ಧಿ ಕಾರ್ಯಗಳ ಜಾರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಬೇಕು. ಅಂದಾಗಲೆ ಸರ್ಕಾರದ ಅಭಿವೃದ್ಧಿ ಯೋಜನೆಗಳು ಗ್ರಾಮಗಳನ್ನು ತಲುಪಲು ಸಾಧ್ಯ. ತಂಗಡಗಿ ಎಪಿಎಂಸಿ ಸಚಿವರಾಗಿದ್ದಾಗ ಮೊದಲು ಕ್ಷೇತ್ರ ನಂತರ ರಾಜ್ಯದ ಅಭಿವೃದ್ಧಿ ನೋಡುವ ಮೂಲಕ ಇತರರಿಗೆ ಆದರ್ಶಪ್ರಾಯರಾಗಿದ್ದರು ಎಂದರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿದರು.ಆರಂಭದಲ್ಲಿ ಮಾತನಾಡಿದ ವಿಶೇಷ ಎಪಿಎಂಸಿ ಅಧ್ಯಕ್ಷ ಬಿ. ಜಿ. ಅರಳಿ ರೈಸ್ ಟೆಕ್ನಾಲಜಿ ಪಾರ್ಕ್‌ಗೆ ಸರ್ಕಾರ 90 ಎಕರೆ ಭೂಮಿ ಮಂಜೂರು ಮಾಡಿದ್ದು, ಶೀಘ್ರದಲ್ಲೆ ಹಣ ಪಾವತಿಸಿ ಭೂಮಿ ಹಸ್ತಾಂತರ ಮಾಡಿಕೊಳ್ಳಲಾಗುವುದು.

 

ಬರುವ ದಿನಗಳಲ್ಲಿ ಇನ್ನುಳಿದ ಭೂಮಿಯನ್ನು ತಗೆದುಕೊಳ್ಳಲಾಗುವುದು. ಯೋಜನೆಗೆ ಶೀಘ್ರವೆ ಚಾಲನೆ ನೀಡಲಾಗುವುದು. ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳ ಜೊತೆಗೆ ಸಿದ್ದಾಪುರದ ಸಮುದಾಯ ಭವನವು ಶಾಸಕ ತಂಗಡಗಿಯವರ ದೂರದೃಷ್ಟಿಯ ಕಾರಣದಿಂದ ಆಗಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಆಗುವ ಲೋಪದೋಷಗಳಿಗೆ ಗ್ರಾಮಸ್ಥರು ಸ್ಪಂದಿಸಬೇಕು. ಮುಂದೆ ಪ್ರಮಾದಗಳಾಗದಂತೆ ಸೂಚನೆ ನೀಡುವ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.ವಿಶೇಷ ಎಪಿಎಂಸಿ ಕಾರ್ಯದರ್ಶಿ ಕೆ. ಜಿ. ಶಾಂತರಾಮ, ಸಮಿತಿ ಉಪಾಧ್ಯಕ್ಷ ಜಿ. ರಾಮಮೋಹನರಾವ್, ಆಡಳಿತ ಮಂಡಳಿ ಸದಸ್ಯರಾದ ಭಾವಿ ಶರಣಪ್ಪ, ಸಿದ್ದಾಪೂರ, ಹನುಮಂತಪ್ಪ, ಶಾಲಿಗನೂರ, ಬೂದಿರಡ್ಡೆಪ್ಪ ನಾಯಕ, ಮಾರೇಶ್ ಮುಷ್ಟೂರಹೇಮಾ ವೆಂಕಟೇಶ್ ದೇಶಪಾಂಡೆ, ಎನ್. ಬಸನಗೌಡ ಪೊಲೀಸ್ ಪಾಟೀಲ್ ಆದಾಪೂರ, ವಿರುಪಾಕ್ಷಗೌಡ ಪೊಲೀಸ್ ಪಾಟೀಲ್, ಮೈಲಾಪೂರ, ಸಿದ್ಧನಗೌಡ ಮಾಲಿಪಾಟೀಲ್ ಬೂದಗುಂಪಾ, ಮುಕ್ತುಂಸಾಬ ಕಟಾಂಬ್ಲಿ ಸಿದ್ದಾಪೂರ, ವೆಂಕೋಬಣ್ಣಶ್ರೇಷ್ಠಿ, ಬಜಾರ್ ಮುರುಡಬಸಪ್ಪ ಕೋಲ್ಕಾರ್ ಯರಡೋಣ ಹಾಗೂ ಚಿಟ್ಟೂರಿ ದುರ್ಗಾರಾವ್ ಬರಗೂರಕ್ಯಾಂಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.