ಆರ್‌ಬಿಐ:ಬಡ್ಡಿ ದರ ಇಳಿಕೆ ಸಾಧ್ಯತೆ :ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಜೂನ್ 18ಕ್ಕೆ

7

ಆರ್‌ಬಿಐ:ಬಡ್ಡಿ ದರ ಇಳಿಕೆ ಸಾಧ್ಯತೆ :ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಜೂನ್ 18ಕ್ಕೆ

Published:
Updated:
ಆರ್‌ಬಿಐ:ಬಡ್ಡಿ ದರ ಇಳಿಕೆ ಸಾಧ್ಯತೆ :ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಜೂನ್ 18ಕ್ಕೆ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇದೇ 18ರಂದು ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರವನ್ನು ಶೇ 0.25ರಷ್ಟು ತಗ್ಗಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಕೈಗಾರಿಕೆ ಮತ್ತು ತಯಾರಿಕೆ  ವಲಯಕ್ಕೆ ಉತ್ತೇಜನ ನೀಡಲು `ರೆಪೊ~ ಮತ್ತು `ರಿವರ್ಸ್ ರೆಪೊ~ ದರ ಇಳಿಕೆಗೆ `ಆರ್‌ಬಿಐ~ ಮುಂದಾಗಬಹುದು ಎಂದು ಮೋರ್ಗನ್ ಸ್ಟ್ಯಾನ್ಲಿ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ವಿಶ್ಲೇಷಿಸಿವೆ. ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ಸ್ಥಿರವಾಗಿರುವುದರಿಂದ `ಜಿಡಿಪಿ~ಗೆ ಉತ್ತೇಜನ ನೀಡಲು ಈ ಬಾರಿ ರೆಪೊ ದರವನ್ನು ಶೇ 7.75ಕ್ಕೆ ತಗ್ಗಿಸಬಹುದು ಎಂದು `ಮೋರ್ಗನ್ ಸ್ಟ್ಯಾನ್ಲಿ~ ಹೇಳಿದೆ.

ಹಿಂದಿನ ಎರಡು ಹಣಕಾಸು ವರ್ಷಗಳಲ್ಲಿ ಗರಿಷ್ಠ ಶೇ 8.4ರವರೆಗೆ ಏರಿಕೆ ಕಂಡಿದ್ದ `ಜಿಡಿಪಿ~ 2011-12ನೇ ಸಾಲಿನಲ್ಲಿ ಶೇ 6.5ಕ್ಕೆ ಕುಸಿದಿದೆ.ಇದರ ಜತೆಗೆ ಕೈಗಾರಿಕೆ ಪ್ರಗತಿ ಕುಸಿದಿರುವುದು, ಡಾಲರ್ ಎದುರು ರೂಪಾಯಿ ಅಪಮೌಲ್ಯ, ರಫ್ತು ಕುಸಿತ ಇತ್ಯಾದಿ ಸಂಗತಿಗಳು ದೇಶದ ಅರ್ಥವ್ಯವಸ್ಥೆಯನ್ನು ಇಕ್ಕಟ್ಟಿಗೆ  ಸಿಲುಕಿಸಿವೆ. `ಆರ್‌ಬಿಐ~ ಬಡ್ಡಿ ದರ ಇಳಿಕೆಯ ಜತೆಗೆ ಉತ್ತಮ ಮುಂಗಾರು ಲಭಿಸಿದರೆ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂದು  ಪ್ರಮುಖ ಹಣಕಾಸು ಸಂಸ್ಥೆ `ಬರ್ಕ್ಲೀಸ್~ ಹೇಳಿದೆ.`ಆದರೆ, ಬಡ್ಡಿ ದರ ಇಳಿಕೆಯಿಂದಾಗಲಿ, ನಗದು ಮೀಸಲು ಅನುಪಾತ (ಸಿಆರ್‌ಆರ್) ಕಡಿತದಿಂದಾಗಲಿ `ಜಿಡಿಪಿ~ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಮುಖ್ಯವಾಗಿ ಕೈಗಾರಿಕೆ ಪ್ರಗತಿಗೆ ಆದ್ಯತೆ ನೀಡಬೇಕು~ ಎಂದು ಮತ್ತೊಂದು ಸಂಸ್ಥೆ  `ಡನ್ ಅಂಡ್ ಬ್ರಾಡ್‌ಶೀಟ್~ ಅಭಿಪ್ರಾಯಪಟ್ಟಿದೆ.13 ಬಾರಿ ಬಡ್ಡಿ ದರ ಹೆಚ್ಚಿಸಿದ ನಂತರ `ಆರ್‌ಬಿಐ~ ರೆಪೊ ದರವನ್ನು 50 ಮೂಲಾಂಶಗಳಷ್ಟು ತಗ್ಗಿಸಿತ್ತು.ಎಸ್‌ಬಿಐ ಬಡ್ಡಿ ದರ ಇಳಿಕೆ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕೃಷಿ ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ (ಎಸ್‌ಎಂಇ) ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.5ರಿಂದ ಶೇ 3.5ರ ವರೆಗೆ ತಗ್ಗಿಸಿದೆ.ಆದರೆ, ಗೃಹ ಸಾಲ ಮತ್ತು ಚಿಲ್ಲರೆ ಸಾಲದ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಸಾಲದ ಮೇಲಿನ ಮೂಲ ಬಡ್ಡಿ ದರದಲ್ಲಿ (ಶೇ 10) ಯಾವುದೇ ವ್ಯತ್ಯಾಸವಾಗಿಲ್ಲ ಎಂದೂ ಬ್ಯಾಂಕ್ ಶುಕ್ರವಾರ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry