ಆರ್‌ಬಿಐ ಅನುಮತಿ ಪಡೆಯದ್ದಕ್ಕೆ ಕಿಡಿ

7

ಆರ್‌ಬಿಐ ಅನುಮತಿ ಪಡೆಯದ್ದಕ್ಕೆ ಕಿಡಿ

Published:
Updated:

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಿಂದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆಗಿರುವುದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಹಿರಿಯ ಅಧಿಕಾರಿಗಳನ್ನು ಸಂಸದೀಯ ಹಣಕಾಸು ಸ್ಥಾಯಿ ಸಮಿತಿಯು ತರಾಟೆ ತೆಗೆದುಕೊಂಡಿತು.ವಿದೇಶಿ ವಿನಿಮಯವನ್ನು ವ್ಯವಸ್ಥಿತವಾಗಿ ನಿಭಾಯಿಸಲು ಆರ್‌ಬಿಐ ಹಾಗೂ ಎಸ್‌ಐಪಿಬಿ ಅನುಮತಿ ಪಡೆಯುವುದು ಅಗತ್ಯವಾಗಿತ್ತು. ಆದರೆ ಆ ಗೊಡವೆಗೇ ಹೋಗದೇ ಮನಬಂದಂತೆ ವರ್ತಿಸಿದ ಐಪಿಎಲ್ ಬಗ್ಗೆಯೂ ಸಮಿತಿಯು ಕಿಡಿಕಾರಿತು.ಸಾಕಷ್ಟು ಪ್ರಚಾರ ಪಡೆದಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಗಳನ್ನು ನಡೆಸಿದ ಸಂದರ್ಭದಲ್ಲಿ ‘ಫೆಮಾ’ಕ್ಕೆ ಮೂರು ಕಾಸಿನ ಕಿಮ್ಮತ್ತು ಕೂಡ ನೀಡದ ವರ್ತನೆಯನ್ನು ಕಟುವಾಗಿ ಟೀಕಿಸಿದ ಸಂಸದೀಯ ಸಮಿತಿಯು ಐಪಿಎಲ್ ಆಡಳಿತ ಮಂಡಳಿ ಸದಸ್ಯರಾದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರಿಗೂ ನೋಟಿಸ್ ಜಾರಿ ಮಾಡಲು ತೀರ್ಮಾನಿಸಿತು. ಯಶ್ವಂತ್ ಸಿನ್ಹಾ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಸೇರಿದ್ದ ಸಮಿತಿಯ ಮುಂದೆ ಹಾಜರಾದ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಕಾರ್ಯದರ್ಶಿ ಎನ್.ಶ್ರೀನಿವಾಸನ್ ಹಾಗೂ ಐಪಿಎಲ್ ಮುಖ್ಯಸ್ಥ ಚಿರಾಯು ಅಮೀನ್ ಅವರು ಸೂಕ್ತವಾದ ವಿವರಣೆ ನೀಡಲಾಗದೇ ತಡಬಡಾಯಿಸಿದರು.ಐಪಿಎಲ್‌ನಿಂದ ಫೆಮಾ ಉಲ್ಲಂಘನೆಯಾದ ಪ್ರಕರಣವು ದೀರ್ಘ ಕಾಲದಿಂದ ವಿಚಾರಣೆಯಿಲ್ಲದೆ ನೆನೆಗುದಿಗೆ ಬಿದ್ದಿತ್ತು. ಈ ಕುರಿತು ಸಂಸದೀಯ ಹಣಕಾಸು ಸ್ಥಾಯಿ ಸಮಿತಿಯು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರೊಂದಿಗೆ ಚರ್ಚಿಸಿತ್ತು. ಈಗ ನೇರವಾಗಿ ಬಿಸಿಸಿಐ ಅಧಿಕಾರಿಗಳನ್ನು ವಿಚಾರಣೆ ಮಾಡಿತು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐನಿಂದ ಸ್ಪಷ್ಟವಾದ ಉತ್ತರವನ್ನು ಕೇಳಿತು.ಹಣ ಹೂಡಿಕೆಯ ವ್ಯವಸ್ಥೆ, ಸ್ವದೇಶಿ ಹಾಗೂ ವಿದೇಶಿ ಆಟಗಾರರಿಗೆ ಹಣ ಪಾವತಿ ಮಾಡುವ ರೀತಿ ಸೇರಿದಂತೆ ಎಲ್ಲ ಹಣಕಾಸು ವ್ಯವಹಾರದ ವಿವರವನ್ನು ನೀಡುವಂತೆ ಸೂಚಿಸಿತು. ಅಷ್ಟೇ ಅಲ್ಲ ಹಿಂದಿನ ಎಲ್ಲ ಲೆಕ್ಕಪತ್ರಗಳ ಪೂರ್ಣ ಮಾಹಿತಿಯನ್ನು ಬಿಸಿಸಿಐ ಸರಿಯಾಗಿ ಹೊಂದಿಲ್ಲದಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಲಾಯಿತು. ರಾಜಸ್ತಾನ್ ರಾಯಲ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ವಿದೇಶದಲ್ಲಿ ವ್ಯವಹರಿಸುತ್ತವೆ;

 

ಆದರೆ ಭಾರತದಲ್ಲಿ ನೆಲೆಸಿವೆ ಎನ್ನುವ ಕುರಿತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಸಂಗ್ರಹವಾದ ವರದಿಯ ಬಗ್ಗೆ ಬಿಸಿಸಿಐ ಅಧಿಕಾರಿಗಳಿಗೆ ಅರಿವೇ ಇಲ್ಲವೇ? ಎಂದು ಸಮಿತಿಯ ಸದಸ್ಯರು ವಿಚಾರಣೆ ಸಂದರ್ಭದಲ್ಲಿ ಪ್ರಶ್ನಿಸಿದರು. ಫ್ರಾಂಚೈಸಿಗಳಿಂದ ಬಂದ ಹಣವು ಶುದ್ಧವಾದದ್ದು ಹಾಗೂ ಅದರಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆಯಾಗಿಲ್ಲ ಎನ್ನುವ ಭರವಸೆಯನ್ನು ಬಿಸಿಸಿಐ ನೀಡುತ್ತದೆಯೇ ಎಂದು ಕೂಡ ಸವಾಲು ಎಸೆಯಲಾಯಿತು.ಇದು ಬಿಸಿಸಿಐ ಹಿರಿಯ ಅಧಿಕಾರಿಗಳಿಗೆ ಮುಜುಗರ ತರುವಂಥ ಸಂದರ್ಭವಾಗಿತ್ತೆನ್ನುವು ದಂತೂ ಸ್ಪಷ್ಟ. ಎಲ್‌ನಲ್ಲಿ ನಡೆದ ಎಲ್ಲ ಅವ್ಯವಹಾರಕ್ಕೂ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರನ್ನು ಹೊಣೆಗಾರರನ್ನಾಗಿ ಮಾಡಿ ನುಣುಚಿಕೊಳ್ಳುವ ಯತ್ನವನ್ನು ಶಶಾಂಕ್ ಮನೋಹರ್, ಎನ್.ಶ್ರೀನಿವಾಸನ್ ಹಾಗೂ ಚಿರಾಯು ಅಮೀನ್ ಪ್ರಯತ್ನಿಸಿದರು. ಅದಕ್ಕೆ ಒಪ್ಪದ ಸಂಸದೀಯ ಸಮಿತಿಯು ‘ಫೆಮಾ’ ಉಲ್ಲಂಘನೆ ಆಗಿರುವ ಬಗ್ಗೆ ಸ್ಪಷ್ಟ ಉತ್ತರವನ್ನು ಎದುರು ನೋಡುವುದಾಗಿ ತಿಳಿಸಿತು.ಭಾರತದಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಐಪಿಎಲ್ ಎರಡನೇ ಅವತರಣಿಕೆಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕ್ರಿಕೆಟ್ ದಕ್ಷಿಣ ಆಫ್ರಿಕಾ ಖಾತೆಗೆ ವರ್ಗಾಯಿಸಿದ ಹಣವೆಷ್ಟು ಹಾಗೂ ಅದಕ್ಕೆ ಆರ್‌ಬಿಐನಿಂದ ಒಪ್ಪಿಗೆ ಪಡೆಯಲಿಲ್ಲವೇಕೆ? ಎನ್ನುವ ಕಟುವಾದ ಪ್ರಶ್ನೆಗಳನ್ನು ಸಮಿತಿಯು ಬಿಸಿಸಿಐ ಹಿರಿಯ ಅಧಿಕಾರಿಗಳ ಮುಂದಿಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry