ಬುಧವಾರ, ಡಿಸೆಂಬರ್ 11, 2019
24 °C

ಆರ್‌ಬಿಐ ಕ್ರಮಕ್ಕೆ ಸ್ವಾಗತ

Published:
Updated:
ಆರ್‌ಬಿಐ ಕ್ರಮಕ್ಕೆ ಸ್ವಾಗತ

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ನಗದು ಮೀಸಲು ಅನುಪಾತ (ಸಿಆರ್‌ಆರ್) ಕಡಿತಗೊಳಿಸಿರುವ ಕ್ರಮವನ್ನು ದೇಶಿ ಉದ್ಯಮ ಸಂಸ್ಥೆಗಳು ಸ್ವಾಗತಿಸಿವೆ.  ಇದರಿಂದ ಮಾರುಕಟ್ಟೆಗೆ ಹೆಚ್ಚುವರಿಯಾಗಿ ್ಙ32 ಸಾವಿರ ಕೋಟಿ  ಬಂಡವಾಳ ಹರಿಯಲಿದ್ದು, ನೆನೆಗುದಿಗೆ ಬಿದ್ದಿರುವ ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ಲಭಿಸಲಿದೆ ಎಂದು ಹೇಳಿದೆ.ಕೇಂದ್ರೀಯ ಬ್ಯಾಂಕ್  `ಸಿಆರ್‌ಆರ್~  ಅನ್ನು ಶೇ 0.5ರಷ್ಟು ಕಡಿತಗೊಳಿಸಿರುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಪ್ರಮಾಣ ಹೆಚ್ಚಲಿದೆ. ಸದ್ಯ `ಸಿಆರ್‌ಆರ್~ ದರ ಶೇ 5.5ರಷ್ಟಾಗಿದ್ದು, ಹೊಸ ಹೂಡಿಕೆಗಳು ಪ್ರಾರಂಭವಾಗಲಿವೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.ಹಣದುಬ್ಬರ ಇಳಿದಿರುವ ಬೆನ್ನಲ್ಲೇ, `ಆರ್‌ಬಿಐ~ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚುವಂತೆ ಮಾಡಿ, ಆರ್ಥಿಕ ವೃದ್ಧಿ ದರ ಚೇತರಿಕೆಗೆ (ಜಿಡಿಪಿ) ಗಮನ ಹರಿಸುತ್ತಿದೆ. ಇದು  ಧನಾತ್ಮಕ ಬೆಳವಣಿಗೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ ( ಅಸೋಚಾಂ) ಪ್ರಧಾನ ಕಾರ್ಯದರ್ಶಿ ಡಿ.ಎಸ್ ರಾವತ್ ಹೇಳಿದ್ದಾರೆ. `ಸದ್ಯ `ಆರ್‌ಬಿಐ~ ಕೈಗೊಂಡಿರುವ ಕ್ರಮವು ಆರ್ಥಿಕ ಸ್ಥಿರತೆ ಸಾಧಿಸುವಲ್ಲಿ ಧೃಡ ಹೆಜ್ಜೆಯಾಗಿದೆ. ನಿಧಾನವಾಗಿ ರೆಪೊ ದರ ಕೂಡ ಇಳಿಯುವ ಸಾಧ್ಯತೆ ಇದ್ದು, ಹೂಡಿಕೆ ಚಟುವಟಿಕೆಗಳಿಗೆ ಚಾಲನೆ ದೊರೆತು, ವೃದ್ಧಿ ದರ ಹಿಂದಿನ ಮಟ್ಟಕ್ಕೆ ಮರಳುವ ವಿಶ್ವಾಸ ಇದೆ~ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ನೂತನ ಅಧ್ಯಕ್ಷ ಆರ್.ವಿ ಕನೊರಿಯಾ ಅಭಿಪ್ರಾಯಪಟ್ಟಿದ್ದಾರೆ.ರಿಯಾಲ್ಟಿ ಕ್ಷೇತ್ರ ಸ್ವಾಗತ: `ಸಿಆರ್‌ಆರ್~ ತಗ್ಗಿಸಿರುವ ಹಿನ್ನೆಲೆಯಲ್ಲಿ, ಗೃಹ ಉದ್ಯಮ ಚೇತರಿಸಿಕೊಳ್ಳಲಿದ್ದು, ಮತ್ತೆ ಮನೆ ಖರೀದಿ ಬೇಡಿಕೆ ಹೆಚ್ಚಲಿದೆ ಎಂದು ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿಗಳು ವಿಶ್ವಾಸ ವ್ಯಕ್ತಪಡಿಸಿವೆ.ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿರುವುದರಿಂದ ಸಹಜವಾಗಿಯೇ ಗೃಹ ಸಾಲ ಬೇಡಿಕೆ ಹೆಚ್ಚಲಿದೆ. ಒಮ್ಮೆ ಬಡ್ಡಿ ದರಗಳು ಇಳಿಯತೊಡಗಿದರೆ ಹೊಸ ಮನೆ ಖರೀದಿ ಚಟುವಟಿಕೆಗಳು ಗರಿಗೆದರಲಿವೆ  ಎಂದು ಭಾರತೀಯ ರಿಯಲ್ ಎಸ್ಟೇಟ್ ಒಕ್ಕೂಟಗಳ ಮಹಾಸಂಘ `ಕ್ರೆಡಾಯ್~ ಅಧ್ಯಕ್ಷ ಲಲಿತ್ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.`ಸಿಆರ್‌ಆರ್~ ತಗ್ಗಿರುವುದರಿಂದ ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವಲಯಗಳಿಗೆ ಆರ್ಥಿಕ ಉತ್ತೇಜನ ಲಭಿಸಲಿದೆ~ ಎಂದು ಯೂನಿಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಯ್ ಚಂದ್ರ ಅವರೂ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)