ಆರ್‌ಬಿಐ ಹಣಕಾಸು ನೀತಿ ನಿರ್ಣಾಯಕ

7

ಆರ್‌ಬಿಐ ಹಣಕಾಸು ನೀತಿ ನಿರ್ಣಾಯಕ

Published:
Updated:
ಆರ್‌ಬಿಐ ಹಣಕಾಸು ನೀತಿ ನಿರ್ಣಾಯಕ

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಟಿಸಲಿರುವ ಮೊದಲ ತ್ರೈಮಾಸಿಕ ಹಣಕಾಸು ನೀತಿ ಮತ್ತು ಕಾರ್ಪೊರೇಟ್ ಕಂಪೆನಿಗಳ ಏಪ್ರಿಲ್-ಜೂನ್ ಅವಧಿಯ ಹಣಕಾಸು ಸಾಧನೆ ಈ ವಾರದ ಷೇರುಪೇಟೆ ವಹಿವಾಟು ನಿರ್ಧರಿಸಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ ಸೇರಿದಂತೆ ಪ್ರಮುಖ ಕಂಪೆನಿಗಳು ಈ ವಾರ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. `ಆರ್‌ಬಿಐ' ಜುಲೈ 30ರಂದು ಹಣಕಾಸು ನೀತಿ ಪ್ರಕಟಿಸಲಿದೆ. ಹಣದುಬ್ಬರ ಹೆಚ್ಚಿರುವುದರಿಂದ ಈ ಬಾರಿಯೂ `ರೆಪೊ' ದರ ಮತ್ತು ನಗದು ಮೀಸಲು ಅನುಪಾತದಲ್ಲಿ (ಸಿಆರ್‌ಆರ್) ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಈ ಅಂಶಗಳೇ ಈ ವಾರದ ಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು `ಎಡಿಲ್‌ವೈಸ್ ರಿಸರ್ಚ್' ಸಂಸ್ಥೆ ಅಭಿಪ್ರಾಯಪಟ್ಟಿದೆ.ಚಿನ್ನದ ಆಮದು ಹೊರೆ ತಗ್ಗಿಸಲು ಮತ್ತು ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಕುಸಿತ ತಡೆಯಲು `ಆರ್‌ಬಿಐ' ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ಹಣಕಾಸು ನೀತಿಯಲ್ಲೂ ಇನ್ನಷ್ಟು ಬಿಗಿ ಕ್ರಮ ಅನುಸರಿಸಿದರೆ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು `ಬೊನಾಂಜಾ ಪೋರ್ಟ್‌ಪೊಲಿಯೊ' ಸಂಸ್ಥೆ ವಿಶ್ಲೇಷಿಸಿದೆ. `ಈ ವಾರ ರಾಷ್ಟ್ರಿಯ ಷೇರು  ಸೂಚ್ಯಂಕ `ನಿಫ್ಟಿ' 5,870 ಅಂಶಗಳ ಗಡಿ ದಾಟುವುದು ಕಷ್ಟ ಎಂದು ಸಂಸ್ಥೆ ವಿಶ್ಲೇಷಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry