ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ...

7

ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ...

Published:
Updated:

ನವದೆಹಲಿ (ಪಿಟಿಐ): ದೀಪಾವಳಿಗೆ ಮುನ್ನಾ ದಿನ (ಅಕ್ಟೋಬರ್ 25) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎರಡನೆಯ ತ್ರೈಮಾಸಿಕ ಅವಧಿಯ ತನ್ನ ಹಣಕಾಸು ನೀತಿಯ ಪರಾಮರ್ಶೆ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್ ಶುಕ್ರವಾರ ಇಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.`ವಿತ್ತೀಯ ಪರಾಮರ್ಶೆ ಪ್ರಕಟಿಸುವ ಪೂರ್ವದಲ್ಲಿ ಹಣಕಾಸು ಸಚಿವರನ್ನು ಭೇಟಿಯಾಗಿ ಚರ್ಚಿಸುವುದು ಸಂಪ್ರದಾಯ. ಸದ್ಯದ ಪರಿಸ್ಥಿತಿಯಲ್ಲಿ ಒಟ್ಟಾರೆ ಅರ್ಥವ್ಯವಸ್ಥೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇವೆ ಎಂದು ಸುಬ್ಬರಾವ್ ಅವರು ಪ್ರಣವ್ ಭೇಟಿಯ  ನಂತರ ಸುದ್ದಿಗಾರರಿಗೆ ತಿಳಿಸಿದರು. ಮಾರ್ಚ್ 2010ರಿಂದ `ಆರ್‌ಬಿಐ~ ಇಲ್ಲಿಯವರೆಗೆ 12 ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿದ್ದು, ಸಾಲದ ಮೇಲಿನ ಮೂಲ ದರ ಶೇ 3.5ರಷ್ಟು ಹೆಚ್ಚಾಗಿದೆ. ಅಕ್ಟೋಬರ್ 8ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಶೇ 10.60ಕ್ಕೆ ಏರಿಕೆಯಾಗಿದ್ದು, ಎರಡಂಕಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.`ಜಾಗತಿಕ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಹೆಚ್ಚಳ,  ಕೈಗಾರಿಕೆ ಪ್ರಗತಿ ಕುಸಿತ ಜತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರ ಕುರಿತು ಮುಖ್ಯವಾಗಿ ಚರ್ಚೆ ನಡೆಸಿದ್ದೇವೆ. ರೂಪಾಯಿ ಮೌಲ್ಯ ಡಾಲರ್ ಎದುರು 18 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದ್ದು, ರೂ50 ದಾಟಿದೆ.  ಇದು ಕಳವಳಕಾರಿ ಸಂಗತಿಯಾಗಿದ್ದು, ದೇಶೀಯ ಅರ್ಥ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸುಬ್ಬರಾವ್  ಹೇಳಿದ್ದಾರೆ.`ದೇಶದ ಆರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ `ಆರ್‌ಬಿಐ~ ಮತ್ತು ಸರ್ಕಾರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವಿತ್ತೀಯ ನಿರ್ವಹಣೆ  ಮತ್ತು ಹಣಕಾಸು ನೀತಿಗಳ ನಡುವೆ ಹೆಚ್ಚಿನ ಸಹಕಾರದ ಅಗತ್ಯವಿದೆ. ಇದರಿಂದ ಅರ್ಥವ್ಯವಸ್ಥೆ ಇನ್ನಷ್ಟು ಸ್ಥಿರಗೊಳ್ಳಲಿದೆ ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry