ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು

7

ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು

Published:
Updated:
ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಸವಾಲು

ಬೆಂಗಳೂರು: ಮೊದಲ ಪಂದ್ಯದಲ್ಲಿ ಲಭಿಸಿದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಪರಸ್ಪರ ಪೈಪೋಟಿ ನಡೆಸಲಿವೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಹೋರಾಟದಲ್ಲಿ ಗೆಲುವು ಯಾರಿಗೆ ಒಲಿಯುವುದು ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. ಡೇನಿಯಲ್ ವೆಟೋರಿ ನೇತೃತ್ವದ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತವರು ಅಂಗಳದಲ್ಲಿ ಆಡುವ ಮೊದಲ ಪಂದ್ಯ ಇದು. ಕೊಚ್ಚಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್‌ಗಳಿಂದ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಜಯ ಸಾಧಿಸಿತ್ತು.

 

ಮತ್ತೊಂದೆಡೆ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್ ಭಾನುವಾರ ನಡೆದ ಪಂದ್ಯದಲ್ಲಿ ದೆಹಲಿ ಡೇರ್‌ಡೆವಿಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತ್ತು. ಗೆಲುವಿನ ಓಟವನ್ನು ಮುಂದುವರಿಸುವ ತವಕದಲ್ಲಿ ಉಭಯ ತಂಡಗಳು ಇವೆ. ಮುಂಬೈ ತಂಡದ ಲಸಿತ್ ಮಾಲಿಂಗ ಅವರು ವೆಟೋರಿ ಬಳಗಕ್ಕೆ ಭಯ ಹುಟ್ಟಿಸಿರುವುದು ನಿಜ. ಶ್ರೀಲಂಕಾದ ಈ ವೇಗಿ ದೆಹಲಿ ವಿರುದ್ಧ 13 ರನ್‌ಗಳಿಗೆ 5 ವಿಕೆಟ್ ಪಡೆದಿದ್ದರು. ಅವರು ಹರಿಯಬಿಡುವ ಅಪಾಯಕಾರಿ ಯಾರ್ಕರ್ ಎಸೆತಗಳನ್ನು ಸಮರ್ಥವಾಗಿ ಎದುರಿಸಿ ನಿಂತರೆ ಮಾತ್ರ ರಾಯಲ್ ಚಾಲೆಂಜರ್ಸ್‌ಗೆ ಗೆಲುವಿನ ಕನಸು ಕಾಣಬಹುದು.

 

ಕಳೆದ ಪಂದ್ಯದಲ್ಲಿ ಮಾಲಿಂಗ ಅವರು ಸೆಹ್ವಾಗ್‌ಗೆ ಒಂದು ಮೇಡನ್ ಓವರ್ ಎಸೆದಿದ್ದರು. ‘10 ವರ್ಷಗಳ ಅವಧಿಯಲ್ಲಿ ನಾನು ಎದುರಿಸಿದ ಮೊದಲ ಮೇಡನ್ ಓವರ್ ಇದು’ ಎಂದು ಪಂದ್ಯದ ಬಳಿಕ ಸೆಹ್ವಾಗ್ ಪ್ರತಿಕ್ರಿಯಿಸಿದ್ದರು. ಮಾಲಿಂಗ ಅವರ ಬೌಲಿಂಗ್‌ನ ಮೊನಚು ಏನೆಂಬುದು ಇದರಿಂದ ತಿಳಿಯಬಹುದು. ಸಚಿನ್ ತೆಂಡೂಲ್ಕರ್ ಅವರನ್ನು ಬೇಗನೇ ಔಟ್ ಮಾಡುವುದು ಮತ್ತು ಮಾಲಿಂಗ ದಾಳಿಯನ್ನು ಮೆಟ್ಟಿನಿಲ್ಲುವುದು ಆರ್‌ಸಿಬಿ ತಂಡದ ಯೋಜನೆಗಳಲ್ಲಿ ಪ್ರಮುಖವಾದುದು. ಸಚಿನ್ ಅವರನ್ನು ಬಿಟ್ಟರೆ ಮುಂಬೈ ತಂಡದಲ್ಲಿರುವ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳೆಂದರೆ ಕೀರನ್ ಪೊಲಾರ್ಡ್ ಮತ್ತು ರೋಹಿತ್ ಶರ್ಮ ಮಾತ್ರ.

 

ತೆಂಡೂಲ್ಕರ್ ಮತ್ತು ಜಹೀರ್ ಖಾನ್ ನಡುವಿನ ಹೋರಾಟ ಕುತೂಹಲ ಮೂಡಿಸಿದೆ. ಭಾರತ ತಂಡಕ್ಕೆ ಆಡುವ ವೇಳೆ ಜಹೀರ್ ಬೌಲಿಂಗ್ ಮಾಡುವ ಸಂದರ್ಭ ಸಚಿನ್ ಕೆಲವೊಂದು ಸೂಚನೆ ನೀಡುವುದು ಸಾಮಾನ್ಯ. ಆದ್ದರಿಂದ ಮಂಗಳವಾರ ಇವರಲ್ಲಿ ಯಾರು ಮೇಲುಗೈ ಸಾಧಿಸುವರು ಎಂಬುದನ್ನು ನೋಡಬೇಕು. ಮಾಲಿಂಗ ಮತ್ತು ತಿಲಕರತ್ನೆ ದಿಲ್ಶಾನ್ ನಡುವಿನ ಕಾದಾಟವೂ ಪಂದ್ಯದ ಕಾವನ್ನು ಹೆಚ್ಚಿಸಲಿದೆ.

 

ಆರ್‌ಸಿಬಿ ತಂಡ ಕೊಚ್ಚಿ ವಿರುದ್ಧ ಆಲ್‌ರೌಂಡ್ ಪ್ರದರ್ಶನ ನೀಡಿತ್ತು. ತವರು ನೆಲದಲ್ಲೂ ಅಂತಹದೇ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಗಳಿಸಿದ್ದ ಎಬಿ ಡಿವಿಲಿಯರ್ಸ್ ಜೊತೆಗೆ ದಿಲ್ಶಾನ್ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ.

 

ಯುವ ಪ್ರತಿಭೆಗಳಾದ ವಿರಾಟ್ ಕೊಹ್ಲಿ, ಸೌರಭ್ ತಿವಾರಿ ಮತ್ತು ಮಯಾಂಕ್ ಅಗರ್‌ವಾಲ್ ಅವರೂ ಬಿರುಸಿನ ಆಟವಾಡುವ ತಾಕತ್ತು ಹೊಂದಿದ್ದಾರೆ. ಮಯಾಂಕ್ ಮೊದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯ ತೋರಿಸಿದ್ದರು. ಬೌಲಿಂಗ್‌ನಲ್ಲಿ ಜಹೀರ್ ಮತ್ತು ನಾಯಕ ವೆಟೋರಿಗೆ ಸಾಥ್ ನೀಡಲು ಡಿರ್ಕ್ ನಾನೆಸ್ ಇದ್ದಾರೆ. ಉಭಯ ತಂಡಗಳು ಸೋಮವಾರ ಹೊನಲುಬೆಳಕಿನಡಿ ಅಭ್ಯಾಸ ನಡೆಸಿದವು. ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ರೋಚಕ ಪಂದ್ಯಗಳು ನಡೆದಿದ್ದವು. ಐಪಿಎಲ್‌ನಲ್ಲೂ ಅದು ಪುನರಾವರ್ತನೆಯಾಗಬಹುದು ಎಂಬ ನಿರೀಕ್ಷೆಯನ್ನು ಉದ್ಯಾನನಗರಿಯ ಜನತೆ ಇಟ್ಟುಕೊಂಡಿದ್ದಾರೆ.

ತಂಡಗಳು

ರಾಯಲ್ ಚಾಲೆಂಜರ್ಸ್, ಬೆಂಗಳೂರು

ಡೇನಿಯಲ್ ವೆಟೋರಿ (ನಾಯಕ), ವಿರಾಟ್ ಕೊಹ್ಲಿ, ತಿಲಕರತ್ನೆ ದಿಲ್ಶಾನ್, ಎಬಿ ಡಿವಿಲಿಯರ್ಸ್, ಜಹೀರ್ ಖಾನ್, ಚೇತೇಶ್ವರ ಪೂಜಾರ, ಸೌರಭ್ ತಿವಾರಿ, ಮೊಹಮ್ಮದ್ ಕೈಫ್, ಮಯಾಂಕ್ ಅಗರ್‌ವಾಲ್, ಜಾನ್ ವಾನ್ ಡೆರ್ ವರ್ಥ್, ಜೊನಾಥನ್ ವಾಂಡೀರ್, ಸಿ.ಎಂ. ಗೌತಮ್, ಚಾರ್ಲ್ ಲಾಂಗ್‌ವೆಲ್ಟ್, ಡಿರ್ಕ್ ನಾನೆಸ್, ಅಭಿಮನ್ಯು ಮಿಥುನ್, ಅಸದ್ ಖಾನ್ ಪಠಾಣ್.

ಮುಂಬೈ ಇಂಡಿಯನ್ಸ್

ಸಚಿನ್ ತೆಂಡೂಲ್ಕರ್ (ನಾಯಕ), ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ರಾಜಗೋಪಾಲ್ ಸತೀಶ್, ರೋಹಿತ್ ಶರ್ಮ, ಟಿ. ಸುಮನ್, ಆಂಡ್ರ್ಯೂ ಸೈಮಂಡ್ಸ್, ದಿಲ್ಹಾರ ಫೆರ್ನಾಂಡೊ, ಜೇಮ್ಸ್ ಫ್ರಾಂಕ್ಲಿನ್, ಹರಭಜನ್ ಸಿಂಗ್, ಮೊಯ್ಸಸ್ ಹೆನ್ರಿಕ್ಸ್, ಡೇವಿ ಜೇಕಬ್ಸ್, ಧವಳ್ ಕುಲಕರ್ಣಿ, ಲಸಿತ್ ಮಾಲಿಂಗ, ಅಲಿ ಮುರ್ತಜಾ, ಮುನಾಫ್ ಪಟೇಲ್, ಆದಿತ್ಯ ತಾರೆ.

ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೆಟ್ ಮ್ಯಾಕ್ಸ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry