ಶುಕ್ರವಾರ, ನವೆಂಬರ್ 22, 2019
25 °C

ಆರ್‌ಸಿಬಿ ಕಲಿಗಳ ಫಿಟ್‌ನೆಸ್ ಗುಟ್ಟು

Published:
Updated:
ಆರ್‌ಸಿಬಿ ಕಲಿಗಳ ಫಿಟ್‌ನೆಸ್ ಗುಟ್ಟು

ನಗರದಲ್ಲಿ ಮಂಗಳವಾರ (ಏ.23) ನಡೆದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಅತಿ ವೇಗದ ಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಕ್ರಿಸ್ ಗೇಲ್ ಸೇರಿದಂತೆ ಬೆಂಗಳೂರು ರಾಯಲ್ ಚಾಲೆಂಜರ್ಸ್‌ (ಆರ್‌ಸಿಬಿ) ತಂಡದ ಹಲವು ತಾರೆಯರು ಬರುತ್ತಾರೆಂಬ ಸುದ್ದಿ ಅದಾಗಲೇ ಮಾಲ್ ತುಂಬಾ ಹರಡಿತ್ತು. ಕ್ಷಣಕ್ಷಣಕ್ಕೂ ಜನ ಹೆಚ್ಚುತ್ತಲೇ ಇದ್ದರು. ಕ್ರಿಕೆಟ್ ತಾರೆಯರ ಹೆಸರನ್ನು ಪದೇ ಪದೇ ಕೂಗಿ ಕರೆಯುತ್ತಿದ್ದ ಅಭಿಮಾನಿಗಳ ಎದೆ ಬಡಿತದಲ್ಲೂ ಕ್ರಿಕೆಟ್ ತಾರೆಯರ ಹೆಸರೇ ಸೇರಿಕೊಂಡಂತಿತ್ತು.ಕೋರಮಂಗಲದ ಫೋರಂ ಮಾಲ್‌ನಲ್ಲಿ ರೀಬಾಕ್ ತನ್ನ ಆಧುನಿಕ ಫಿಟ್‌ನೆಸ್ ಪರಿಕರ `ರೀಬಾಕ್ ಕ್ರಾಸ್‌ಫಿಟ್' ಅನ್ನು ಹೊರತಂದಿದ್ದು, ಅದನ್ನು ಪರಿಚಯಿಸಲೆಂದು ಕ್ರಿಕೆಟ್ ತಾರೆಗಳನ್ನು ಬರಮಾಡಿಕೊಂಡಿತ್ತು. ಕ್ರೀಡೆಯಲ್ಲಿರುವವರಿಗೆ ತುಂಬಾ ಅನುಕೂಲವಾಗುವ ಕೆಲವು ಫಿಟ್‌ನೆಸ್ ಪರಿಕರಗಳನ್ನು ಪರಿಚಯಿಸಲೆಂದು `ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡದ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿತ್ತು.ಮೊಬೈಲ್‌ಗಳಲ್ಲಿ ತಮ್ಮ ನೆಚ್ಚಿನ ತಾರೆಗಳನ್ನು ಕ್ಲಿಕ್ಕಿಸಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಸಾಥ್ ನೀಡಿದ್ದು ಸಂಗೀತ. ಕಾದು ಕಾದು ಬೇಸತ್ತಿದ್ದ ಮನಗಳಿಗೆ ಒಂದಿಷ್ಟು ಮನರಂಜನೆ ನೀಡಲು ಫಿಟ್‌ನೆಸ್ ಕಸರತ್ತುಗಳೂ ನಡೆದವು.ಸುಮಾರು ಅರ್ಧ ಗಂಟೆ ನಿಂತಲ್ಲೇ ಕಾಯುತ್ತಿದ್ದ ಅಭಿಮಾನಿಗಳ ಕೂಗು ಹೆಚ್ಚಾಗುತ್ತಲೇ ಇತ್ತು. ಕೊನೆಗೂ ಕ್ರಿಕೆಟ್ ತಾರೆಗಳು ನೂಕು ನುಗ್ಗಲಿನ ನಡುವೆಯೇ ವೇದಿಕೆ ಮೇಲೆ ಕಾಣಿಸಿಕೊಂಡರು. ಡೇನಿಯಲ್ ವೆಟೋರಿ, ಕ್ರಿಸ್ ಗೇಲ್, ಮುತ್ತಯ್ಯ ಮುರಳೀಧರನ್, ತಿಲಕರತ್ನೆ ದಿಲ್ಶಾನ್, ಜಹೀರ್ ಖಾನ್ ಅವರೊಂದಿಗೆ ಯುವ ಕ್ರಿಕೆಟ್ ತಾರೆಯರಾದ ಅಭಿನವ್ ಮತ್ತು ರಾಹುಲ್ ಅವರೂ ಇದ್ದರು. ಎಲ್ಲರೂ ಬಂದು ನಿಂತಿದ್ದೇ, ಒಂದಷ್ಟು ನಿಮಿಷ ಎಲ್ಲೆಡೆಯಿಂದ ಚಪ್ಪಾಳೆ, ಸಂತಸದ ಕೂಗು.ನಾಲ್ಕು ಅಂತಸ್ತಿನವರೆಗೂ ತುಂಬಿಕೊಂಡಿದ್ದ ಜನರನ್ನು ನೋಡಿ ಅವರೆಲ್ಲ ಸಂತಸದ ನಗೆ ಬೀರಿದರಷ್ಟೆ, ಕಾದಿದ್ದ ಬೇಸರ ಮಾಯವಾಗಿತ್ತು.ಒಬ್ಬ ಕ್ರೀಡಾಪಟು ಕಟ್ಟುಮಸ್ತಾಗಿರಬೇಕೆಂದರೆ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬ ಸರಳ ಪ್ರಶ್ನೆಯನ್ನು ಕ್ರಿಕೆಟ್ ತಾರೆಯರ ಎದುರು ಇಡಲಾಯಿತು. ಒಬ್ಬೊಬ್ಬರದ್ದೂ ಒಂದೊಂದು ಉತ್ತರ. `ಜಿಮ್‌ಗೆ ಹೋಗುವುದೇ ನನ್ನ ಫಿಟ್‌ನೆಸ್ ಗುಟ್ಟು. ನಿಮಗೆ ಎಷ್ಟು ಸಾಧ್ಯವೋ ಅಷ್ಟು ವ್ಯಾಯಾಮ ಮಾಡುತ್ತಲೇ ಇರಿ, ನೀವೂ ಫಿಟ್ ಆಗುತ್ತೀರ' ಎಂದು ಮುತ್ತಯ್ಯ ಮುರಳೀಧರನ್ ಹೇಳಿದರೆ, `ಜನರ ಬೆಂಬಲವೇ ನನ್ನ ಯಶಸ್ಸಿನ ಗುಟ್ಟು' ಎಂದು ಸರಳವಾಗಿ ಹೇಳಿ ಮುಗಿಸಿದರು ಕ್ರಿಸ್ ಗೇಲ್.`ಹೊಸ ಶೈಲಿಯ ಗಡ್ಡ ಬಿಟ್ಟಿದ್ದೇನೆ. ನನಗೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವುದೆಂದರೆ ಅಚ್ಚುಮೆಚ್ಚಿನ ವಿಷಯ' ಎಂದ ದಿಲ್ಶಾನ್ ಮಾತಿಗೂ ಮೆಚ್ಚುಗೆ ಬಂತು. ಯಾರು ಹೆಚ್ಚು ಫಿಟ್ ಎಂದು ಯುವ ಕ್ರಿಕೆಟ್ ತಾರೆಯರಾದ ರಾಹುಲ್ ಮತ್ತು ಅಭಿನವ್ ಅವರಿಗೆ ಕಡಿಮೆ ಅವಧಿಯ ಫಿಟ್‌ನೆಸ್ ಆಟ ಆಡಿಸಲಾಯಿತು. 19 ಸೆಕೆಂಡ್‌ಗಳಲ್ಲಿ ಮೂರು ಫಿಟ್‌ನೆಸ್ ವ್ಯಾಯಾಮ ಮಾಡಿ ಮುಗಿಸಿದ ಅಭಿನವ್‌ಗೆ ಒಂದು ಬಹುಮಾನವೂ ಸಿಕ್ಕಿತು.ಅಭಿಮಾನಿಗಳ ಬಯಕೆಗೆ ಸ್ಪಂದಿಸಿದ ಕ್ರಿಸ್ ಗೇಲ್, ತಮ್ಮ ಹಿಂದಿನ ದಿನದ ದಾಖಲೆ ಆಟದ ಬಗ್ಗೆ ಮಾತು ಹಂಚಿಕೊಂಡರು. `ಆರ್‌ಸಿಬಿ ಜೊತೆ ಗುರುತಿಸಿಕೊಂಡಿರುವುದರಿಂದ ನನಗೆ ಖುಷಿಯಾಗಿದೆ. ನನ್ನ ದಾಖಲೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ ಎಂದರೆ ಸಹಜವಾಗಿಯೇ ಸಂತಸವಾಗುತ್ತದೆ. ಆಟ ಮುಗಿದ ತಕ್ಷಣ ಮೈದಾನದಿಂದ ಡ್ರೆಸಿಂಗ್ ರೂಮ್‌ಗೆ ಹೋಗಿದ್ದೇ ಅವ್ಯಕ್ತ ಸಂತಸ ತುಂಬಿಕೊಂಡಿತ್ತು. ಇಲ್ಲಿನವರ ಬೆಂಬಲಕ್ಕೆ ತುಂಬಾ ಧನ್ಯವಾದ' ಎಂದು ಹೇಳಿಕೊಂಡ ಕ್ರಿಸ್‌ಗೇಲ್, ಒತ್ತಡದ ಮನಸ್ಸಿನಿಂದ ಆಡದೆ, ಅನುಭವಿಸುತ್ತಾ, ಸಂತೋಷದಿಂದ ಆಟವಾಡಿ, ಸೂಕ್ತ ರೀತಿಯಲ್ಲಿ ಅಭ್ಯಾಸ ಮಾಡಿ, ಹಾಗೆಯೇ ನಿದ್ದೆ ಮಾಡುವುದೆಂದರೆ ನನಗೆ ತುಂಬಾ ಇಷ್ಟ' ಎಂದು ಹೇಳಿ ಎಲ್ಲರಲ್ಲೂ ನಗು ಮೂಡಿಸಿದರು.ಎಲ್ಲರ ಮಾತು ಮುಗಿಯುತ್ತಿದ್ದಂತೆ ಅಭಿಮಾನಿಗಳ ಕಡೆಯಿಂದ ಗಂಗ್ನಂ ಸ್ಟೈಲ್ ಹಾಡು ಕೇಳಿಬಂತು. ಕ್ರಿಕೆಟ್ ತಾರೆಯರೆಲ್ಲರೂ ಕೂಡಿ ಒಂದು ಕ್ಷಣ ಆಟ ಮರೆತವರಂತೆ ಗಂಗ್ನಂ ಸ್ಟೈಲ್ ನೃತ್ಯಕ್ಕೆ ಹೆಜ್ಜೆ ಹಾಕಿದರು. ಅವರಿಗೆ ಅಭಿಮಾನಿಗಳೂ ಸಾಥ್ ನೀಡಿದರು. ಕ್ರಿಕೆಟ್ ತಾರೆಯರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ನೂಕು ನುಗ್ಗಲು ಇನ್ನೂ ಹೆಚ್ಚುತ್ತಿತ್ತು.

ಪ್ರತಿಕ್ರಿಯಿಸಿ (+)