ಭಾನುವಾರ, ಫೆಬ್ರವರಿ 28, 2021
23 °C

ಆರ್‌ಸಿಬಿ ಕಳಾಹೀನ ಏಕೆ ?

ಮಹಮ್ಮದ್‌ ನೂಮಾನ್‌ Updated:

ಅಕ್ಷರ ಗಾತ್ರ : | |

ಆರ್‌ಸಿಬಿ ಕಳಾಹೀನ ಏಕೆ ?

‘ಯುವರಾಜ್‌ ಸಿಂಗ್‌ ಲಭ್ಯ ಆಗಿರುವುದರಿಂದ ತಂಡ ಬಲಿಷ್ಠವಾಗಿ ಕಾಣುತ್ತಿದೆ. ಯಶಸ್ವಿ ಆಲ್‌ರೌಂಡರ್‌ ಆಗಿರುವ ಆವರನ್ನು ಖರೀದಿಸಿರುವುದು ಸಂತಸ ಉಂಟುಮಾಡಿದೆ’  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಲೀಕ ವಿಜಯ್‌ ಮಲ್ಯ ಅವರ ಮಾತುಗಳಿವು. ಫೆಬ್ರುವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಆಟಗಾರರ ಹರಾಜಿನಲ್ಲಿ ₨ 14 ಕೋಟಿ ಮೊತ್ತ ನೀಡಿ ‘ಯುವಿ’ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡ ಬಳಿಕ ಮಲ್ಯ ಈ ಮಾತುಗಳನ್ನಾಡಿದ್ದರು.ಕ್ರಿಸ್‌ ಗೇಲ್‌, ವಿರಾಟ್‌ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರಂತಹ  ಆಟಗಾರರಿದ್ದ ತಂಡಕ್ಕೆ ಯುವರಾಜ್‌ ಕೂಡಾ ಸೇರಿಕೊಂಡಾಗ ಮಲ್ಯ ಅವರಿಗೆ ಸಂತಸ ಉಂಟಾದದ್ದು ಸಹಜ. ಐಪಿಎಲ್ ಹರಾಜಿನ ಬಳಿಕ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ತಂಡವಾಗಿ ಆರ್‌ಸಿಬಿ ಹೊರಹೊಮ್ಮಿತ್ತು. ತಾನು ಹೊಂದಿರುವ ಅಪಾರ ಬ್ಯಾಟಿಂಗ್‌ ಶಕ್ತಿಯಿಂದಲೇ ಚೊಚ್ಚಲ ಟ್ರೋಫಿ ಗೆಲ್ಲಬಹುದು ಎಂಬ ಕನಸಿನೊಂದಿಗೆ ಐಪಿಎಲ್‌ನ ಏಳನೇ ಆವೃತ್ತಿಯ ಟೂರ್ನಿಯಲ್ಲಿ ಈ ತಂಡ ಕಣಕ್ಕಿಳಿದಿತ್ತು.ಇದೀಗ ಐಪಿಎಲ್‌ನ ಲೀಗ್‌ ಹಂತಕ್ಕೆ ತೆರೆಬಿದ್ದಿದೆ. ಆರ್‌ಸಿಬಿ ಎಲ್ಲಿದೆ? ಕಪ್‌ ಗೆಲ್ಲುವುದಿರಲಿ, ‘ಪ್ಲೇ ಆಫ್‌’ ಹಂತ ಪ್ರವೇಶಿಸದೆಯೇ ಹೊರಬಿದ್ದಿದೆ. ಚೊಚ್ಚಲ ಟ್ರೋಫಿ ಎತ್ತಿಹಿಡಿಯಬೇಕೆಂಬ ಆಸೆ ಈ ಬಾರಿಯೂ ಕೈಗೂಡಲಿಲ್ಲ.2008 ರಲ್ಲಿ ನಡೆದ ಚೊಚ್ಚಲ ಋತುವಿನ ಟೂರ್ನಿಯಲ್ಲಿ ಏಳನೇ ಸ್ಥಾನ ಪಡೆದದ್ದು ತಂಡದ ಇದುವರೆಗಿನ ಅತ್ಯಂತ ಕೆಟ್ಟ ಪ್ರದರ್ಶನ. ಆ ಬಳಿಕ ಒಮ್ಮೆಯೂ ಐದಕ್ಕಿಂತ ಕೆಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅಗ್ರ ಐದರಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

ಅತಿಯಾದ ಆತ್ಮವಿಶ್ವಾಸ, ಆಟಗಾರರ ಮೇಲಿದ್ದ ನಿರೀಕ್ಷೆಯ ಭಾರ,  ಬ್ಯಾಟಿಂಗ್‌ ಬಲವನ್ನು ಹೆಚ್ಚಿಸುವ ಭರದಲ್ಲಿ ಬೌಲಿಂಗ್‌ ವಿಭಾಗವನ್ನು ಕಡೆಗಣಿಸಿದ್ದು ಒಳ ಗೊಂಡಂತೆ ಹಲವು ಕಾರಣ  ಇದರ ಹಿಂದಿರುವುದು ಸ್ಪಷ್ಟ. ಆಟಗಾರರ ಹರಾಜಿನ ವೇಳೆಯೇ ಆರ್‌ಸಿಬಿ ಎಡವಟ್ಟು ಮಾಡಿಕೊಂಡಿತ್ತು. ಯುವಿಗೆ ಭಾರಿ ಬೆಲೆ ನೀಡಿದ್ದರಿಂದ ಪ್ರಮುಖ ಆಟಗಾರರನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ. ಬ್ಯಾಟಿಂಗ್‌ ಮತ್ತು ಬೌಲಿಂಗ್ ವಿಭಾಗಕ್ಕೆ ಸಮಾನ ರೀತಿಯ ಶಕ್ತಿ ತುಂಬಲು ವಿಫಲವಾಗಿತ್ತು. ಗೇಲ್‌ ಮೇಲೆ ಅತಿಯಾದ ಅವಲಂಬನೆ: ಈ ಹಿಂದಿನ ಟೂರ್ನಿಗಳಲ್ಲಿ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ‘ಠುಸ್‌’ ಆದದ್ದು ಆರ್‌ಸಿಬಿಯ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲೊಂದು. ಗಾಯದ ಸಮಸ್ಯೆಯಿಂದ ಬಳಲಿದ್ದ ಗೇಲ್‌, ಫಾರ್ಮ್‌ ಕಂಡುಕೊಳ್ಳುವಲ್ಲಿ ವಿಫಲರಾದರು. ಇದು ಇತರ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಹೆಚ್ಚಿಸಿತು. ಮೊದಲ ಒಂಬತ್ತು ಪಂದ್ಯಗಳಲ್ಲಿ ಈ ಎಡಗೈ ಬ್ಯಾಟ್ಸ್‌ಮನ್‌ ಗಳಿಸಿದ್ದು 196 ರನ್‌ ಮಾತ್ರ. ಗೇಲ್ ಗಾಯದ ಕಾರಣ ಮೊದಲ ಕೆಲ ಪಂದ್ಯಗಳಲ್ಲಿ ಆಡಿರಲಿಲ್ಲ. ಆ ಬಳಿಕ ಕಣಕ್ಕಿಳಿದರೂ ಸ್ಫೋಟಕ ಆಟ ಮೂಡಿಬರಲಿಲ್ಲ. ಆದರೂ ತಂಡದ ಆಡಳಿತ ಅವರನ್ನು ಮತ್ತೆ ಮತ್ತೆ ಆಡಲಿಳಿಸಿತು.ರಾಷ್ಟ್ರೀಯ ತಂಡದಲ್ಲಿ ಅತ್ಯುತ್ತಮ ಆಟ ತೋರಿದ್ದ ವಿರಾಟ್‌ ಕೊಹ್ಲಿ  ರನ್‌ ಬರ ಎದುರಿಸಿದ್ದು ಕೂಡಾ ತಂಡದ ಸಮತೋಲನ ತಪ್ಪುವಂತೆ ಮಾಡಿತು. ಇವರಿಬ್ಬರ ವೈಫಲ್ಯ ತಂಡದ ‘ಪ್ಲೇ ಆಫ್‌’ ಪ್ರವೇಶದ ಸಾಧ್ಯತೆಗೆ ಅಡ್ಡಿಯಾಗಿ ಪರಿಣಮಿಸಿತು. ಸಂಘಟಿತ ಹೋರಾಟ ಕಂಡುಬರಲಿಲ್ಲ: ಆರ್‌ಸಿಬಿ ಒಂದು ತಂಡವಾಗಿ ಹೋರಾಟ ನಡೆಸುವಲ್ಲಿ ಪೂರ್ಣವಾಗಿ ವಿಫಲವಾಯಿತು. ಗೇಲ್‌ ಮತ್ತು ಡಿವಿಲಿಯರ್ಸ್‌ ಒಳಗೊಂಡಂತೆ ಒಂದಿಬ್ಬರು ಆಟಗಾರರನ್ನು ಅತಿಯಾಗಿ ಅವಲಂಬಿಸಿದ್ದು ಮುಳುವಾಗಿ ಪರಿಣಮಿಸಿತು.

‘ಒಗ್ಗಟ್ಟಿನ ಹೋರಾಟ ತೋರಲು ವಿಫಲರಾದೆವು’ ಎಂಬುದನ್ನು ನಾಯಕ ಕೊಹ್ಲಿ ಕೂಡಾ ಒಪ್ಪಿಕೊಂಡಿ ದ್ದಾರೆ. ತಂಡದ ಯಶಸ್ಸಿಗೆ ಎಲ್ಲ 11 ಆಟಗಾರರ ಕೊಡುಗೆಯೂ ಮುಖ್ಯ. ಆದರೆ ಅದು ನಡೆಯಲಿಲ್ಲ.ಒಬ್ಬ ಆಟಗಾರನಿಗೆ ಎಲ್ಲ ದಿನಗಳಲ್ಲೂ ಪಂದ್ಯ ಗೆಲ್ಲಿಸಿಕೊಡುವುದು ಸಾಧ್ಯವಿಲ್ಲ. ಮೇ 11 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್‌ ವಿರುದ್ಧದ ಪಂದ್ಯ ಇದಕ್ಕೆ ಉತ್ತಮ ಉದಾಹರಣೆ. ಅಂದು ಯುವರಾಜ್‌ 38 ಎಸೆತಗಳಲ್ಲಿ 83 ರನ್‌ ಸಿಡಿಸಿದ್ದರಲ್ಲದೆ, 35 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದಿದ್ದರು. ಆದರೂ ಆರ್‌ಸಿಬಿಗೆ ಸೋಲು ಎದುರಾಗಿತ್ತು. ‘ಯುವಿ’ಗೆ ಒಂದಿಬ್ಬರು ಆಟಗಾರರು ಬೆಂಬಲ ನೀಡಿದ್ದರೆ ಅಂದು ಆರ್‌ಸಿಬಿ ಗೆಲುವಿನ ನಗು ಬೀರುವ ಸಾಧ್ಯತೆಯಿತ್ತು.ಬೌಲಿಂಗ್‌ ವೈಫಲ್ಯ: ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ಬೆದರಿಕೆ ಹುಟ್ಟಿಸಬಲ್ಲ ಬೌಲರ್‌ಗಳು ಆರ್‌ಸಿಬಿ ತಂಡದಲ್ಲಿರಲಿಲ್ಲ. ವೇಗಿಗಳಲ್ಲಿ ಆಸ್ಟ್ರೇಲಿಯಾದ ಮಿಷೆಲ್‌ ಸ್ಟಾರ್ಕ್‌ ಅವರನ್ನು ಹೊರತುಪಡಿಸಿ, ಇತರ ಎಲ್ಲರೂ ವಿಫಲರಾದರು. ಪಂದ್ಯ ಗೆಲ್ಲಿಸಿಕೊಡಬಲ್ಲ ಸ್ಪಿನ್ನರ್‌ನ ಕೊರತೆಯೂ ಕಾಡಿತು. ಯಜುವೇಂದ್ರ ಚಾಹಲ್‌ ಕೆಲ ಪಂದ್ಯಗಳಲ್ಲಿ ಪ್ರಭಾವಿ ಎನಿಸಿದ್ದರು. ಆ ಬಳಿಕ ಅವರೂ ರನ್‌ ಬಿಟ್ಟುಕೊಡತೊಡಗಿದರು. ಮುತ್ತಯ್ಯ ಮುರಳೀಧರನ್‌ ಬೌಲಿಂಗ್‌ನಲ್ಲಿ ಹಳೆಯ ಮೊನಚು ಕಂಡುಬರಲಿಲ್ಲ.ವೇಗಿಗಳು ಯಾರ್ಕರ್‌ ಎಸೆತಗಳನ್ನು ಹಾಕಲು ವಿಫಲರಾದರು. ಕೊನೆಯ ಓವರ್‌ಗಳಲ್ಲಿ ಹೆಚ್ಚು ರನ್‌ಗಳು ಸೋರಿಹೋದವು. ಟ್ವೆಂಟಿ-20 ಪಂದ್ಯದಲ್ಲಿ ಎದುರಾಗುವ ಪರಿಸ್ಥಿತಿಗೆ ತಕ್ಕಂತೆ ಬೌಲ್‌ ಮಾಡಬಲ್ಲ ಸಮರ್ಥ ಬೌಲರ್‌ನ ಕೊರತೆ ಕಾಡಿತು. ಬೆಂಗಳೂರಿನ ತಂಡ ಮೊದಲ 13 ಪಂದ್ಯಗಳಲ್ಲಿ 250.2 ಓವರ್‌ಗಳಲ್ಲಿ 2003 ರನ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿದೆ. ಅಂದರೆ ಪ್ರತಿ ಓವರ್‌ಗೆ ಎಂಟಕ್ಕಿಂತ ಅಧಿಕ ರನ್‌ಗಳನ್ನು ನೀಡಿತು.ಸ್ಥಳೀಯ ಆಟಗಾರರ ಕಡೆಗಣನೆ: ಆರ್‌ಸಿಬಿಯಲ್ಲಿ ಈ ಬಾರಿ ಕರ್ನಾಟಕದ ಯಾವುದೇ ಆಟಗಾರರು ಇರಲಿಲ್ಲ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವಲ್ಲಿ ಎಡವಿದ್ದು ತಂಡದ ಹಿನ್ನಡೆಗೆ ಕಾರಣ.  ರಣಜಿ ಒಳಗೊಂಡಂತೆ ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಈ ಬಾರಿ ಅಮೋಘ ಆಟ ತೋರಿತ್ತು. ಆದರೂ ಆರ್‌ಸಿಬಿ ತಂಡದ ಆಡಳಿತ ಇಲ್ಲಿನ ಆಟಗಾರರನ್ನು ಕಡೆಗಣಿಸಿತು. ಆದರೆ ಪ್ರಸಕ್ತ ಐಪಿಎಲ್‌ನಲ್ಲಿ ಇತರ ತಂಡಗಳಿಗೆ ಆಡುತ್ತಿರುವ ಕರ್ನಾಟಕದ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಆಡುತ್ತಿರುವ ರಾಬಿನ್‌ ಉತ್ತಪ್ಪ ಮತ್ತು ರಾಜಸ್ತಾನ ರಾಯಲ್ಸ್‌ನ ಕರುಣ್‌ ನಾಯರ್‌ ತೋರಿರುವ ಸಾಧನೆ ಅಮೋಘ. ರಾಬಿನ್‌ 500ಕ್ಕೂ ಅಧಿಕ ರನ್‌ ಕಲೆ ಹಾಕಿದ್ದಾರೆ.ಮುಂಬೈ ಇಂಡಿಯನ್ಸ್‌ ತಂಡದಲ್ಲಿರುವ ಸಿ.ಎಂ. ಗೌತಮ್‌, ಶ್ರೇಯಸ್‌ ಗೋಪಾಲ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ನ ಕೆ.ಎಲ್‌. ರಾಹುಲ್‌ ಕೂಡಾ ತಕ್ಕಮಟ್ಟಿನ ಪ್ರದರ್ಶನ ತೋರಿದ್ದಾರೆ. ಆರ್‌ಸಿಬಿ ಹೆಸರಾಂತ ಹಾಗೂ ಪ್ರಮುಖ ಆಟಗಾರರನ್ನು ಅತಿಯಾಗಿ ನೆಚ್ಚಿಕೊಂಡಿತ್ತು. ಹೊಸ ಪ್ರತಿಭೆಗಳನ್ನು ಹುಡುಕುವ ಕೆಲಸಕ್ಕೆ ಮುಂದಾಗಲಿಲ್ಲ.ಏನೇ ಆಗಲಿ, ಕಪ್‌ ಗೆಲ್ಲುವ ಮತ್ತೊಂದು ಅವಕಾಶ ಆರ್‌ಸಿಬಿ ಕೈತಪ್ಪಿ ಹೋಗಿದೆ. ಗೇಲ್‌ ಇಂದು ಸಿಡಿಯುವರು, ನಾಳೆ ಸಿಡಿಯುವರು ಎಂದು ಅಭಿಮಾನಿಗಳು ಕಾದದ್ದೇ ಬಂತು. ಆರ್‌ಸಿಬಿ ಇಂದು ಅಥವಾ ನಾಳೆ ಪುಟಿದೆದ್ದು ನಿಲ್ಲುತ್ತದೆ ಎಂದು ಹೆಚ್ಚಿನವರು ಕನಸು ಕಂಡಿದ್ದರು. ಇದೀಗ ಎಲ್ಲರ ಕನಸುಗಳೂ ನುಚ್ಚುನೂರಾಗಿವೆ. ‘ಮುಂದಿನ ವರ್ಷ ನೋಡೋಣ’ ಎಂದು ಆರ್‌ಸಿಬಿಯ ಅಭಿಮಾನಿಗಳು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುತ್ತಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.