ಬುಧವಾರ, ಮೇ 12, 2021
24 °C

ಆಲಮಟ್ಟಿಯಲ್ಲಿ ದಾಖಲೆ ವಿದ್ಯುತ್ ಉತ್ಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಕಳೆದ ವರ್ಷ ಮಳೆ ಕೈಕೊಟ್ಟರೂ, ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕವು 516 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ.ಈ ಘಟಕಕ್ಕೆ 500 ದಶಲಕ್ಷ ಯೂನಿಟ್ ಉತ್ಪಾದನೆ ಗುರಿ ನೀಡಲಾಗಿತ್ತು. ನೀರಿನ ಕೊರತೆ ನಡುವೆಯೂ ಇಷ್ಟೊಂದು ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಿದ್ದು ದಾಖಲೆಯಾಗಿದೆ. ಕಳೆದ ವರ್ಷ ಜುಲೈ 20ರಿಂದಲೇ ವಿದ್ಯುತ್ ಉತ್ಪಾದನೆ ಆರಂಭವಾಗಿತ್ತು. ಜಲಾಶಯದಿಂದ ನೀರು ಬಿಡುಗಡೆ ಸ್ಥಗಿತವಾದ ಸಂದರ್ಭದಲ್ಲಿ ಹಲವು ಬಾರಿ ಎಲ್ಲಾ ಘಟಕಗಳು ಬಂದ್ ಆಗಿದ್ದವು. ಆದರೆ ಈ ಸಲ ಏಪ್ರಿಲ್ 9, 2012ರವರೆಗೆ ವಿದ್ಯುತ್ ಉತ್ಪಾದಿಸಿ, ನಂತರ ಸ್ಥಗಿತಗೊಂಡವು. ಆಲಮಟ್ಟಿ ಜಲಾಶಯದಲ್ಲಿ 506 ಮೀಟರ್ ವರೆಗೆ ನೀರಿದ್ದರೂ 15 ಮೆ.ವಾ ವಿದ್ಯುತ್ ಉತ್ಪಾದಿಸಬಹುದು.ಆಲಮಟ್ಟಿ ವಿದ್ಯುತ್ ಘಟಕದಲ್ಲಿ 15 ಮೆ.ವಾ ಸಾಮರ್ಥ್ಯದ ಒಂದು ಹಾಗೂ ತಲಾ 55 ಮೆ.ವಾ ಸಾಮರ್ಥ್ಯದ ಐದು ಘಟಕಗಳು ಇವೆ. ಇದರಿಂದ ಪ್ರತಿನಿತ್ಯ 290 ಮೆ.ವಾ ವಿದ್ಯುತ್ ಉತ್ಪಾದಿಸಬಹುದು. ಜಲಾಶಯ ಭರ್ತಿಯಾದ  ಸಂದರ್ಭದಲ್ಲಿ 45 ಸಾವಿರ ಕ್ಯೂಸೆಕ್‌ಗೂ ಹೆಚ್ಚು  ನೀರನ್ನು ಹರಿಬಿಟ್ಟಾಗ ಮಾತ್ರ ಇಲ್ಲಿನ ಎಲ್ಲ 6 ಘಟಕಗಳು ಕಾರ್ಯ ನಿರ್ವಹಿಸುತ್ತವೆ.ಈ ಘಟಕದಿಂದ 2007-08 ರಲ್ಲಿ ಅತಿ ಹೆಚ್ಚು ಅಂದರೆ 664 ದಶಲಕ್ಷ ಯೂನಿಟ್, 2008-09ರಲ್ಲಿ 435 ದಶಲಕ್ಷ ಯೂನಿಟ್, 2009-10ರಲ್ಲಿ 531 ದಶಲಕ್ಷ ಯೂನಿಟ್ ಹಾಗೂ 2010-11ರಲ್ಲಿ 534 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಗೊಂಡಿದೆ.ಪ್ರತಿ ವರ್ಷ ಮಾರ್ಚ್ ಅಂತ್ಯದವರೆಗೂ ನಾರಾಯಣಪುರ ಜಲಾಶಯಕ್ಕೆ ನೀರು ಅಗತ್ಯವಾಗಿ ಬೇಕಾಗಿದ್ದು, ಅಲ್ಲಿಯವರೆಗೂ ಆಲಮಟ್ಟಿ ಜಲಾಶಯದಿಂದ ನೀರು ಹರಿಸಲಾಗುತ್ತದೆ. ನೀರು ಹರಿಯುವವರೆಗೆ ವಿದ್ಯುತ್ ಉತ್ಪಾದನೆ ಆಗುತ್ತದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಬಸವನಬಾಗೇವಾಡಿ-ಮಹಾಲಿಂಗಪುರ ಸ್ವೀಕೃತಿ ಕೇಂದ್ರಕ್ಕೆ ಪೂರೈಸಲಾಗುತ್ತಿದ್ದು, ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬಳಕೆಯಾಗುತ್ತದೆ.

-ಚಂದ್ರಶೇಖರ ಕೋಳೇಕರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.