ಸೋಮವಾರ, ಏಪ್ರಿಲ್ 19, 2021
33 °C

ಆಲಮಟ್ಟಿಯಿಂದ ಕುಡಿಯುವ ನೀರು ಪೂರೈಕೆ ರೂ. 125 ಕೋಟಿ ವೆಚ್ಚದ ಬೃಹತ್ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಈ ತಾಲ್ಲೂಕು ಸೇರಿದಂತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ವಿವಿಧ ಜಿಲ್ಲೆಗಳ ನೂರಾರು ಹಳ್ಳಿಗಳಿಗೆ ನದಿ ಮೂಲದಿಂದ ಶುದ್ಧ ನೀರು ಪೂರೈಸುವ ರೂ. 125 ಕೋಟಿ ವೆಚ್ಚದ ‘ಜಲನಿರ್ಮಲ’ ಬೃಹತ್ ಯೋಜನೆಗೆ ಇಷ್ಟರಲ್ಲೇ ಮಂಜೂರಾತಿ ದೊರೆಯಲಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಶನಿವಾರ ಇಲ್ಲಿ ಹೇಳಿದರು.ತಾಲ್ಲೂಕಿನ ಬ್ಯಾಲಿಹಾಳ ಗ್ರಾಮದಲ್ಲಿ ಕೊರಡಕೇರಾ ಗ್ರಾಮ ಪಂಚಾಯಿತಿ ಮಟ್ಟದ ‘ಜನಸ್ಪಂದನ ಸಭೆ’ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕ ಫ್ಲೋರೈಡ್ ಅಂಶ ಇರುವ ನೀರು ಕುಡಿದು ಜನ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ.

ಈಗಾಗಲೇ ಗುರುತಿಸಲಾಗಿರುವ ಈ ತಾಲ್ಲೂಕಿನ ಸುಮಾರು 76 ಸಮಸ್ಯಾತ್ಮಕ ಹಳ್ಳಿಗಳಿಗೆ ನೀರು ಪೂರೈಸುವುದು ಈ ಯೋಜನೆಯಲ್ಲಿ ಸೇರಿದೆ. ಆಲಮಟ್ಟಿಯಿಂದ ಹನಮಸಾಗರ ಬೆಟ್ಟದವರೆಗೆ ಪೈಪ್ ಮಾರ್ಗ ಅಳವಡಿಸಿ ಅಲ್ಲಿಂದ ಗುರುತ್ವಾಕರ್ಷಣೆ ಆಧಾರದ ಮೇಲೆ ವಿವಿಧ ತಾಲ್ಲೂಕುಗಳ ಹಳ್ಳಿಗಳಿಗೆ ನೀರು ಪೂರೈಸಲಾಗುತ್ತದೆ ಎಂದರು.ಜನರು ವಂತಿಗೆ ಕೊಟ್ಟರೇನೇ ಯೋಜನೆ ಆರಂಭವಾಗುವುದಿಲ್ಲ. ಆದರೆ ಯಾವುದೇ ಒಂದು ಯೋಜನೆಯ ಯಶಸ್ಸು ಜನರ ಸಹಭಾಗಿತ್ವದಲ್ಲಿ ಇರುತ್ತದೆ ಎಂಬ ಕಾರಣಕ್ಕೆ ಸರ್ಕಾರ ಪ್ರತಿ ಕುಟುಂಬಕ್ಕೆ ತಲಾ ರೂ. 15 ನೂರು ವಂತಿಗೆ ನಿರ್ಧರಿಸಿದೆ. ಜನರ ಸಹಕಾರದಿಂದ ಮಾತ್ರ ಯೋಜನೆ ಕಾರ್ಯಗತಗೊಳ್ಳುತ್ತದೆ ಎಂದರು.

 

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಸಾಕಷ್ಟು ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿದ್ದವು. ಆದರೆ ಅದನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಬ್ಯಾಲಿಹಾಳ ತಳುವಗೇರಾ ರಸ್ತೆ ಅಭಿವೃದ್ಧಿಗೆ ಈಗಾಗಲೇ ರೂ. 2 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಈ ತಿಂಗಳಲ್ಲಿ ಕೆಲಸ ಆರಂಭಗೊಳ್ಳುತ್ತದೆ ಎಂದು ಅವರು ಹೇಳಿದರು.ತಾಲ್ಲೂಕಿನ ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ 10 ಹಳ್ಳಗಳ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅವುಗಳಲ್ಲಿ ಆರು ಸೇತುವೆಗಳಿಗೆ ಮಂಜೂರಾತಿ ದೊರೆತಿದೆ. ಅದೇ ರೀತಿ ಬ್ಯಾಲಿಹಾಳ ಶಾಖಾಪೂರ ನಡುವಿನ ಹಳ್ಳದ ಸೇತುವೆ ನಿರ್ಮಾಣಕ್ಕೂ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಜನರ ಬೇಡಿಕೆಗೆ ಉತ್ತರಿಸಿದರು.

 

ಪ್ರಾಸ್ತಾವಿಕವಾಗಿ ತಹಸೀಲ್ದಾರ್ ವೀರೇಶ ಬಿರಾದಾರ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀಬಾಯಿ ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಬೇವಿನಗಿಡದ, ಅಧಿಕಾರಿಗಳಾದ ಜಯರಾಮ ಚವ್ಹಾಣ, ಆರ್.ವೆಂಕಟೇಶ್, ಎಸ್.ಎನ್.ಗೋಟೂರು ಮತ್ತಿತರರು ವೇದಿಕೆಯಲ್ಲಿದ್ದರು. ಸಿರಸ್ತೇದಾರ ಸುರೇಶ್ ಕುಲಕರ್ಣಿ ನಿರೂಪಿಸಿದರು. ಅಮೋಘಿ ಹಿರೇಕುರುಬರ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.