ಬುಧವಾರ, ಏಪ್ರಿಲ್ 21, 2021
30 °C

ಆಲಮಟ್ಟಿ ವಿದ್ಯುತ್ ಘಟಕ: ಗುರಿ ಮೀರಿ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಇಲ್ಲಿನ ಲಾಲಬಹಾದ್ದೂರ ಶಾಸ್ತ್ರಿ ಸಾಗರದ ಬಲಭಾಗದಲ್ಲಿರುವ (ಬಾಗಲಕೋಟೆ ಜಿಲ್ಲೆ) ಆಲಮಟ್ಟಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಸಕ್ತ ವರ್ಷ ಗುರಿ ಮೀರಿ ಸಾಧನೆ ಮಾಡಿದೆ.ಕಳೆದ ಆರ್ಥಿಕ ವರ್ಷ (ಏಪ್ರಿಲ್ 2010ರಿಂದ ಮಾರ್ಚ್ 2011)ದಲ್ಲಿ ಆಲಮಟ್ಟಿ ವಿದ್ಯುತ್ ಘಟಕಕ್ಕೆ 500 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿ ನೀಡಲಾಗಿತ್ತು. ಒಟ್ಟು 534 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿ ದಾಖಲೆ ಮಾಡಿದೆ.ಆಲಮಟ್ಟಿ ಜಲಾಶಯದಿಂದ ನೀರು ಬಿಡುವ ಪ್ರಕ್ರಿಯೆ ವಿಳಂಬವಾದರೂ ಗುರಿ ಮೀರಿ ಸಾಧನೆ ಮಾಡಿದೆ.

ಕಳೆದ ಕೆಲ ದಿನಗಳಿಂದ ವಿದ್ಯುತ್ ಘಟಕ ಬಂದ್ ಇತ್ತು. ಆದರೆ ನಾರಾಯಣಪೂರ ಜಲಾಶಯಕ್ಕೆ ನೀರಿನ ಲಭ್ಯತೆ ಇದ್ದದ್ದರಿಂದ, ಏ. 19ರ ಮಧ್ಯಾಹ್ನದಿಂದ 15 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕವನ್ನು ಮತ್ತೆ ಪ್ರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.ಒಟ್ಟಾರೆ, ಈ ಬಾರಿ ಆಲಮಟ್ಟಿ ವಿದ್ಯುತ್ ಘಟಕ ನಿರೀಕ್ಷೆಗಿಂತಲೂ ಹೆಚ್ಚು ಸಾಧನೆ ಮಾಡಿದ್ದು ವಿಶೇಷ.  ಆಲಮಟ್ಟಿಯ ಜಲ ವಿದ್ಯುತ್ ಘಟಕವು 15 ಮೆಗಾವ್ಯಾಟ್‌ನ ಮೊದಲ ಹಾಗೂ 55 ಮೆಗಾವ್ಯಾಟ್‌ನ ಐದು ಸೇರಿದಂತೆ ಒಟ್ಟು ಆರು ಘಟಕಗಳಿಂದ ಒಟ್ಟು 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಇದಕ್ಕಿದೆ. ಆದರೇ ಇದೆಲ್ಲಾ ಆಣೆಕಟ್ಟಿನಿಂದ ಬಿಡುವ ನೀರಿನ ಪ್ರಮಾಣವನ್ನು ಅವಲಂಬಿಸಿದೆ.ಆಣೆಕಟ್ಟಿನಲ್ಲಿ ಸಂಗ್ರಹವಾಗಿ ಉಳಿದ ನೀರನ್ನು ಹಾಗೂ ನಾರಾಯಣಪೂರ ಜಲಾಶಯಕ್ಕೆ ಅಗತ್ಯವಾದಾಗ ಆಲಮಟ್ಟಿಯಿಂದ ಬಿಡುವ ನೀರನ್ನು ವಿದ್ಯುತ್ ಘಟಕದ ಮೂಲಕ ಹಾಯಿಸಿದಾಗ ಮಾತ್ರ ವಿದ್ಯುತ್ ಉತ್ಪಾದನಾ ಘಟಕ ಆರಂಭವಾಗುತ್ತದೆ.ಈ ಬಾರಿ ಜಲಾಶಯ ಸಂಪೂರ್ಣ ಭರ್ತಿಗೆ ಬರುವವರೆಗೂ ಅಂದರೆ ಜುಲೈ 2010ರ ಅಂತ್ಯದವರೆಗೂ ನೀರು ಬಿಟ್ಟಿರಲಿಲ್ಲ. ಇದರಿಂದ 15 ದಿನಗಳ ಕಾಲ ವಿದ್ಯುತ್ ಉತ್ಪಾದನೆ ವಿಳಂಬವಾಯಿತು. ಮೊದಲೇ ಬಿಟ್ಟಿದ್ದರೇ ಇನ್ನೂ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಬಹುದಿತ್ತು.ಉತ್ಪಾದನೆಯ ಗುರಿ: ಆಲಮಟ್ಟಿ ಜಲ ವಿದ್ಯುತ್ ಘಟಕದಲ್ಲಿ ಒಮ್ಮೆ 2007-08ನೇ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಎಂದರೆ 664 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು.2008-09ರಲ್ಲಿ ಮಾತ್ರ ನೀಡಿದ ಗುರಿಗಿಂತ (500 ಮಿಲಿಯನ್ ಯೂನಿಟ್)ಗಿಂತಲೂ ಕಡಿಮೆ ಎಂದರೆ 435 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿತ್ತು.2009-10ರಲ್ಲಿ 600 ಮಿಲಿಯನ್ ಯೂನಿಟ್ಸ್ ಗುರಿ ನೀಡಿದ್ದರೂ 531 ಮಿಲಿಯನ್ ಯೂನಿಟ್ಸ್ ವಿದ್ಯುತ್ ಮಾತ್ರ ಉತ್ಪಾದನೆಯಾಗಿತ್ತು.ಈ ಬಾರಿ ಅಂದರೆ 2010-11ನೇ ಸಾಲಿನಲ್ಲಿ 500 ಮಿಲಿಯನ್ ಯೂನಿಟ್ಸ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ನೀಡಿದ್ದು, ಅದನ್ನು ಮೀರಿ 534 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದೆ.ನೀರಿನ ಲಭ್ಯತೆಯ ಅವಲಂಬನೆ: ಆಣೆಕಟ್ಟಿನ ಗರಿಷ್ಠ ಎತ್ತರ 519.6 ಮೀಟರ್‌ನಿಂದ ಸುಮಾರು 45 ಸಾವಿರ ಕ್ಯೂಸೆಕ್‌ದಷ್ಟು ನೀರು ಹರಿಸಿದಾಗ ವಿದ್ಯುತ್ ಘಟಕದ ಎಲ್ಲ 6 ಘಟಕಗಳು ಪ್ರಾರಂಭವಾಗಿ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ (ಅಂದಾಜು ಪ್ರತಿನಿತ್ಯ 7 ಲಕ್ಷ ಯೂನಿಟ್ಸ್) ಮಾಡಬಹುದಾಗಿದೆ.ಒಮ್ಮೊಮ್ಮೆ ಎಲ್ಲ ಆರು ಘಟಕಗಳ ಮೇಲೆ ಹೆಚ್ಚಿನ ನೀರಿನ ಒತ್ತಡ ಹಾಕಿ 298 ಮೆಗಾವ್ಯಾಟ್‌ವರೆಗೂ ವಿದ್ಯುತ್ ಉತ್ಪಾದನೆ ಮಾಡಿ ಸಾಧನೆಯನ್ನು ಈ ವಿದ್ಯುದಾಗಾರ ಮಾಡಿದೆ.ಜಲಾಶಯದಲ್ಲಿ 507 ಮೀಟರ್ ಎತ್ತರದವರೆಗೆ ಕನಿಷ್ಠ ನೀರು ಸಂಗ್ರಹವಾದಾಗಲೂ ವಿದ್ಯುತ್ ಘಟಕದ ಮೊದಲ 15 ಮೆಗಾವ್ಯಾಟ್‌ನ ಘಟಕ ಪ್ರಾರಂಭವಾಗುತ್ತದೆ.ಆಲಮಟ್ಟಿ ಜಲಾಶಯದಲ್ಲಿ 511 ಮೀ.ವರೆಗೆ ನೀರು ಸಂಗ್ರಹಕ್ಕಿಂತ ಕಡಿಮೆಯಾದರೆ, ವಿದ್ಯುತ್ ಘಟಕದ ಮೊದಲ ಘಟಕ 15 ಮೆಗಾವ್ಯಾಟ್ ಒಂದು ಘಟಕ ಮಾತ್ರ ಕೆಲಸ ಮಾಡುತ್ತದೆ.ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ ಉತ್ಪಾದನಾ ವೆಚ್ಚವೂ ಕಡಿಮೆಯಾಗಿದ್ದು, ಸುಮಾರು ಒಂದು ಯೂನಿಟ್‌ಗೆ 1 ರೂಪಾಯಿಯವರೆಗೆ ಹಣ ಖರ್ಚಾಗುತ್ತಿದ್ದು, ಅದನ್ನು ಕೆ.ಪಿ.ಟಿ.ಸಿ.ಎಲ್.ನವರಿಗೆ ಪ್ರತಿ ಯೂನಿಟ್‌ಗೆ 1.88 ರೂಪಾಯಿಗಳಿಗೆ ಮಾರಲಾಗುತ್ತಿದೆ.ಜಲಾಶಯದಿಂದ ಹರಿಬಿಡುವ ನೀರನ್ನು ಬಂದ್ ಮಾಡಲಾಗುವು ದರಿಂದ ಇನ್ನೆರಡು ದಿನಗಳಲ್ಲಿ ಆಲಮಟ್ಟಿ ವಿದ್ಯುತ್ ಘಟಕ ಉತ್ಪಾದನೆ ಸ್ಥಗಿತಗೊಳಿಸಲಿದೆ.ಇಲ್ಲಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ಬಸವನಬಾಗೇವಾಡಿ- ಮಹಾಲಿಂಗಪೂರ ಸ್ವೀಕೃತಿ ಗ್ರಿಡ್‌ಗೆ ಜೋಡಿಸಲಾಗುತ್ತದೆ.ಒಟ್ಟಾರೆ ಜಲಾಶಯದ ನೀರನ್ನು ಗೇಟ್ ಮೂಲಕ ಬಿಡದೇ ಹೆಚ್ಚಾಗಿ ವಿದ್ಯುತ್ ಘಟಕದ ಮೂಲಕವೇ ಬಿಡಬೇಕು, ಹೆಚ್ಚು ಹೆಚ್ಚು ವಿದ್ಯುತ್ ಉತ್ಪಾದನೆಯಾಗಬೇಕು ಎಂಬುದು ಎಲ್ಲರ ಆಶೆ.

ಚಂದ್ರಶೇಖರ ಕೋಳೇಕರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.