ಆಲಮೇಲದಲ್ಲಿ ಬಾರದ ಮಳೆ: ಮೇಲೇಳದ ಬೆಳೆ

7

ಆಲಮೇಲದಲ್ಲಿ ಬಾರದ ಮಳೆ: ಮೇಲೇಳದ ಬೆಳೆ

Published:
Updated:

ಆಲಮೇಲ: ಹೋಬಳಿಯ ರೈತಾಪಿ ವರ್ಗ ಮಳೆ ಬಾರದಿದ್ದರಿಂದ ಕಂಗಾಲಾಗಿದ್ದಾರೆ. ಯಾವಾಗ ಮಳೆ ಬಂದು ಬಿತ್ತಿದ ಬೆಳೆ ಮೇಲೇಳುವುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ವರುಣನ ಮುನಿಸು ಇನ್ನೂ ಕಡಿಮೆಯಾಗಿಲ್ಲ. ಸುತ್ತಲಿನ ಹಳ್ಳಿಗಳ ಸಾವಿರಾರು ಎಕರೆ ಹೊಲ ಹಾಗೆಯೇ ಬಿತ್ತನೆ ಕಾರ್ಯ ನಡೆಯದೆ ಬಿದ್ದಿದ್ದು ರೈತನ ಚಿಂತೆಗೆ ಕಾರಣವಾಗಿದೆ.ಮುಂಗಾರು ಮಳೆಯ ನೀರೀಕ್ಷೆಯಲ್ಲಿ ಕೆಲ ರೈತರು ಭೂಮಿ ಹದ ಮಾಡಿ ಬಿತ್ತನೆ ಕಾರ್ಯ ಪೂರೈಸಿದ್ದಾರೆ. ತಿಂಗಳಿಂದ ಹನಿ ಮಳೆಯೇ ಬಾರದ್ದರಿಂದ ಹೊಲಕ್ಕೆ ಹೋಗಲು ರೈತನ ಮನಸ್ಸು ಬರುತ್ತಿಲ್ಲ ಎಂದು ಆಲಮೇಲದ ರೈತ ಪರಶು ಹೊನ್ನಳ್ಳಿ ಹೇಳುತ್ತಾರೆ.ಸದ್ಯ ಹೊಲಗದ್ದೆಗಳಲ್ಲಿ ನೀರು ಇಲ್ಲದೆ ಬೆಳೆದ ಅಲ್ಪಸ್ವಲ್ಪ ಬೆಳೆಯು ಒಣಗುವ ಹಂತಕ್ಕೆ ಬಂದಿದೆ. ತೊಗರಿ, ಜೋಳ, ಮೆಕ್ಕೆಜೋಳ, ಕಬ್ಬು ಮೊದಲಾದ ಬೆಳೆಗಳು ನೀರು ಕಾಣದೆ ಸೊರಗುತ್ತಿದ್ದರೆ, ಇನ್ನು ಕೆಲವು ಹೊಲಗಳಲ್ಲಿ ಹದಮಾಡಿ ಬಿತ್ತನೆ ಕಾರ್ಯ ಮುಗಿಸಿದ್ದರೂ ಬೆಳೆ ಚಿಗುರೊಡೆದು ಹೊರಬರುತ್ತಿಲ್ಲ!ಚಿತ್ರ 2ರಲ್ಲಿ ಕಾಣುವಂತೆ ಆಲಮೇಲ ಸಮೀಪದ ದೇವಣಗಾಂವ ಗ್ರಾಮದ ಶಾಂತಪ್ಪ ಮೇದಿ ಅವರಿಗೆ ಸೇರಿದ ಈ ಹೊಲದಲ್ಲಿ ಬೆಳೆ ಮೇಲೇಳಲು ಸದ್ಯ ಮಳೆ ಅಗತ್ಯವಾಗಿದೆ. ಇಂತಹುದೇ ಪರಿಸ್ಥಿತಿ ಬಹುತೇಕ ಗ್ರಾಮಗಳ ರೈತನದ್ದಾಗಿದೆ.ಆತಂಕ: ಇನ್ನೆರಡು ವಾರಗಳಲ್ಲಿ ಮಳೆ ಬಾರದೇ ಇದ್ದರೆ ಈ ಬೆಳೆ ಕಮರಿಹೋಗುವುದಂತೂ ಖಂಡಿತ. ಹಾಗೇನಾದರೂ ಆದರೆ ರೈತನಿಗೆ ಉಳಿಗಾಲವಿಲ್ಲ ಎನ್ನುತ್ತಾರೆ ಇಲ್ಲಿಯ ಜನ. ಬರದ ಗುಮ್ಮ ಈಗ ರೈತನನ್ನು ಕಾಡುತ್ತಿದೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಕಂಡು ಬರುತ್ತಿರುವುದು ಇದು ಬರದ ಮುನ್ಸೂಚನೆ ಇರಬಹುದೇನೊ ಎಂದು ಜನ ಆಡಿಕೊಳ್ಳುತ್ತಿದ್ದಾರೆ.ಕಾಲುವೆಗೆ ನೀರು ಹರಿಸಿ: ಕೃಷ್ಣಾ ನದಿಯ ನೀರು ಕಾಲುವೆಯ ಮೂಲಕ ಬಿಡಲಾಗುತ್ತಿದ್ದರೂ, ಅದು ಎಲ್ಲ ರೈತರಿಗೆ ತಲುಪುತ್ತಿಲ್ಲ. ಅಲ್ಲಲ್ಲಿ ರೈತರು ಮಧ್ಯೆ ತಡೆ ಹಾಕಿ ನೀರು ಬಳಸಿಕೊಳ್ಳುತ್ತಿದ್ದಾರೆ. ಕೆಳಗಿನ ಪ್ರದೇಶದ ನೀರು ಬಳಕೆದಾರರು ನೀರು ಬಿಡುವಂತೆ ಒತ್ತಾಯಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಇದೆ. ಕೆಲವು ಕಡೆ ಯಥೇಚ್ಛ ನೀರು ಪೋಲಾಗುತ್ತಿದ್ದು, ಕೆಲವು ಕಡೆ ನೀರು ಬರುತ್ತಿಲ್ಲ. ಈ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಂಡು ಸಮರ್ಪಕ ನೀರು ಹರಿಸುವುದು ಒಳಿತು ಎಂದು ಕಡಣಿ ಗ್ರಾಮದ ನೀರು ಬಳಕೆದಾರ ರಮೇಶಗೌಡ ಪಾಟೀಲ ಹೇಳುತ್ತಾರೆ.

ರಮೇಶ ಎಸ್. ಕತ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry