ಆಲಮೇಲ: ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಚಾಲನೆ

7

ಆಲಮೇಲ: ಕೆಪಿಆರ್ ಸಕ್ಕರೆ ಕಾರ್ಖಾನೆಗೆ ಚಾಲನೆ

Published:
Updated:

ಆಲಮೇಲ: ಕೆಪಿಆರ್ ಸಕ್ಕರೆ ಕಾರ್ಖಾನೆ ರೈತರ ಆರ್ಥಿಕ ಬದುಕು ಹಸನು ಮಾಡಲಿ, ಈ ಕಾರ್ಖಾನೆಗೆ ಸರಕಾರ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಿದೆ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.ಆಲಮೇಲದಲ್ಲಿ ಅವರು ಬುಧವಾರ  ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಯ ಪ್ರಾರಂಭೋತ್ಸವವನ್ನು ನೆರವೇರಿಸಿ  ಮಾತನಾಡಿದರು.ಜವಳಿ ಉದ್ದಿಮೆಯಲ್ಲಿ ಅಪಾರ ಅಭಿವೃದ್ಧಿ  ಹೊಂದಿರುವ ರಾಮ ಸ್ವಾಮಿ, ಇಲ್ಲಿನ ಬಡ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಇಲ್ಲಿನ ಜನರ ಮನಸ್ಸನ್ನು ಗೆದ್ದು, ಕಾರ್ಖಾನೆ ಮುನ್ನಡೆಸಿಕೊಂಡು ಹೋಗಬೇಕು. ರೈತರ ಬಹುದಿನಗಳ ಬೇಡಿಕೆಯನ್ನು ರಾಮಸ್ವಾಮಿ ಈಡೇರಿಸಿದ್ದು ಸಂತೋಷ ದಾಯಕ ಸಂಗತಿ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಈ ಭಾಗದಲ್ಲಿನ ರೈತರು ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದ್ದರು, ಆದರೆ ಕಾರ್ಖಾನೆಗಳ ಕೊರತೆಯಿಂದ ಸಂಕಟ, ನೋವು ಉಂಡಿದ್ದಾರೆ. ಇನ್ನು ಮುಂದೆ ಆಲಮೇಲ ಸುತ್ತಮುತ್ತ ಮೂರು ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವುದರಿಂದ ರೈತನ ಜೀವನ ಮಟ್ಟ ಇನ್ನಷ್ಟು ಸುಧಾರಿಸಲಿದೆ~ ಎಂದರು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕಾರ್ಖಾನೆಗಳ ಮಾಲೀಕರು ರೈತರ ಹಿತಾಸಕ್ತಿಯನ್ನು ಕಾಪಾಡಬೇಕು, ಉತ್ತಮ ಬೆಲೆಯನ್ನು ನೀಡಿ, ರೈತನೂ ಬೆಳೆಯಬೇಕು, ಕಾರ್ಖಾನೆಯೂ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.ವಿರಕ್ತಮಠದ ಶ್ರೀಗಳು, ಹಿರೇಮಠದ ಶ್ರೀಗಳು ಆಶೀರ್ವಚನ ನೀಡಿದರು. ಕೆ.ಪಿ.ಆರ್ ಸಮೂಹದ ಸಂಸ್ಥಾಪಕ ಅಧ್ಯಕ್ಷ ಕೆ.ಪಿ.ರಾಮಸ್ವಾಮಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿದರು.ಇಂಡಿ ಶಾಸಕ ಡಾ.ಸಾರ್ವ ಭೌಮಬಗಲಿ, ಕೇಂದ್ರದ ಮಾಜಿ  ಸಚಿವ ಸಿದ್ದು ನ್ಯಾಮಗೌಡ, ಜಿಪಂ ಸದಸ್ಯರಾದ ಮಲ್ಲಪ್ಪ ತೋಡಕರ, ಕಾಶೀನಾಥ ಗಂಗನಳ್ಳಿ ಉಪಸ್ಥಿತರಿದ್ದರು. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಆರ್. ಆನಂದಕೃಷ್ಣನ್ ಸ್ವಾಗತಿಸಿದರು. ಶ್ರೀಶೈಲ ಮಠಪತಿ ವಂದಿಸಿದರು. ಶಿವು ಗುಂದಗಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry