ಆಲಾಪ ಕೇಳಲಿಲ್ಲ; ನೋವು ಮರೆಸಲಿಲ್ಲ

7
ವಾಣಿವಿಲಾಸ ಹೆರಿಗೆ ಆಸ್ಪತ್ರೆ ಸಂಗೀತ ಚಿಕಿತ್ಸಾ ಕೊಠಡಿಗೆ ಬೀಗ

ಆಲಾಪ ಕೇಳಲಿಲ್ಲ; ನೋವು ಮರೆಸಲಿಲ್ಲ

Published:
Updated:

ಬೆಂಗಳೂರು: ನಗರದ ವಾಣಿವಿಲಾಸ ಹೆರಿಗೆ ಆಸ್ಪತ್ರೆಯಲ್ಲಿ ಸಂಗೀತ ಚಿಕಿತ್ಸಾ ವಿಭಾಗದ ಕಟ್ಟಡ ಉದ್ಘಾಟನೆಗೊಂಡು ನಾಲ್ಕು ತಿಂಗಳಾಗಿದ್ದರೂ, ಚಿಕಿತ್ಸೆ ಆರಂಭಗೊಳ್ಳುವುದಕ್ಕೆ ಮಾತ್ರ ಮುಹೂರ್ತ ಒದಗಿ ಬಂದಿಲ್ಲ!ಆಗಸ್ಟ್ ತಿಂಗಳಲ್ಲಿ ಸೂಪರ್‌ಸ್ಪೆಷಾಲಿಟಿ ಕಟ್ಟಡವನ್ನು ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಆಜಾದ್ ಉದ್ಘಾಟಿಸಿದ್ದರು. ಫಿಸಿಯೋಥೆರಪಿ, ಸಂಗೀತ ಚಿಕಿತ್ಸೆ ಸೇರಿದಂತೆ ಹೊಸ ವಿಭಾಗಗಳನ್ನು ತೆರೆದಿದ್ದು, ವಾಣಿವಿಲಾಸದಲ್ಲೂ ಆಧುನಿಕ ಸ್ಪರ್ಶವಿರುವ ಚಿಕಿತ್ಸಾ ಸೌಲಭ್ಯವಿದೆ ಎಂದು ಜನ ಭಾವಿಸಿದ್ದರು. ಆದರೆ ಉದ್ಘಾಟನೆಗೊಂಡ ದಿನದಿಂದಲೇ ಸಂಗೀತ ಚಿಕಿತ್ಸಾ ಕೊಠಡಿಗೆ ಬೀಗ ಹಾಕಲಾಗಿದೆ. ಕುತೂಹಲಕ್ಕೆ ಕೊಠಡಿಯೊಳಗೆ ತುಸು ಇಣುಕಿ ನೋಡಿದರೆ ಕೇವಲ ಮೇಜುಗಳು ಬಿಟ್ಟರೆ ಯಾವುದೇ ಸಂಗೀತ ಸಾಧನಗಳು, ಚಿಕಿತ್ಸಾ ಉಪಕರಣಗಳು ಕಾಣಸಿಗುವುದಿಲ್ಲ.ಕೊಠಡಿಯ ಹೊರಭಾಗದ ಗೋಡೆಗೆ ಸಂಗೀತವನ್ನು ಆಲಿಸುತ್ತಿರುವ ಪಾಶ್ಚಿಮಾತ್ಯ ಗರ್ಭಿಣಿಯರ ಚಿತ್ರಗಳನ್ನು ಅಂಟಿಸಲಾಗಿದೆ. ಈ ಚಿಕಿತ್ಸೆ ಆರಂಭಗೊಂಡಿದೆಯೇ ? ಎಂದು ಈ ಭಾಗದಲ್ಲಿ ಓಡಾಡುವ ವೈದ್ಯರನ್ನು ಪ್ರಶ್ನಿಸಿದರೆ `ಅದು ಆರಂಭವಾಗಲ್ಲರೀ, ಚಿಕಿತ್ಸೆ ಬಗ್ಗೆ ಮಾಹಿತಿ ಬೇಕಿದ್ದರೆ ಗೂಗಲ್‌ನಲ್ಲಿ ಹುಡುಕಿ' ಎಂಬ ಉಡಾಫೆ ಉತ್ತರವನ್ನು ಎಸೆದು ಹಾಗೇ ಸಾಗುತ್ತಾರೆ. ಚಿಕಿತ್ಸೆಯ ಪ್ರಕ್ರಿಯೆಯೇ ಆರಂಭವಾಗಿಲ್ಲ. ಇನ್ನು ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಯಾದ ಸಂಗೀತ ಚಿಕಿತ್ಸಕರು, ತಜ್ಞರನ್ನು  ನೇಮಕ ಮಾಡಿಕೊಂಡಿಲ್ಲವೆಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ವಿಭಾಗದ ಮುಖ್ಯಸ್ಥೆ ಗೀತಾ ಶಿವಮೂರ್ತಿ, `ಕೇಂದ್ರ ಸಚಿವರು ಆಗಮಿಸಿದ್ದರಿಂದ ಸಿದ್ದತೆಯಿಲ್ಲದೇ ಕಟ್ಟಡವನ್ನು ತರಾತುರಿಯಲ್ಲಿ ಉದ್ಘಾಟಿಸಲಾಯಿತು. ಸ್ವಲ್ಟ ಮಟ್ಟಿಗೆ ವಿಳಂಬ ಆಗಿರುವುದು ನಿಜ. ಬಡ ಮಹಿಳೆಯರು ಚಿಕಿತ್ಸೆಗೆ ಆಗಮಿಸುವುದರಿಂದ ಅವರಿಗೂ ಈ ಸಂಗೀತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಸದ್ಯದಲ್ಲೇ ಚಿಕಿತ್ಸಾ ವಿಭಾಗವೂ ಕಾರ್ಯಾರಂಭಗೊಳ್ಳಲಿದೆ' ಎಂದು ತಿಳಿಸಿದರು.`ಸದ್ಯಕ್ಕೆ ಎರಡು ರಿಲ್ಯಾಕ್ಸಿಂಗ್ ಮೇಜುಗಳು, ಒಂದು ಮಂಚ, ಸಂಗೀತ ಸಲಕರಣೆಯೊಂದಿಗೆ, ಒಂದಷ್ಟು ಸಿ.ಡಿಗಳನ್ನು ತರಿಸಿಕೊಳ್ಳಲಾಗಿದೆ. ಅದರ ಖರ್ಚು-ವೆಚ್ಚದ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಚಿಕಿತ್ಸೆಯ ಬಗ್ಗೆ ಆಳವಾದ ಜ್ಞಾನವಿರುವವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಜನವರಿ 15ರ ನಂತರ ಚಿಕಿತ್ಸಾ ಕೇಂದ್ರ ಕಾರ್ಯಾರಂಭಗೊಳ್ಳುವ ಸಾಧ್ಯತೆಯಿದೆ' ಎಂದು ಹೇಳಿದರು.`ಯಾವ ಬಗೆಯ ಸಂಗೀತ ಪ್ರಕಾರವನ್ನು ಆಲಿಸುವುದರಿಂದ ತಾಯಿ ಮತ್ತು ಮಗುವಿನ ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಬಹುದು ಎಂಬುದರ ಬಗ್ಗೆ ಈಗಾಗಲೇ ನಿಮ್ಹಾನ್ಸ್ ಸಂಸ್ಥೆಯ ತಜ್ಞರೊಂದಿಗೆ ಚರ್ಚೆ ನಡೆಲಾಗಿದೆ' ಎಂದರು.ಏನಿದು ಸಂಗೀತ ಚಿಕಿತ್ಸೆ?

ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾಗುವ ಗರ್ಭಿಣಿಯರಿಗೆ ಈ ಚಿಕಿತ್ಸೆಯನ್ನು ಪ್ರಸವ ಪೂರ್ವ ಹಾಗೂ ಪ್ರಸವದ ವೇಳೆಯಲ್ಲಿ ನೀಡಲಾಗುತ್ತದೆ.  ಮೂರು ತಿಂಗಳಿನಿಂದಲೇ ಆರಂಭಗೊಳ್ಳುವ ಈ ಚಿಕಿತ್ಸೆಯಲ್ಲಿ ಗರ್ಭಿಣಿಯರು ಕರ್ಣಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಪಾಶ್ಚಿಮಾತ್ಯ, ದಾಸ ಸಾಹಿತ್ಯ, ಬಗೆ ಬಗೆಯ ಶ್ಲೋಕ, ವಾದ್ಯ ಸಂಗೀತವನ್ನು ಆಯ್ಕೆ ಮಾಡಿಕೊಳ್ಳಬಹುದು. ತಾಯಿಯ ಒತ್ತಡವನ್ನು ನಿವಾರಿಸಿ, ಮಗುವಿನ ಮಾನಸಿಕ ಬೆಳವಣಿಗೆಯನ್ನು ಸದೃಢಗೊಳಿಸುವಲ್ಲಿ ಸಂಗೀತ ಚಿಕಿತ್ಸೆಯು ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕವಾಗಿ ಹೆರಿಗೆಯಾಗಲು ಸಂಗೀತ ಚಿಕಿತ್ಸೆಯು ಸಹಕಾರಿ. ಹೆರಿಗೆ ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲೂ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ನೋವು ಆರಂಭಗೊಂಡ ನಂತರ ಒಂದು ಗಂಟೆಯ ಅವಧಿಯವರೆಗೆ ಮಹಿಳೆಗೆ ಲಘು ಸಂಗೀತವನ್ನು ಕೇಳಿಸಲಾಗುತ್ತದೆ.ಇದರಿಂದ ನೋವಿನ ವೇಳೆ ಕಾಣುವ ಮಾನಸಿಕ ಒತ್ತಡ, ವಿಪರೀತ ಭಯವನ್ನು ನಿವಾರಿಸುವುದಲ್ಲದೇ ಏಕಾಗ್ರತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಂಗೀತವು ಧನಾತ್ಮಕ ಅಂಶವನ್ನು ಹೆಚ್ಚಿಸುವುದರಿಂದ ಹೆರಿಗೆಯನ್ನು ಸುಸೂತ್ರಗೊಳಿಸುತ್ತದೆ ಮತ್ತು ವಿನಾಕಾರಣ ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದನ್ನು ತಪ್ಪಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry