ಶನಿವಾರ, ಫೆಬ್ರವರಿ 27, 2021
31 °C

ಆಲಿಕಲ್ಲು ಮಳೆ: ಕೋಟಿಗೂ ಹೆಚ್ಚು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಿಕಲ್ಲು ಮಳೆ: ಕೋಟಿಗೂ ಹೆಚ್ಚು ಹಾನಿ

ಚಿಕ್ಕೋಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಿರೇಕೋಡಿ, ಕೋಥಳಿ, ಜೈನಾಪುರ ಮುಂತಾದೆಡೆ ಆಲಿಕಲ್ಲಿ­ನೊಂದಿಗೆ ಸುರಿದ ಧಾರಾಕಾರ ಮಳೆಗೆ ₨ 1.09 ಕೋಟಿಗೂ ಮಿಕ್ಕಿ ಮೌಲ್ಯದ ಆಹಾರ ಧಾನ್ಯ ಬೆಳೆಗಳು ಹಾಳಾಗಿರುವ ಕುರಿತು ಕೃಷಿ ಇಲಾಖೆ ಅಂದಾಜಿಸಿದ್ದು, ಜಖಂಗೊಂಡಿರುವ ಮನೆಗಳ ಸಮೀಕ್ಷೆ ನಡೆದಿದೆ. ಬುಧವಾರ ಮೋಡ ಮುಸು­ಕಿದ ವಾತಾವರಣ ನೆಲೆಗೊಂಡಿದ್ದರೂ ಮಳೆಯಾಗಿರುವ ಬಗ್ಗೆ ಯಾವುದೇ  ವರದಿಯಾಗಿಲ್ಲ.ಮಂಗಳವಾರ ಸಂಜೆ ಸುರಿದ ಮಳೆ ಮತ್ತು ಬಿರುಗಾಳಿಗೆ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಗೋಡೆ ಇಟ್ಟಿಗೆ ತಲೆ ಮೇಲೆ ಬಿದ್ದ ಪರಿಣಾಮವಾಗಿ ದಾನಮ್ಮ ಶಿವಪ್ಪ ಲಠ್ಠೆ (14) ಎಂಬ ಬಾಲಕಿ ಗಾಯಗೊಂಡಿದ್ದಾಳೆ. ‘ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ 8 ಮತ್ತು ಕೋಥಳಿಯಲ್ಲಿ ಕೆಲವು ಕಚ್ಚಾ ಮನೆಗಳಿಗೆ ಹಾನಿಯಾಗಿರುವ ಕುರಿತು ವರದಿಯಾಗಿದ್ದು, ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಸಮೀಕ್ಷೆ ನಡೆಸಿ ಹಾನಿ ಕುರಿತು ವರದಿ ನೀಡಿದ ನಂತರ ಸೂಕ್ತ ಪರಿಹಾರಕ್ಕಾಗಿ ಉಪವಿಭಾಗಾಧಿಕಾರಿಗಳಿಗೆ ವರದಿ ಕಳಿಸಲಾಗುವುದು’ ಎಂದು ತಹಶೀಲ್ದಾರ ರಾಜಶೇಖರ್ ಡಂಬಳ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ರಭಸವಾಗಿ ಸುರಿದ ಆಲಿಕಲ್ಲಿನಿಂದಾಗಿ ತಾಲ್ಲೂಕಿನಲ್ಲಿ 115 ಹೆಕ್ಟೇರ್‌ ಜೋಳ, 94 ಹೆಕ್ಟೇರ್ ಗೋವಿನಜೋಳ, 294 ಹೆಕ್ಟೇರ್ ಜವೆ ಗೋಧಿ, 42 ಹೆಕ್ಟೇರ್ ಕಡಲೆ ಸೇರಿದಂತೆ ಒಟ್ಟು 545 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ₨ 1.09 ಕೋಟಿ ಮೌಲ್ಯದ ಆಹಾರ ಧಾನ್ಯ ಬೆಳೆಗಳು ಹಾನಿಗೀಡಾಗಿರುವ ಕುರಿತು ಪ್ರಾಥಮಿಕ ಸಮೀಕ್ಷೆಯಿಂದ ಅಂದಾಜಿಸಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ.ಕಲ್ಯಾಣಿ ತಿಳಿಸಿದ್ದಾರೆ. ಹಿರೇಕೋಡಿ ಗ್ರಾಮದಲ್ಲಿ ಬೆಳೆದ ಸುಮಾರು 5 ಹೆಕ್ಟೇರ್‌ಗೂ ಹೆಚ್ಚು ಪಪ್ಪಾಯಿ ಬೆಳೆಯೂ ಹಾನಿಗೀಡಾಗಿದೆ.ಮಂಗಳವಾರ ಸಂಜೆ ರಭಸವಾಗಿ ಬೀಸಿದ ಗಾಳಿ ಮಳೆಯಿಂದಾಗಿ ಹೆಸ್ಕಾಂನ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 15 ರಿಂದ 20 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ತಂತಿಗಳು ಹರಿದು ಸುಮಾರು ರೂ.1ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಬುಧವಾರ ಹಾನಿಗೀಡಾದ ಪೈಕಿ ಶೇ.90 ರಷ್ಟು ಹೊಸ ಕಂಬಗಳನ್ನು ನೆಟ್ಟು ವಿದ್ಯುತ್‌ ಸರಬರಾಜು ಪುನಃ ಆರಂಭಿಸಲಾಗಿದೆ’ ಎಂದು ಎಇಇ ಆರ್‌.ಎಸ್‌.ಶಿಡ್ಲ್ಯಾಳೆ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.