ಆಲಿಕಲ್ಲು ಮಳೆ: ಬೆಳೆ ಹಾನಿ ಆತಂಕ

7

ಆಲಿಕಲ್ಲು ಮಳೆ: ಬೆಳೆ ಹಾನಿ ಆತಂಕ

Published:
Updated:

ಶಿಗ್ಗಾವಿ: ಸುಮಾರು ಎರಡು- ಮೂರು ದಿನಗಳಿಂದ ಸುರಿದ ಆಲಿಕಲ್ಲು ಮಳೆಯಿಂದ ತಾಲ್ಲೂಕಿನ ಹುಲಗೂರ ಹಾಗೂ ಶಿಶುವಿನಹಾಳ ಗ್ರಾಮಗಳ ನಡುವಿನ ಹೊಲಗಳಲ್ಲಿ ಬೆಳೆದ ಬಿಟಿ ಹತ್ತಿ ಸಂಪೂರ್ಣ ಹಾನಿಯಾಗಿ ಈ ಭಾಗದ ರೈತ ಸಮೂಹ ಆತಂಕಲ್ಲಿ ಮುಳುಗುವಂತಾಗಿದೆ.ಮುಂಗಾರು ಮಳೆ ಆರಂಭದಲ್ಲಿ ಬಹು ನಿರೀಕ್ಷೆ ಇದ್ದರೂ ಸಕಾಲಕ್ಕೆ ಸರಿಯಾಗಿ ಮಳೆ ಬಾರದೆ ಬಿತ್ತಿದ ಬೆಳೆಗಳು ಒಣಗಿ ಹೋಗುತ್ತಿವೆ. ಅದರಲ್ಲಿ ಅಲ್ಪಸ್ವಲ್ಪ ಬೆಳೆ ರೈತನ ಬದುಕಿಗೆ ಅನ್ನ ನೀಡಬಹುದು ಎಂಬ ಆಶಯದಲ್ಲಿ ದಿನ ಕಳೆಯುತ್ತಿದ್ದರು. ಆದರೆ ದಿಢೀರನೆ ಬಂದ ಆಲಿಕಲ್ಲು ಮಳೆಯಿಂದ ಅಲ್ಪಸ್ವಲ್ಪ ಬೆಳೆದ ಬೆಳೆಯೂ ಸಂಪೂರ್ಣ ನಾಶವಾಗಿದೆ ಎಂದು ಈ ಭಾಗದ ರೈತರು ಆಂತಕ ವ್ಯಕ್ತಪಡಿಸಿದರು.ಮುಂಗಾರು ಬೆಳೆ ಬಾರದೆ ರೈತರು  ಕಂಗಾಲಾಗಿದ್ದು, ಬಿತ್ತಿದ ಬೀಜಕ್ಕೆ ಮಾಡಿರುವ ಖರ್ಚಾದರೂ ಮರಳಿ ಬರುತ್ತದೆಯೊ ಇಲ್ಲವೊ ಎಂಬ ಭೀತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಿಂಗಾರು ಮಳೆಯಾದರೂ ಸರಿಯಾದ ಕಾಲಕ್ಕೆ ಬಿದ್ದರೆ ಹಿಂಗಾರಿ ಬೆಳೆಗಳಾದರೂ ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಆದರೆ ಆಲಿಕಲ್ಲು ಮಳೆಯಾದ ನಂತರ ಮೂರು ತಿಂಗಳು ಮಳೆ ವಿಳಂಬವಾಗುತ್ತದೆ ಎಂದು ಇಲ್ಲಿನ ಅನೇಕ ರೈತರ ನಂಬಿಕೆ.ಹುಲಗೂರ ಭಾಗದಲ್ಲಿ ಆಲಿಕಲ್ಲು ಮಳೆಯಿಂದ ಸುಮಾರು 120 ಎಕರೆ ಭೂಮಿಗಿಂತ ಅಧಿಕ ಪ್ರಮಾಣದಲ್ಲಿ ಹಾನಿಯಾಗಿದೆ. ಅದರಲ್ಲಿ ಸುಮಾರು 30-35ಜನ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವರ್ಷವಿಡೀ ಕಷ್ಟಪಟ್ಟು ದುಡಿದರೂ ಬಿತ್ತಿದ ಬೆಳೆ ಕೈಗೆ ಬರಲಿಲ್ಲ. ಇಡೀ ಕುಟುಂಬ ಹೇಗೆ ಬದುಕುವುದು ಎಂದು ರೈತ ರುದ್ರಯ್ಯ ತವರಿಮಠ ಕಂಬನಿ ಮಿಡಿದರು.ಬಿಟಿ ಹತ್ತಿ ಬೀಜವನ್ನೇ ಬಿತ್ತಬೇಕು ಎಂದು ಮುಂಗಾರಿನ ಬಿತ್ತನೆ ಸಂದರ್ಭದಲ್ಲಿ ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೆವು. ಬಿಟಿ ಹತ್ತಿ ಬೆಳೆ ಇನ್ನೇನು ಇಂದು ನಾಳೆ ಕೈಗೆ ಬರಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ ದಿಢೀರನೆ ಆಳಿಕಲ್ಲು ಮಳೆ ಸುರಿದಿದೆ. ಹತ್ತಿ ಹೂ, ಮೊಗ್ಗುಗಳು  ನಾಶವಾಗಿವೆ ಎಂದು ರೈತ ಮಹಿಳೆ ಅನ್ನಪೂರ್ಣವ್ವ ಆತಂಕ ವ್ಯಕ್ತಪಡಿಸಿದರು.ಪರಿಹಾರಕ್ಕೆ ಆಗ್ರಹ

ಹುಲಗೂರ ಭಾಗದಲ್ಲಿ ಬಿದ್ದಿರುವ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ ಅನುಭವಿಸಿದ ರೈತರನ್ನು ಗುರುತಿಸಿ ಸರ್ಕಾರ ತಕ್ಷಣ ಒಂದು ಎಕರೆ ಭೂಮಿಗೆ ಸುಮಾರು ರೂ. 50ಸಾವಿರ ಪರಿಹಾರ ನೀಡಬೇಕು ಎಂದು ರೈತರಾದ ಗಂಗಯ್ಯ ತವರಿಮಠ, ಗೌರವ್ವ ತವರಿಮಠ, ಪಂಚಯ್ಯ ತವರಿಮಠ, ಯಲ್ಲಪ್ಪ ತೊಂಡೂರ, ಶಾಂತವ್ವ ಬೂದಿಹಾಳ, ಚನ್ನಪ್ಪ ಕುಂದಗೋಳ, ಶಿವಪ್ಪ ಬೆಟ್ಟದೂರ, ಈಶ್ವರ ಬೆಟ್ಟದೂರ, ಕರಿಸಿದ್ದಪ್ಪ ರಟ್ಟಗೇರಿ, ಪರತಗೌಡ ಲಕ್ಷ್ಮೇಶ್ವರ, ಚಂದ್ರಯ್ಯ ತವರಿಮಠ, ಬಸಲಿಂಗಯ್ಯ ತವರಿಮಠ ಸೇರಿದಂತೆ ಅನೇಕ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry