ಸೋಮವಾರ, ಮೇ 17, 2021
23 °C

ಆಲಿಕಲ್ಲು ಮಳೆ: ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ: ಹೋಬಳಿಯಲ್ಲಿ ಭಾನುವಾರ ಸಂಜೆ ಆಲಿಕಲ್ಲು ಸಹಿತ ಬೀಸಿದ ಬಿರುಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಹಲವು ಮನೆಗಳು ಹಾನಿಗೆ ಒಳಗಾಗಿವೆ.ಕೊಳ್ಳೇನಹಳ್ಳಿ ಗ್ರಾಮದ ರಾಜಣ್ಣ ಮತ್ತು ಮೊಗಣ್ಣ ಎಂಬುವರ ಮನೆಯ ಶೀಟ್‌ಗಳು ಹಾರಿ ನೆಲಕ್ಕೆ ಬಿದ್ದಿವೆ. ಮರದ ತೀರಿನ ಸಮೇತ ಶೀಟ್‌ಗಳು ಕಿತ್ತು ಬಂದಾಗ, ಗೋಡೆ ಸಹ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದ ಮಕ್ಕಳು ಮತ್ತು ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮದಲ್ಲಿ ಹಲವು ಮನೆಗಳ ಹೆಂಚುಗಳು ಗಾಳಿಯ ರಭಸಕ್ಕೆ ಹಾರಿವೆ.ತೂಬಿನಕೆರೆ ಗ್ರಾಮದಲ್ಲಿ ಸೋಮಶೇಖರ್ ಎಂಬುವರ ಮನೆ ಮತ್ತು ಗಿರೀಶ ಎಂಬವವರ ಕೊಟ್ಟಿಗೆ ಬಿದ್ದಿವೆ. ಹಲವು ಮನೆಗಳ ಹೆಂಚು ಮತ್ತು ಶೀಟ್‌ಗಳು ಹಾರಿಹೋಗಿವೆ, ತೆಂಗಿನ ಮರಗಳು ಬಿದ್ದಿವೆ, ಬಾಳೆ ಗೊನೆಗಳು ಸಹ ಮುರಿದು ಬಿದ್ದು ರೈತರಿಗೆ ನಷ್ಟವಾಗಿದೆ.ಹಿರೀಸಾವೆಯ ಮಹೇಶ್ ಎಂಬುವರಿಗೆ ಸೇರಿದ ತೋಟದಲ್ಲಿ 11 ತೆಂಗಿನ ಮರಗಳು, ರಘು ಎಂಬವವರ ತೋಟದಲ್ಲಿ 5 ತೆಂಗಿನ ಮರಗಳು ಬಿದ್ದಿವೆ, ಗಾಳಿಯ ಜೊತೆಯಲ್ಲಿ ಆಲಿಕಲ್ಲು ಬಿದ್ದು, ಹಲವು ತೋಟದಲ್ಲಿ ತೆಂಗಿನ ಫಸಲು, ಮಾವಿನ ಫಸಲು, ಬಾಳೆ ಬೆಳೆ, ತೋಟದಲ್ಲಿದ್ದ ರಾಸುಗಳ ಕೊಟ್ಟಿಗೆಗಳು ಗಾಳಿಗೆ ಬಲಿಯಾಗಿವೆ.ಬಸವೇಶ್ವರ ದೇವಸ್ಥಾನದ ಮುಂಭಾಗದ ಶೀಟ್‌ಗಳು, ಮಡೆ ಮನೆಯ ಶೀಟ್‌ಗಳು, ಚೌಡೇಶ್ವರಿ ದೇವಸ್ಥಾನದ ಹಿಂಭಾಗದ ಸಾನ್ನದ ಮನೆಯ ಶೀಟ್‌ಗಳು ಹಾಗೂ ಹಲವು ಮನೆಗಳ ಹೆಂಚು ಮತ್ತು ಅಂಗಡಿಗಳ ಮುಂದಿನ ಶೀಟ್‌ಗಳು ಹಾರಿಹೋಗಿವೆ. ಗಾಳಿ ಬೀಸಿದಾಗ ಕೆಲವು ವಿದ್ಯುತ್ ಮಾರ್ಗದ ತಂತಿಗಳು ಸುತ್ತಿಕೊಂಡು, ವಿದ್ಯುತ್ ವ್ಯತ್ಯಯವಾಗಿದೆ.ಹೋಬಳಿಯ ಅರಕೆರೆ, ಕೊತ್ತನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ತೆಂಗಿನ ಮರಗಳು ಮತ್ತು ಇತರೆ ಮರಗಳು ನೆಲಕಚ್ಚಿ ಅಪಾರ ಹಾನಿಯಾಗಿದೆ. ಪಟ್ಟಣದಲ್ಲಿ ನಡೆಯುತ್ತಿದ್ದ ಭಾನುವಾರದ ಸಂತೆಯಲ್ಲಿ ಜೋರಾಗಿ ಗಾಳಿ ಬೀಸಿದ ಪರಿಣಾಮ ವ್ಯಾಪಾರಸ್ಥರು ತೊಂದರೆ ಅನುಭವಿಸಿದರು. ಸೆಸ್ಕ್ ಶಾಖಾಧಿಕಾರಿ ಲಕ್ಷ್ಮಯ್ಯ ಪತ್ರಿಕೆಯೊಂದಿಗೆ ಮಾತ ನಾಡಿ, ಪಟ್ಟಣ ಸೇರಿದಂತೆ ಹಲವು ಕಡೆ 6ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರ ಪರಿಣಾಮ ವಿದ್ಯುತ್ ಸರಬರಾಜಿಗೆ ತೊಡಕಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.