ಸೋಮವಾರ, ನವೆಂಬರ್ 18, 2019
23 °C

ಆಲಿಕಲ್ಲು ಮಳೆ: 10 ಲಕ್ಷ ನಷ್ಟ

Published:
Updated:

ಶಿಡ್ಲಘಟ್ಟ: ಸೋಮವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ತಾಲ್ಲೂಕಿನ ಹಲವೆಡೆ ಮನೆಗಳ ಛಾವಣಿ ಜಖಂಗೊಂಡಿವೆ. ಮಾವು, ಗೋಡಂಬಿ, ದ್ರಾಕ್ಷಿ ಬೆಳೆಗಳಿಗೆ ಅಪಾರ ನಷ್ಟವುಂಟಾಗಿದೆ.ಪಟ್ಟಣ ಹಾಗೂ ಆಸುಪಾಸಿನಲ್ಲಿ ತೆಳುವಾಗಿ ಮಳೆ ಬಿದ್ದಿದೆ. ಆದರೆ ಬಶೆಟ್ಟಹಳ್ಳಿ ಹಾಗೂ ಜಂಗಮಕೋಟೆ ಹೋಬಳಿ ಹಲವೆಡೆ ಜೋರು ಮಳೆ ಬಿದ್ದಿದ್ದು, ತಾಲ್ಲೂಕಿನಲ್ಲಿ ಸರಾಸರಿ 0.3 ಸೆಂ.ಮೀ.ನಷ್ಟು ಮಳೆ ಬಿದ್ದಿದೆ. ಮಳೆಗಿಂತಲೂ ಹೆಚ್ಚು ಬಿರುಗಾಳಿ ಹಾಗೂ ಕೆಲವೆಡೆ ಆಲಿಕಲ್ಲು ಮಳೆ ಬಿದ್ದಿದ್ದರಿಂದ ನಷ್ಟ ಹೆಚ್ಚಾಗಿದೆ.ತಾಲ್ಲೂಕಿನ ಮಳ್ಳೂರು ಗ್ರಾಮದ ಶಿವಕುಮಾರ್ ಎಂಬುವರಿಗೆ ಸೇರಿದ ಕಟಾವಿಗೆ ಬಂದಿದ್ದ ದ್ರಾಕ್ಷಿ ತೋಟದ ಚಪ್ಪರ ನೆಲ ಕಚ್ಚಿದೆ. ಕಟಾವಿನ ಹಂತದಲ್ಲಿದ್ದ ದ್ರಾಕ್ಷಿ ಬೆಳೆ ಈಗಿನ ಬೆಲೆಯಲ್ಲಿ ಅಂದಾಜು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ ಬೆಳೆ ಕೈಗೆ ಬಂದಿದ್ದರೆ ರೈತರಿಗೆ ಒಳ್ಳೆ ಮೊತ್ತ ದೊರೆಯುತ್ತಿತ್ತು. ಇದೀಗ ದ್ರಾಕ್ಷಿ ಚಪ್ಪರ ನೆಲಕ್ಕುರುಳಿ ಕನಸು ನುಚ್ಚುನೂರಾಗಿದೆ.ಅಷ್ಟೇ ಅಲ್ಲ, ಮೇಲೂರು, ಮಳ್ಳೂರಿನ ಆಸುಪಾಸಿನಲ್ಲಿ ಬಹುತೇಕ ದ್ರಾಕ್ಷಿ ತೋಟಗಳಲ್ಲಿ ಆಲಿಕಲ್ಲು ಮಳೆಯಿಂದ ಪೆಟ್ಟಾಗಿದೆ. ಹಣ್ಣು ಗೊಂಚಲಿನಲ್ಲಿಯೆ ಕೊಳೆತು ನಷ್ಟವುಂಟಾಗಿದೆ. ಕಸಬಾ ಹಾಗೂ ಜಂಗಮಕೋಟೆ ಹೋಬಳಿಯಲ್ಲಿ ಗೋಡಂಬಿ, ಮಾವಿನ ಮಿಡಿಗಳು(ಸಣ್ಣ ಮಾವಿನ ಕಾಯಿಗಳು), ಹೂ ಉದುರಿ ಹೋಗಿದೆ.ಬಹುತೇಕ ಮನೆಗಳ ಛಾವಣಿಗಳು ಜಖಂಗೊಂಡಿವೆ. ಮನೆಗಳಿಗೆ ಹಾಗೂ ಹುಳು ಸಾಕಾಣಿಕೆ ಮನೆಗಳಿಗೆ ಅಳವಡಿಸಿದ್ದ ಸಿಮೆಂಟ್ ಹಾಗೂ ತಗಡಿನ ಶೀಟುಗಳು ಗಾಳಿಗೆ ಹಾರಿಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

ಪ್ರತಿಕ್ರಿಯಿಸಿ (+)