ಆಲೂರು–- ವೈದ್ಯನಾಥಪುರ ಸೇತುವೆ ಕಾಮಗಾರಿ ಆರಂಭ

7
ಗ್ರಾಮ ಸಂಚಾರ

ಆಲೂರು–- ವೈದ್ಯನಾಥಪುರ ಸೇತುವೆ ಕಾಮಗಾರಿ ಆರಂಭ

Published:
Updated:

ಮದ್ದೂರು: ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆಲೂರು–-ವೈದ್ಯನಾಥಪುರ ಸಂಪರ್ಕಿಸುವ ಹೊಸ ಸೇತುವೆ ಕಾಮಗಾರಿ ಕೊನೆಗೂ ಆರಂಭಗೊಂಡಿದೆ.1994ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರ ಅವಧಿಯಲ್ಲಿ ಶಿಂಷಾನದಿಗೆ ಅಡ್ಡಲಾಗಿ ಈ ಹಿಂದೆ ಕಟ್ಟಲಾಗಿದ್ದ ಸೇತುವೆ ಇಲ್ಲಿನ ಸ್ಥಳೀಯ ಮರಳು ಗಣಿಗಾರಿಕೆ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ಶಿಥಿಲಗೊಂಡು 2010ರಲ್ಲಿ ಕುಸಿಯಿತು.ಅಂದಿನಿಂದ ಮದ್ದೂರು ಪಟ್ಟಣದೊಂದಿಗೆ ಕೆ. ಹೊನ್ನಲಗೆರೆ ವ್ಯಾಪ್ತಿಯ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿದು ಬಿದ್ದಿತ್ತು.

ಪಟ್ಟಣದಿಂದ ಕೇವಲ 3ಕಿ.ಮೀ ದೂರದಲ್ಲಿರುವ ಅಲೂರು ಗ್ರಾಮವನ್ನು ಸೋಮನಹಳ್ಳಿ, ಕೆ. ಕೋಡಿಹಳ್ಳಿಯ ಪರ್ಯಾಯ ಮಾರ್ಗದಲ್ಲಿ 12 ಕಿ.ಮೀ ದೂರದ ಬಳಸು ದಾರಿಯಲ್ಲಿ ಮುಟ್ಟಬೇಕಾದ ಪರಿಸ್ಥಿತಿ ಇಲ್ಲಿನ ಜನರಿಗೆ ಒದಗಿತ್ತು.  ಈ ಹಿನ್ನೆಲೆಯಲ್ಲಿ ಕುಸಿದ ಸೇತುವೆಯ ಮೇಲೆ ಬಿಜೆಪಿ ಸರ್ಕಾರ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನಗಳು ಓಡಾಡಬಲ್ಲ ತಾತ್ಕಾಲಿಕ ಕಬ್ಬಿಣ ಸೇತುವೆ ನಿರ್ಮಿಸಿತ್ತು. ಇದಾದ ಬಳಿಕ ಈ ವ್ಯಾಪ್ತಿಯ 50ಕ್ಕೂ ಹೆಚ್ಚು ಹಳ್ಳಿಗಳ ಜನರ ಒತ್ತಡಕ್ಕೆ ಮಣಿದ ಬಿಜೆಪಿ ಸರ್ಕಾರ ಹೊಸ ಸೇತುವೆ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಆದರೆ, ಹಣಕಾಸು ಇಲಾಖೆಯ ತಡೆಯಿಂದಾಗಿ ಸೇತುವೆ ಕಾರ್ಯ ನೆನಗುದಿಗೆ ಬಿದ್ದಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೇ 30ರಂದು ಈ ಹೊಸ ಸೇತುವೆ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ 2015ರ ಮೇ 29ಕ್ಕೆ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ(ಕೆ.ಆರ್.ಡಿ.ಸಿ.ಎಲ್)ದ ನೇತೃತ್ವದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಇನ್ಫಸ್ಟ್ರಕ್ಚರ್ ಎಂಜನಿಯರ್ಸ್‌ ಲಿಮಿಟೆಡ್ ಸೇತುವೆಯ ವಿನ್ಯಾಸ ರೂಪಿಸಿದೆ. ಸೇತುವೆ ನಿರ್ಮಾಣದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವ ಸ್ಟ್ರಕ್ಟ್‌ಕಾನ್ ಎಂಜನಿಯರಿಂಗ್ ಹಾಗೂ ಕನ್‌ಸ್ಟ್ರಕ್ಷನ್ ಕಂಪೆನಿ ಕಾಮಗಾರಿ ಆರಂಭಿಸಿದೆ.ಎರಡು ಟ್ರಾಕ್‌ ಒಳಗೊಂಡ ಈ ಸೇತುವೆಯ ಅಗಲ 10.5 ಮೀಟರ್. ಸೇತುವೆಯ ಉದ್ದ 700ಮೀಟರ್. 17ಮೀಟರ್ ಎತ್ತರವಿರುವ ಸೇತುವೆಯನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ನಿರ್ಮಿಸಲಾಗುತ್ತಿದೆ. ಸೇತುವೆಯ ಫಿಲ್ಲರ್‌ಗಳ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ನೀರಿನ ನಡುವೆಯೇ ಕೊಳವೆ ಬಾವಿ ಮಾದರಿಯಲ್ಲಿ ಪಿಲ್ಲರ್‌ಗಳ ನಿರ್ಮಾಣಕ್ಕಾಗಿ ಭೂಮಿ ಕೊರೆಯಲಾಗುತ್ತಿದೆ. ಅಲ್ಲದೇ ಪಿಲ್ಲರ್ ವ್ಯಾಸಕ್ಕೆ ಅನುಗುಣವಾಗಿ ಸರಳುಗಳನ್ನು ಕಟ್ಟಿ ಕಾಂಕ್ರಿಟ್ ಹಾಕಲಾಗುತ್ತಿದೆ. ಈ ಹೊಸ ತಂತ್ರಜ್ಞಾನದ ಪರಿಣಾಮ ಈ ಭಾಗದಲ್ಲಿ ಮರಳು ಗಣಿಗಾರಿಕೆ ನಡೆದರೂ ಯಾವುದೇ ಕಾರಣಕ್ಕೂ ಪಿಲ್ಲರ್‌ಗಳು ಕುಸಿಯಲು ಸಾಧ್ಯವಿಲ್ಲ ಎಂಬುದು ಇಲ್ಲಿನ ಎಂಜಿನಿಯರ್‌ಗಳಾದ ಮಹಾಪಾತ್ರ ಹಾಗೂ ಉನ್ನಿಕೃಷ್ಣನ್ ಅವರ ಅಭಿಮತ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಮಿ ಪೂಜೆ ನೆರವೇರಿಸಲಿದ್ದು, ಈ ತಿಂಗಳ ಅಂತ್ಯದೊಳಗೆ ಈ ಸೇತುವೆ ನಿರ್ಮಾಣಕ್ಕೆ ಅಧಿಕೃತ ಚಾಲನೆ ದೊರಕಲಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.ಹೊಸ ಸೇತುವೆ ನಿರ್ಮಾಣ ಕಾರ್ಯದಿಂದ ಈ ವ್ಯಾಪ್ತಿಯ ಜನತೆ ಮುಖದಲ್ಲಿ ಸಂತಸದ ಕಳೆ ತಂದಿದೆ. ಅಲ್ಲದೇ ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡಿ ಹೊಸ ಸೇತುವೆ ನಿರ್ಮಾಣದ ಕಾರ್ಯವನ್ನು ವೀಕ್ಷಿಸುತ್ತಿದ್ದು, ಸೇತುವೆ ಆದಷ್ಟು ಬೇಗನೇ ಮುಗಿದು ಸಾರ್ವಜನಿಕರ ಓಡಾಟಕ್ಕೆ ದಕ್ಕಲಿ ಎಂಬುದು ಇಲ್ಲಿನ ಜನರ ಆಶಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry