ಶನಿವಾರ, ಮೇ 28, 2022
31 °C

ಆಲ್ದೂರು: ಆಲಿಕಲ್ಲು ಸಹಿತ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲ್ದೂರು: ಕಳೆದೆರೆಡು ದಿನಗಳಿಂದ ಹೋಬಳಿಯಾದ್ಯಂತ ಇದ್ದ ಮೋಡ ಕವಿದ ವಾತಾವರಣ ಕಂಡು  ಕಾಫಿ ಕಟಾವು, ಸಂಸ್ಕರಣೆಯಂತಹ ಚಟುವಟಿಕೆಯಲ್ಲಿ ಮಗ್ನರಾಗಿದ್ದ  ಕಾಫಿ ಬೆಳೆಗಾರರು ‘ಯಾವಾಗ ಮಳೆ ಬಂದು ಕೆಲಸವನ್ನೆಲ್ಲ ಹಾಳು ಮಾಡುತ್ತದೋ’ ಎಂಬ ಆತಂಕದಲ್ಲಿರುವಾಗಲೇ ಗುರುವಾರ  ಹೋಬಳಿಯಾದ್ಯಂತ ದಿಢೀರನೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಗುರುವಾರ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣವಾಗಿ ಮೋಡ ಕವಿದದ್ದರಿಂದ ಆಲ್ದೂರು ಪಟ್ಟಣದ ಮೇಲೆ ಕತ್ತಲು ಆವರಿಸಿದಂತಾಗಿತ್ತು. ಇನ್ನೇನು ಮಳೆಯಾಗುತ್ತದೆ ಎಂದು ಜನರು  ನಿರೀಕ್ಷೆಯಲ್ಲಿರುವಂತೆಯೇ ಒಂದೇ ಸಮನೆ ಬಿದ್ದ ಆಲಿಕಲ್ಲುಗಳು ಮಾಡಿದ ‘ಪಟ ಪಟ’ ಸದ್ದಿನಿಂದ ಜನರು ಕೆಲಕಾಲ ಚಕಿತರಾಗಿ ದಿಗಿಲುಗೊಂಡಂತೆ ಕಂಡರು.  ಸುಮಾರು 15 ನಿಮಿಷಗಳ ವರೆಗೆ ಮಳೆ ನೀರಿನ ಲವಲೇಷವಿಲ್ಲದೇ ಆಲಿಕಲ್ಲು ಬೀಳುತ್ತಿದ್ದ ದೃಶ್ಯ ಜನರ ಮನಸೂರೆಗೊಂಡಿತ್ತು. ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡು ಬಿದ್ದಿದ್ದ ಆಲಿಕಲ್ಲುಗಳು ರಸ್ತೆಯ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿದಂತೆ ಭಾಸವಾಯಿತು. ವಯಸ್ಕರೂ ಸೇರಿದಂತೆ ಕೆಲವರೂ ಆಲಿಕಲ್ಲು ಸಂಗ್ರಹ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ನಂತರ ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಆಲ್ದೂರು ಪಟ್ಟಣದ ಜನಜೀವನವೂ ಅಸ್ತವ್ಯಸ್ತಗೊಂಡಿತು. ಆಲಿಕಲ್ಲು ಸಹಿತ ದಿಢೀರ್ ಸುರಿದ ಮಳೆಯಿಂದ ರಕ್ಷಣೆ ಪಡೆಯಲು ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಯಿತು. ಸ್ವಚ್ಛತೆ ಇಲ್ಲದೇ ಕಸಕಡ್ಡಿಗಳಿಂದ ತುಂಬಿ ತುಳುಕುತ್ತಿದ್ದ ಚರಂಡಿಗಳಲ್ಲಿ ಮಳೆ ನೀರು ನಿಂತು ರಸ್ತೆ ಮೇಲೆ ಹರಿಯುವಂತಾಯಿತು. ಮಳೆಯ ರಭಸಕ್ಕೆ ವಾಹನ ಸಂಚಾರವೂ ಸಾಧ್ಯವಾಗದೇ ವಾಹನಗಳು ನಿಂತಲ್ಲಿಂದ ಕದಲಲಿಲ್ಲ. ಒಣಗಲು ಹಾಕಿದ್ದ ಕಾಫಿ, ಕಾಳು ಮೆಣಸನ್ನು ಮಳೆಯಿಂದ ರಕ್ಷಿಸಲು ಬೆಳೆಗಾರರು ಪರದಾಡುತ್ತಿದ್ದುದು ಕಂಡುಬಂತು. ಸೂರಪ್ಪನ ಹಳ್ಳಿ, ಗುಲ್ಲನ್‌ಪೇಟೆ, ಕಬ್ಬಿಣ ಸೇತುವೆ, ಹಾಂದಿ, ವಸ್ತಾರೆ, ಕೂದುವಳ್ಳಿ, ಹೆಡದಾಳು ಮೊದಲಾದ ಗ್ರಾಮಗಳಲ್ಲೂ ಧಾರಾಕಾರ ಮಳೆಯಾಗಿದ್ದು ಮಳೆಯ ರಭಸದಿಂದಾಗಿ ಹೋಬಳಿಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲವಾದರೂ ಅಲ್ಲಲ್ಲಿ ಕಾಫಿ ಬೆಳೆಗಾರರು ಒಣಗಲು ಹಾಕಿದ್ದ ಕಾಫಿ, ಕಾಳು ಮೆಣಸು ಮಳೆ ನೀರಿನಲ್ಲಿ ತೊಯ್ದಿರುವ ದೃಶ್ಯ ಸಾಮಾನ್ಯವಾಗಿತ್ತು.  ಹೋಬಳಿಯಾದ್ಯಂತ ಸುಮಾರು 1 ಇಂಚಿನಷ್ಟು ಮಳೆ ಯಾಗಿದ್ದು ಬಿಸಿಲ ಝಳದಿಂದ ತತ್ತರಿಸಿದ್ದ ಸಾರ್ವಜನಿಕರಿಗೆ ಗುರುವಾರ ಸುರಿದ ಮಳೆ ತಂಪೆರೆಯಿತು. ಆದರೆ ಅಕಾಲಿಕ ಮಳೆಯಿಂದಾಗಿ ಮುಂದಿನ ವರ್ಷ ಕಾಫಿ ಇಳುವರಿ  ಕುಂಠಿತಗೊಳ್ಳುವ ಭೀತಿಯಿಂದ ಸಹಜವಾಗಿ ಬೆಳೆಗಾರರ ಮುಖದಲ್ಲಿ ದುಗುಡ ಆವರಿಸಿದೆ.ನರಸಿಂಹರಾಜಪುರ: ಭಾರಿ ಮಳೆ 

ನರಸಿಂಹರಾಜಪುರ:
ಪಟ್ಟಣದ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆ ಸುರಿದಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಸಂಜೆ 5ಗಂಟೆ ವೇಳೆಗೆ ಮೋಡ ಕವಿದ ವಾತಾವರಣದೊಂದಿಗೆ ಇದ್ದಕ್ಕಿದ್ದಂತೆ ಸುರಿದ ಮಳೆ ಸುಮಾರು ಒಂದು ಗಂಟೆಗೂ ಕಾಲ ಪ್ರಮಾಣದಲ್ಲಿ ಸುರಿಯಿತು. 33 ಮೀ.ಮೀ  ನಷ್ಟು ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ರಾತ್ರಿ 8.30ರವರೆಗೂ ವಿದ್ಯುತ್ ಪೂರೈಕೆ ಸ್ಥಗಿತ ಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.