ಆಳಸಮುದ್ರ ಮೀನುಗಾರಿಕೆ ಸ್ಥಗಿತ

7

ಆಳಸಮುದ್ರ ಮೀನುಗಾರಿಕೆ ಸ್ಥಗಿತ

Published:
Updated:

ಉಡುಪಿ: ರತ್ನಗಿರಿಯ ಮೀನುಗಾರರು ಅರಬ್ಬೀಸಮುದ್ರದಲ್ಲಿ  ಮೀನುಗಾರಿಕೆ ನಡೆಸುತ್ತಿದ್ದ ಮಲ್ಪೆಯ ಆಳಸಮುದ್ರ ಮೀನುಗಾರರ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ಆಳಸಮುದ್ರ ದೋಣಿ ತಾಂಡೇಲ್ ಸಂಘದ ಆಶ್ರಯದಲ್ಲಿ ಬುಧವಾರ ಮಲ್ಪೆ ಬಂದರಿನಲ್ಲಿ ಪ್ರತಿಭಟನೆ ನಡೆಯಿತು. ಆಳಸಮುದ್ರ ಮೀನುಗಾರಿಕೆ ನಡೆಸುವ ದೋಣಿಗಳ ಮೀನುಗಾರರು ಮೀನುಗಾರಿಕೆಗೆ ತೆರಳದೆ ಪ್ರತಿಭಟಿಸಿದರು. ಭಾರಿ ಸಂಖ್ಯೆ ಆಳಸಮುದ್ರ ದೋಣಿಗಳು ಮಲ್ಪೆ ಬಂದರಿನಲ್ಲೇ ಲಂಗರು ಹಾಕಿದವು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಮುದ್ರ ದೋಣಿ ತಾಂಡೇಲ್ ಸಂಘದ ಅಧ್ಯಕ್ಷ ಶಶಿಧರ್ ಅಮೀನ್, `ಅರಬ್ಬೀ ಸಮುದ್ರದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದಾಗ ನಮ್ಮ ಮೀನುಗಾರರ ಮೇಲೆ ರತ್ನಗಿರಿ ಬಳಿ ಭಾನುವಾರ ಹಲ್ಲೆ ನಡೆಸಲಾಗಿದೆ. ಈ ಮಾರಣಾಂತಿಕ ಹಲ್ಲೆಯಿಂದ ನಮ್ಮ ಮೀನುಗಾರರು ಜೀವ ಬೆದರಿಕೆ ಎದುರಿಸುವಂತಾಗಿದೆ. ನಮ್ಮ ವೃತ್ತಿಗೆ ಹಾಗೂ ಮೀನುಗಾರರಿಗೆ ಸರ್ಕಾರ ರಕ್ಷಣೆ ಒದಗಿಸಬೇಕು~ ಎಂದು ಆಗ್ರಹಿಸಿದರು.`ನಮ್ಮ ಮೀನುಗಾರರಿಗೆ ಸೂಕ್ತ ನ್ಯಾಯ ಸಿಗುವವರೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳದೆ ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸುತ್ತೇವೆ~ ಎಂದು ಅವರು ತಿಳಿಸಿದರು.  `ಪರ್ಸೀನ್ ಬೋಟ್‌ಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರತ್ನಗಿರಿಯ ಸ್ಥಳೀಯ ಮೀನುಗಾರರು ನಮ್ಮವರ ಮೇಲೆ ದಾಳಿ ನಡೆಸಿದ್ದಾರೆ.

 

ಹಲ್ಲೆ ನಡೆಸಿದ್ದಲ್ಲದೇ ನಮ್ಮವರ ಬಳಿ ಇದ್ದ, ಫಿಶ್ ಫೈಂಡರ್, ಜಿಪಿಎಸ್, ವೈರ್‌ಲೆಸ್ ಸೆಟ್ ಮತ್ತಿತರ ಮೀನುಗಾರಿಕಾ ಉಪಕರಣಗಳನ್ನೂ ಕಸಿದುಕೊಂಡಿದ್ದಾರೆ. ದೋಣಿಗೂ ಹಾನಿ ಉಂಟು ಮಾಡಿದ್ದಾರೆ. ನಮ್ಮವರು ಸಮುದ್ರ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ದೂರದಲ್ಲಿ ಮೀನು ಹಿಡಿಯುತ್ತಿದ್ದರು. ಅವರು ಯಾವುದೇ ನಿಯಮಗಳನ್ನು ಉಲ್ಲಂಘಿಸಿರಲಿಲ್ಲ. ಸ್ಥಳೀಯರು ಮೀನುಗಾರಿಕೆ ನಡೆಸುವ  ವ್ಯಾಪ್ತಿಯೊಳಗೂ ನಮ್ಮವರು ಪ್ರವೇಶಿಸಿರಲಿಲ್ಲ. ಆದರೂ ಯಾವ ಕಾರಣಕ್ಕೆ ಹ್ಲ್ಲಲೆ ನಡೆಯಿತೋ ತಿಳಿಯದು~ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.ಆಳಸಮುದ್ರ ಮೀನುಗಾರರೊಬ್ಬರು ಮಾತನಾಡಿ, `ಆಳಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಕೂಡಾ ಕಿರುಕುಳ ನೀಡುತ್ತಾರೆ. ಕರಾವಳಿ ತೀರವನ್ನು ರಕ್ಷಿಸಲು ಇರುವ ಸಿಬ್ಬಂದಿಯೇ  ಮೀನುಗಾರರ ಆತಂಕ ಸೃಷ್ಟಿಗೆ ಕಾರಣರಾಗಿದ್ದಾರೆ. ಹಣ, ಮದ್ಯ ಅಥವಾ ಬೆಲೆ ಬಾಳುವ ಮೀನು ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಾರೆ~ ಎಂದು ದೂರಿದರು.`ಈ ಎಲ್ಲ ಕಿರುಕುಳ ಸಹಿಸಿ ಮೀನು ಗಾರಿಕೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅವರು ಬಯಸಿದ ವಸ್ತುಗಳನ್ನು ನೀಡಿದರೆ ನೀವು ಭಯೋತ್ಪಾದಕರೋ, ಎಲ್ಲಿಂದ ಬಂದವರೆಂದೂ ಕೂಡಾ ಪ್ರಶ್ನಿಸುವುದಿಲ್ಲ. ಇಂತಹ ಸಿಬ್ಬಂದಿಯಿಂದ ಮೀನುಗಾರರು ರಕ್ಷಣೆ ಬಯಸುವುದಾದರೂ ಹೇಗೆ~ ಎಂದು ಅವರು ಪ್ರಶ್ನಿಸಿದರು.ಮೀನುಗಾರರ ಮೇಲೆ ನಡೆದ ಹಲ್ಲೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್, `ಈ ಬಗ್ಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಗಮನ ಸೆಳೆದು ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚಿಸುವಂತೆ ಮನವೊಲಿಸುತ್ತೇನೆ. ಈ ಬಗ್ಗೆ ಮಹಾರಾಷ್ಟ್ರದ ಸರ್ಕಾರ ಜತೆ ತಕ್ಷಣ ಮಾತುಕತೆ ನಡೆಸಿ, ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಈ ಬಗ್ಗೆ ಮೀನುಗಾರರ ನಿಯೋಗದ ಜತೆ ತೆರಳೋಣ~ ಎಂದು ಅವರು ತಿಳಿಸಿದರು.ಮೀನುಗಾರರು ಜಿಲ್ಲಾಧಿಕಾರಿ ಎಂ.ಟಿ.ರೇಜು, ಜಿಲ್ಲಾ ಪೊಲೀಸ್ ವರಿಷ್ಠ ಬೋರಲಿಂಗಯ್ಯ ಹಾಗೂ  ಶಾಸಕ ರಘುಪತಿ ಭಟ್ ಅವರಿಗೆ ಮನವಿ ಸಲ್ಲಿಸಲಾಯಿತು.  ಸಂಘದ ಮುಖಂಡ ಸತೀಶ್ ಅಮೀನ್ ಪಡುಕೆರೆ, ತಿಮ್ಮಪ್ಪ ಭಟ್ಕಳ, ರವಿಸಾಲ್ಯಾನ್, ರವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry