ಆಳುವವರೇ ಅಳುವಂತಾದೊಡೆ....

7

ಆಳುವವರೇ ಅಳುವಂತಾದೊಡೆ....

Published:
Updated:

ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಿಗೆ ಬಡಿಸುವ ಊಟ,ತಿಂಡಿಗಳ ಪಟ್ಟಿಯನ್ನು ಪತ್ರಿಕೆಗಳಲ್ಲಿ ಓದಿಯೇ ಬಾಯಲ್ಲಿ ನೀರು ತಂದುಕೊಂಡಿದ್ದ ಉದಯೋನ್ಮುಖ ಸಾಹಿತಿ ಕಂ ಪತ್ರಕರ್ತ ತೆಪರೇಸಿ ಬಗಲಿಗೆ ಚೀಲ ಇಳಿ ಬಿಟ್ಟುಕೊಂಡು ಸಮ್ಮೇಳನಕ್ಕೆ ಹೋದವನು ಊಟಕ್ಕೆ ಪರದಾಡಿ, ಮಲಗೋಕೆ ತಿಣುಕಾಡಿ, ಮೂರು ದಿನ ಆರು ಗೋಷ್ಠಿಗಳಲ್ಲಿ ಆಕಳಿಸಿ, ಕವಿಗೋಷ್ಠಿಯಲ್ಲಿ ತೂಕಡಿಸಿ, ಮುಖ ಒಣಗಿಸಿಕೊಂಡು ವಾಪಾಸು ಬಂದಾಗ ಹರಟೆಕಟ್ಟೆ ಗೆಳೆಯರೆಲ್ಲ ಹೃತ್ಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸಿದರು. ಎಲ್ಲರಿಗೂ ತೆಪರೇಸಿಯ ಅನುಭವ ಕೇಳುವ ಕುತೂಹಲ.

‘ಸಾಹಿತ್ಯ ಸಮ್ಮೇಳನ ಹೇಗಿತ್ತು ತೆಪರೇಸಿಯವರೇ?’ ಎಂದು ಗುಡ್ಡೆ ನಾಟಕೀಯವಾಗಿ ಪೀಠಿಕೆ ಹಾಕಿದಾಗ ತೆಪರೇಸಿ ‘ಥೂ ಸುಮ್ಕಿರಲೆ, ನಾನೇ ನೆಟ್ಟಗೆ ಊಟಿಲ್ದೆ, ನಿದ್ದಿಲ್ದೆ ಬಂದಿದೀನಿ ಇವನೊಬ್ಬ..! ಎಂದು ಮುಖ ಸಿಂಡರಿಸಿದ.

‘ಯಾಕೋ ತೆಪರಾ? ಏನಾತೋ?’ ಎಂದು ಮಿಸ್ಸಮ್ಮ ಕಕ್ಕುಲಾತಿ ತೋರಿದಳು.

‘ಏನಿಲ್ಲ ಮಿಸ್ಸಮ್ಮ, ಭರ್ಜರಿ ಊಟ ಸಿಗ್ತತಿ ಅಂತ ಸಮ್ಮೇಳನಕ್ಕೆ ಹೋದೆ. ಅಲ್ಲಿ ಮಧ್ಯಾನದ ಊಟಕ್ಕೆ ಜನ ಬೆಳಿಗ್ಗೆ ಹನ್ನೊಂದೂವರಿಗೇ ಕ್ಯೂ ಹಚ್ಚಿ ನಿಂತಿರ್ತಿದ್ರು. ಇವರೇನು ಸಮ್ಮೇಳನಕ್ಕೆ ಸಾಹಿತ್ಯ ಕೇಳಾಕೆ ಬಂದಾರೋ ಇಲ್ಲ ಕ್ಯೂ ನಿಂತು ಬರೀ ಉಣ್ಣಾಕೆ ಬಂದಾರೋ ಅನಿಸ್ತು. ಪ್ಲೇಟ್‌ಗಳಿಗೂ ಹೊಡದಾಟ. ಕೊನಿಗೆ ಅನ್ನ ಇದ್ರೆ ಸಾಂಬರ್ ಇಲ್ಲ. ಪಲ್ಯ ಇದ್ರೆ ಚಪಾತಿ ಇಲ್ಲ. ರಾತ್ರಿ ಮಲಗಾಕೆ ಯಾವುದೋ ಸ್ಕೂಲ್ ಕೊಟ್ಟಿದ್ರು. ಸೊಳ್ಳೆ ಕಾಟ ಬೇರೆ. ಅದ್ಕೆ ರಾತ್ರಿ ಪೂರಾ ಎಚ್ಚರಿದ್ದು ಬೆಳಿಗ್ಗೆ ಗೋಷ್ಠಿಗಳಲ್ಲಿ ಖಾಲಿ ಕುರ್ಚಿ ಮೇಲೆ ಕಾಲು ನೀಡಿಕೊಂಡು ಗಡದ್ ನಿದ್ದೆ ಮಾಡ್ತಿದ್ದೆ. ಸಮ್ಮೇಳನದ ಅಧ್ಯಕ್ಷ ವೆಂಕಟಸುಬ್ಬಯ್ಯನೋರ್ನ ಕೊನಿಗೂ ಮಾತಾಡ್ಸಾಕೆ ಆಗ್ಲೇ ಇಲ್ಲ’ ಎಂದ.

 ‘ಸಮ್ಮೇಳನ ಅಧ್ಯಕ್ಷರನ್ನ ತಾವು ಏನ್ ಕೇಳಬೇಕಿತ್ತೊ?’ ಗುಡ್ಡೆ ಕೊಂಕಿದ. 

 ‘ಏನಿಲ್ಲ, ಬಾಳ ದಿವಸದಿಂದ ವೆಂಕಟಸುಬ್ಬಯ್ಯನೋರತ್ರ ಇದನ್ನ ಕೇಳ್ಬೇಕು ಅನ್ಕಂಡಿದ್ದೆ.  ‘ನೀವು ಕನ್ನಡ ಪದಕೋಶ ಬರ್ದಿದೀರಿ. ಅದೇ ತರ ರಾಜಕೀಯ ಪದಕೋಶ ಯಾಕೆ ಬರೀಬಾರ್ದು?  ‘ಇಗೋ ಕನ್ನಡ’ದ ತರ  ‘ಅಗೋ ರಾಜಕೀಯ’ ಅಂತ ಬರೆದ್ರೆ ನಮ್ಮಂಥ ಸಣ್ಣ ಪತ್ರಕರ್ತರಿಗೆ ಅನುಕೂಲ ಆಗ್ತಿತ್ತು’ ಅಂತ ಕೇಳೋನಿದ್ದೆ.

ಈ ಗಣಿ ಧಣಿ ಸಚಿವರು ಆಗಾಗ ‘ಯಡೆಯೂರಪ್ಪನೋರೇ ನಮ್ಮ ನಾಯಕರು’ ಅಂತಿರ್ತಾರೆ. ಅಂಗಂದ್ರೆ ಏನರ್ಥ? ಅದೇ ಮಾತ್ನ ಅನಂತಕುಮಾರ್ ಹೇಳಿದ್ರೆ ಏನರ್ಥ? ಪ್ರತಿ ಚುನಾವಣೆ ಬಂದಾಗ್ಲೂ ದೇವೇಗೌಡ್ರು ‘ಇದು ನನ್ನ ಕೊನೇ ಚುನಾವಣೆ’ ಅಂತಿರ್ತಾರಲ್ಲ, ಅದಕ್ಕೆ ಏನರ್ಥ?’ ‘ನಮ್ಮಲ್ಲಿ ಯಾವ ಸಮಸ್ಯೆನೂ ಇಲ್ಲ, ನಾವೆಲ್ಲ ಒಟ್ಟಾಗಿದ್ದೀವಿ’ ಅಂತ ಈಶ್ವರಪ್ಪ ಅಂದ್ರೆ ಯಾವ ಅರ್ಥ?.....ರಾಜ್ಯಪಾಲರ ಬಗ್ಗೆ ಏನೇ ಕೇಳ್ಲಿ, ಯಡೆಯೂರಪ್ಪ ‘ನೋ ಕಾಮೆಂಟ್ಸ್’ ಅಂತಿರ್ತಾರೆ. ಈ ನೋ ಕಾಮೆಂಟ್ಸ್ ಅಂದ್ರೆ ಏನರ್ಥ?’

ತಕ್ಷಣ ಉತ್ತೇಜಿತನಾದ ಗುಡ್ಡೆ ತಾನೂ ಒಂದೆರಡು ಸೇರಿಸಿದ ‘ಯಡಿಯೂರಪ್ಪನೋರು ಸಿಟ್ಟಿಗೆದ್ದಾಗೆಲ್ಲ ‘ಈ ದೇವೇಗೌಡ್ರು ಕುಮಾರಸ್ವಾಮಿ ಸುಮ್ನಿರದಿದ್ರೆ ಅವರ ಜನ್ಮ ಜಾಲಾಡ್ತೀನಿ, ಅವರ ಬಂಡವಾಳನೆಲ್ಲ ಬಯಲಿಗೆಳೀತೀನಿ’ ಅಂದ್ರೆ ಏನರ್ಥ?  ‘ನಂಜುಂಡೇಶ್ವರನ ಮೇಲಾಣೆ ಇನ್ಮೇಲೆ ತಪ್ಪು ಮಾಡಲ್ಲ’ ಅಂದ್ರೆ ಏನರ್ಥ...? ಎಂದ.

 ‘ಕರೆಕ್ಟ್ ಕಣಲೆ ಗುಡ್ಡೆ’ ಅಂದ ತೆಪರೇಸಿ, ಅದೇ ತರ ಮಾತೆತ್ತಿದ್ರೆ ಎಲ್ಲ ಪಕ್ಷದೋರೂ ತಮ್ಮ ‘ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ’ ಅಂತ ಜನಕ್ಕೆ ಕರೆ ಕೊಡ್ತಾರೆ. ನೀವೂ ಭ್ರಷ್ಟಾಚಾರ ಮಾಡಿದೀರಲ್ರಿ, ಭೂಮಿ ನುಂಗಿದೀರಲ್ರಿ ಅಂದ್ರೆ, ಬಹಿರಂಗ ಚರ್ಚೆಗೆ ಬನ್ನಿ’ ಅಂತಾರೆ. ಸಾಬೀತು ಮಾಡಿದ್ರೆ ರಾಜಕೀಯದಿಂದ ನಿವೃತ್ತಿ ಆಗ್ತೀನಿ’ ಅಂತ ಸವಾಲು ಹಾಕ್ತಾರೆ. ಸಾಬೀತು ಮಾಡಿದ್ರೆ ಇದೆಲ್ಲ ಮಾಧ್ಯಮಗಳ ಸೃಷ್ಟಿ ಅಂತಾರೆ. ಇದಕ್ಕೆಲ್ಲ ಏನು ಅರ್ಥ? ಇಂಥವನೆಲ್ಲ ಕೇಳ್ಬೇಕು ಅನ್ಕಂಡೆ. ಆದ್ರೆ ಆಗ್ಲೇ ಇಲ್ಲ. ನನ್ನೆಂಡ್ತಿ ಬೇರೆ ಪೋನ್ ಮಾಡಿದ್ಲು. ನಂ ಏರಿಯಾ ರೌಡಿ ಒಬ್ಬ ಮನೆ ಹತ್ರ ಬಂದು ಧಮಕಿ ಹಾಕಿದ್ನಂತೆ. ಅದ್ಕೆ ಸಮ್ಮೇಳನ ಅಲ್ಲೇ ಬಿಟ್ಟು ಓಡಿ ಬಂದೆ’ ಅಂದ.

 ‘ಏನು? ರೌಡಿನಾ? ಯಾವನ್ಲೇ ಅವ್ನ ನಿಮ್ಮನಿಗೆ ಬಂದು ಧಮಕಿ ಹಾಕೋನು? ಪೋಲೀಸ್ ಕಂಪ್ಲೇಂಟ್ ಕೊಡ್ಬೇಕಿತ್ತು?’ ದುಬ್ಬೀರ ಪ್ರಶ್ನಿಸಿದ. 

 ‘ಕೊಟ್ಟೆ ಮಾರಾಯ, ಆದ್ರೆ ಏನು ಉಪಯೋಗ ಆಗ್ಲಿಲ್ಲ. ಮನಿ ಖಾಲಿ ಮಾಡದಿದ್ರೆ ಜೀವ ತೆಗೀತೀನಿ ಅಂತಾನೆ? ಪೊಲೀಸ್ ಸ್ಟೇಷನ್‌ಗೆ ಹೋಗಿ ಆ ರೌಡಿ ವಿರುದ್ಧ ಜೀವ ಬೆದರಿಕೆ ಕಂಪ್ಲೆಂಟ್ ಕೊಟ್ರೆ, ಇನ್ಸ್‌ಪೆಕ್ಟ್ರು ಕ್ಯಾರೇ ಅನ್ಲಿಲ್ಲಪ. ಓಡಾಡಿ ಓಡಾಡಿ ಸಾಕಾತು.  ‘ನೀವು ರೌಡಿ ಮೇಲೆ ಆ್ಯಕ್ಷನ್ ತಗಳದಿದ್ರೆ ಡಿಎಸ್ಪಿ ಹತ್ರ ಹೋಗ್ತೀನಿ ನೋಡ್ರಿ’ ಅಂದೆ. ಅದಕ್ಕೆ ಅವನು  ‘ಹೋಗ್ರಿ, ಹೋಗ್ರಿ ನಾನೂ ನೋಡ್ಕಂತೀನಿ ಅಂತಾನೆ?’ ಸರಿ ಅಂತ ಡಿಎಸ್ಪಿ ಹತ್ರ ಕಂಪ್ಲೆಂಟ್ ಕೊಟ್ಟೆ. ಅವರು ನಂಗೇ ರೋಫ್ ಹಾಕಿ ಕಳಿಸಿದ್ರು. ಎಸ್ಪಿ ಹತ್ರ ಹೋದೆ. ಅವರು  ‘ರೌಡಿಗಳನ್ನ ಎದುರು ಹಾಕ್ಕಾಬಾರ್ದು ಕಣ್ರಿ, ಅಡ್ಜಸ್ಟ್ ಮಾಡ್ಕಳಿ’ ಅಂತ ನಂಗೇ ಬುದ್ದಿವಾದ ಹೇಳೋದಾ? ತೆಪರೇಸಿ ಬೆವರೊರೆಸಿಕೊಂಡ. 

 ‘ಈ ಪೋಲೀಸ್‌ನೋರಿಗೂ ರೌಡಿಗಳಿಗೂ ಒಳಒಳಗೇ ಕನೆಕ್ಷನ್ ಇರ್ತತಂತೋ ತೆಪರ, ಕಂಪ್ಲೇಂಟೇ ತಗಳ್ಳಲ್ಲಂತೆ. ಹೋಗ್ಲಿ ಆಮೇಲೆ ಏನಾತು?’ ಮಿಸ್ಸಮ್ಮಗೆ ಕುತೂಹಲ.

 ‘ನಾನು ಬಿಡ್ತೀನಾ? ಬೆಂಗಳೂರಿಗೆ ಹೋಗಿ ಡಿಜಿಪಿಗೆ ಕಂಪ್ಲೆಂಟ್ ಕೊಟ್ಟೆ. ಅವರು ‘ಇದೆಲ್ಲ ಸಣ್ಣ ವಿಷಯ ಕಣ್ರಿ, ನನ್ನತ್ರ ಎಲ್ಲ ತರಬಾರ್ದು’ ಅನ್ನೋದಾ? ನನಗೆ ಉರಿದು ಹೋಯ್ತು. ‘ನೀವು ಆ್ಯಕ್ಷನ್ ತಗಳ್ಳದಿದ್ರೆ ಇಲ್ಲೇ ಸತ್ಯಾಗ್ರಹ ಕುಂತ್ಕಳ್ತೀನಿ’ ಅಂದೆ. ಅವರು ‘ಗೆಟ್‌ಔಟ್’ ಅಂದ್ರು. ನಾನೂ ಬಿಡ್ಲಿಲ್ಲ, ‘ಮುಖ್ಯಮಂತ್ರಿ ಯಡಿಯೂರಪ್ಪನೋರತ್ರ ಹೋಗಿ ಕಂಪ್ಲೇಂಟ್ ಕೊಡ್ತೀನಿ’ ಅಂದೆ. 

 ‘ಅಲೆ ಇವ್ನ, ಹೌದಾ? ಆಮೇಲೇನಾತು?’ ದುಬ್ಬೀರ ಕೇಳಿದ.

 ‘ನಾ ಅಂಗಂದಿದ್ಕೆ.... ಏನು? ಯಡೆಯೂರಪ್ಪನೋರಿಗೆ ಕಂಪ್ಲೇಂಟ್ ಕೋಡ್ತೀರಾ? ಕೊಟ್ಕಾ ಹೋಗ್ರಿ, ಅವರ ಕಂಪ್ಲೇಂಟೇ ನನ್ ಟೇಬಲ್ ಮೇಲೆ ಇನ್ನೂ ಹಂಗೇ ಬಿದ್ದೈತೆ’ ಅನ್ನೋದಾ?’

 ‘ಏನು? ಯಡಿಯೂರಪ್ಪನೋರೂ ಕಂಪ್ಲೇಂಟ್ ಕೊಟ್ಟಾರಂತಾ? ಏನಂತೆ?’

 ‘ಗೊತ್ತಿಲ್ವಾ? ಅವರಿಗೂ ಜೀವ ಬೆದರಿಕೆ ಅಂತೆ!’

ಗುಡ್ಡೆ ತಲೆ ಮೇಲೆ ಕೈ ಹೊತ್ತುಕೊಂಡು ತಕ್ಷಣ ಒಂದು ಆಶು ಕವಿತೆ ಹೇಳಿದ....

‘ನೀರಿಗೇ ಬಾಯಾರಿಕೆಯಾದೊಡೆ

ಸೂರ್ಯನಿಗೇ ಚಳಿಯಾದೊಡೆ

ಆಳುವವರೇ ಅಳುವಂತಾದೊಡೆ

ಯಾರಿಗೆ ದೂರುವೆಯೋ ತೆಪರೇಶಾ....’ ಎಂದ ರಾಗವಾಗಿ. ಎಲ್ಲರೂ ಗೊಳ್ಳಂತ ನಕ್ಕರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry