ಶನಿವಾರ, ಮೇ 28, 2022
30 °C

ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇಂದಿನಿಂದ

ಪ್ರಜಾವಾಣಿ ವಾರ್ತೆ/ ಸುರೇಶ್ ಎಡನಾಡು Updated:

ಅಕ್ಷರ ಗಾತ್ರ : | |

ಕಾಸರಗೋಡು: ಮತ್ಸ್ಯ ಸಂಪತ್ತನ್ನು ಸಂರಕ್ಷಿಸಲು ಇದೇ 14 ಮಧ್ಯರಾತ್ರಿಯಿಂದ ಜುಲೈ 31ರವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಸರ್ಕಾರ ನಿಷೇಧ ಹೇರಿದೆ.`ಟ್ರಾಲಿಂಗ್~ ನಿಷೇಧ ಮೀನುಗಾರಿಕೆಯನ್ನೇ ನಂಬಿರುವ ಬೆಸ್ತರಿಗೆ ಇನ್ನು ಉಪವಾಸದ ದಿನಗಳು. ಇದಕ್ಕಾಗಿ ಕೇರಳ ಸರ್ಕಾರ ಈ ಕುಟುಂಬಗಳಿಗೆ ಉಚಿತ ಪಡಿತರ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ.ಮುಂಗಾರು ಮಳೆ ಬಲಗೊಳ್ಳುವಂತೆ ಬೆಸ್ತರ ಬದುಕು ದುಸ್ತರವಾಗುತ್ತದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ನಿಷೇಧ ಬಾಧಕವಲ್ಲದಿದ್ದರೂ, ಗಾಳಿ-ಮಳೆಗೆ ನಿತ್ಯವೂ ಬುಟ್ಟಿ ತುಂಬಾ ಮೀನು ಸಿಗುವ ಸಾಧ್ಯತೆ ಅಷ್ಟಕ್ಕಷ್ಟೆ.ಅನ್ಯರಾಜ್ಯದ ದೋಣಿಗಳು ನಿಷೇಧದ ಹಿನ್ನೆಲೆಯಲ್ಲಿ ಕೇರಳದ ಗಡಿಯಿಂದ ಹೊರಹೋಗುವಂತೆ ಎಚ್ಚರಿಸಲಾಗಿದೆ. ನಿಷೇಧವನ್ನು ಉಲ್ಲಂಘಿಸುವ ದೋಣಿಗಳನ್ನು ವಶಪಡಿಸಲಾಗುವುದು. ಅಪಘಾತ ಅಥವಾ ದುರಂತಗಳು ಸಂಭವಿಸಿದರೆ ಮೀನುಗಾರಿಕಾ ಇಲಾಖೆ ಮೇ 15ರಿಂದ ಆರಂಭಿಸಿದ ಸಹಾಯವಾಣಿ (04672202537)ಯನ್ನು ಸಂಪರ್ಕಿಸಲು ಪ್ರಕಟಣೆ ಹೊರಡಿಸಲಾಗಿದೆ.ಆಳ ಸಮುದ್ರ ಮೀನುಗಾರಿಕೆ ನಿಷೇಧ ಸಾಂಪ್ರದಾಯಿಕ ಮೀನುಗಾರಿಕೆಗೆ ಅಡ್ಡಿಯಾಗದಿದ್ದರೂ, ನಾಡದೋಣಿಯ ಮೀನುಗಾರಿಕೆ ಆಶಾದಾಯಕವಲ್ಲ. ಕಡಲಮ್ಮ ಕರುಣಿಸಿದರೆ ಹೊಟ್ಟೆ ತುಂಬ ಮೀನು ಸಾರಿನ ಊಟ ಎನ್ನುತ್ತಾರೆ ಕಾಸರಗೋಡು ಕಸಬಾ ಕಡಪ್ಪುರದ ಕುಮಾರ.ಮೀನುಗಾರಿಕೆಗೆ ನಿಷೇಧ ಜಾರಿಗೆ ಬರುವುದರೊಂದಿಗೆ ಆಳ ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿದ್ದವರು ಮೀನಿನ ಬಲೆಗಳನ್ನು ಸುರಕ್ಷಿತವಾಗಿ ಇಡಲು ಆರಂಭಿಸಿದ್ದಾರೆ. ಇನ್ನೊಂದೆಡೆ ನಾಡ ದೋಣಿಯ ಮೀನುಗಾರಿಕೆಗೆ ಬಲೆಗಳನ್ನು ಸಜ್ಜುಗೊಳಿಸಿ ಮೀನುಗಾರಿಕೆಗೆ ಬೆಸ್ತರು ಸಿದ್ಧತೆಗಳಲ್ಲಿ ತೊಡಗಿದ್ದಾರೆ.ನಾಡದೋಣಿಗೆ ಯಂತ್ರ ಅಳವಡಿಸಿ ಮೀನುಗಾರಿಕೆ ನಡೆಸಲು ಅನುಮತಿ ನೀಡಿರುವುದರಿಂದ ಬೆಸ್ತರಿಗೆ ಕೊಂಚ ಸಮಾಧಾನವಿದೆ ಎನ್ನುತ್ತಾರೆ ಕಾಸರಗೋಡು ಕಸಬಾ ಕಡಪ್ಪುರದ ಶಿಶುಪಾಲ.ಆದರೆ ಯಾಂತ್ರೀಕೃತ ಬೋಟುಗಳಲ್ಲಿ ಮೀನುಗಾರಿಕೆಗೆ ಇಳಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೋಟುಗಳಿಗೆ ಡೀಸೆಲ್ ವಿತರಿಸುವ ಬ್ಯಾಂಕ್‌ಗಳು ವಿತರಣೆ ಸ್ಥಗಿತಗೊಳಿಸಬೇಕು  ಎಂದು ಜಿಲ್ಲಾ ಮೀನುಗಾರಿಕಾ ಉಪ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.