ಆಶಾವಾದಿ ಆಕಾಶ್

7

ಆಶಾವಾದಿ ಆಕಾಶ್

Published:
Updated:

ಬಣ್ಣದ ಲೋಕದ ಸೆಳೆತಕ್ಕೆ ಒಳಗಾಗಿ ಎಂಜಿನಿಯರಿಂಗ್ ಓದಿಗೆ ತಿಲಾಂಜಲಿ ಇಟ್ಟು ಬಂದವರು ನಟ ಆಕಾಶ್. ಚಿತ್ರರಂಗದ ಬದುಕು ಹೊರನೋಟಕ್ಕೆ ಕಾಣುವಷ್ಟು ಅಂದವಲ್ಲ ಎಂಬುದು ಅವರ ಅರಿವಿಗೆ ಬಂದಿದೆ. ನಟನೆಗಿಳಿದು ಹಲವು ವರ್ಷ ದಾಟಿದ್ದರೂ ನಟಿಸಿದ್ದು ಕೆಲವೇ ಕೆಲವು ಚಿತ್ರಗಳಲ್ಲಿ. ನಟನಾಗಿ ಗುರುತಿಸಿಕೊಂಡಿದ್ದರೂ ಅವಕಾಶಗಳೇ ಸಿಗುತ್ತಿಲ್ಲ ಎಂಬ ಬೇಸರ ಅವರದು.ಬಳ್ಳಾರಿಯ ಬಾಣಾಪುರ ಎಂಬ ಪುಟ್ಟ ಹಳ್ಳಿಯವರಾದ ಆಕಾಶ್ ಅಭಿನಯದ ಪಟ್ಟುಗಳನ್ನು ಕಲಿತದ್ದು ಎ.ಎಸ್. ಮೂರ್ತಿಯವರ ಬಳಿ. ಬಾಲ್ಯದಲ್ಲಿಯೇ ನಟನೆಯ ಆಸಕ್ತಿ ಹೊಂದಿದ್ದ ಆಕಾಶ್ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಇದ್ದಾಗ ಓದನ್ನು ಅರ್ಧಕ್ಕೆ ತ್ಯಜಿಸಿದರು.ರಂಗಪ್ರಯೋಗ, ಬೀದಿ ನಾಟಕಗಳಲ್ಲಿ ಅವರ ನಟನೆಯ ಸಾಮರ್ಥ್ಯಕ್ಕೆ ಎ.ಎಸ್.ಮೂರ್ತಿ ಸಾಣೆ ಹಿಡಿದರು. ಕಲಾವಿದರ ಅಭಿನಯವನ್ನು ವೀಡಿಯೊ ಚಿತ್ರೀಕರಣ ಮಾಡಿ ಎ.ಎಸ್. ಮೂರ್ತಿ ಅವರಿಗೆ ತೋರಿಸಿ ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸುತ್ತಿದ್ದರಂತೆ. ಹೀಗಾಗಿ ಆಕಾಶ್‌ಗೆ ಸಲೀಸಾಗಿ ಕ್ಯಾಮೆರಾ ಎದುರಿಸುವುದು ಸಾಧ್ಯವಾಯಿತು.

 

ಅವರಿಗೆ ಮೊದಲು ಅವಕಾಶ ನೀಡಿದ್ದು `ಮೊಗ್ಗಿನ ಮನಸ್ಸು~ ಚಿತ್ರ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಆಕಾಶ್‌ಗೆ ಮೊದಲ ಸನ್ನಿವೇಶವೇ ಸವಾಲಿನದ್ದಾಗಿತ್ತು. ಅಲ್ಲದೆ ಇಡೀ ಚಿತ್ರದಲ್ಲಿ ಅವರ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದಿದ್ದರಿಂದ ಒತ್ತಡವೂ ಇತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದಾಗ ಇಡೀ ಚಿತ್ರತಂಡ ಚಪ್ಪಾಳೆ ಹೊಡೆದು ಪ್ರೋತ್ಸಾಹ ನೀಡಿತ್ತು.ನಂತರ `ಕೃಷ್ಣನ್ ಲವ್ ಸ್ಟೋರಿ~, `ಒಂದೇ ಒಂದು ಸಾರಿ~, `ಹುಡುಗ ಹುಡುಗಿ~ ಚಿತ್ರಗಳಲ್ಲಿ ನಟಿಸಿದರು. `ಒಂದೇ ಒಂದು ಸಾರಿ~ ಚಿತ್ರದಲ್ಲಿ ಅವರದು ನಾಯಕನ ಪಟ್ಟ. ಹೋದಲ್ಲೆಲ್ಲಾ ಅವರ ಅಭಿನಯಕ್ಕೆ ಮೆಚ್ಚುಗೆಯ ಮಾತು ಸಿಕ್ಕರೂ ಅವಕಾಶ ಸಿಕ್ಕಿದ್ದು ಕಡಿಮೆಯೇ. ನಾಯಕನಟನಾಗುವ ಎಲ್ಲಾ ಅರ್ಹತೆಗಳೂ ತನಗಿದೆ. ನಿರ್ಮಾಪಕರು, ನಿರ್ದೇಶಕರು ತನ್ನನ್ನು ತಿರಸ್ಕರಿಸುವುದೂ ಇಲ್ಲ, ಅತ್ತ ಅವಕಾಶವನ್ನೂ ನೀಡುತ್ತಿಲ್ಲ ಎಂದು ಬೇಸರದಿಂದ ಹೇಳಿಕೊಳ್ಳುತ್ತಾರೆ. `ರಾವಣ~ ಚಿತ್ರದಲ್ಲಿ ಪ್ರಮುಖ ಪಾತ್ರವೊಂದು ತಪ್ಪಿಹೋದ ಬೇಸರ ಅವರನ್ನು ಪದೇ ಪದೇ ಕಾಡುತ್ತಿದೆ.ಈ ಮಧ್ಯೆಯೂ ಅವರು ನಟಿಸಿರುವ ಇಬ್ಬರು ನಾಯಕರಿರುವ ಎರಡು ಚಿತ್ರಗಳು ಸಿದ್ಧವಾಗುತ್ತಿವೆ. ಪೂಜಾ ಗಾಂಧಿ ನಾಯಕಿಯಾಗಿರುವ `ಜನವರಿ ಒಂದು ಬಿಡುಗಡೆ~ ಎಂಬ ಚಿತ್ರ ಹಾಗೂ `ನೆರಳು~ ಚಿತ್ರಗಳಲ್ಲಿ ಆಕಾಶ್ ನಟಿಸುತ್ತಿದ್ದಾರೆ.

 

`ಜನವರಿ....~ ಚಿತ್ರದಲ್ಲಿ ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಹಳ್ಳಿಯಿಂದ ಬೆಂಗಳೂರಿಗೆ ಬರುವ ಹುಡುಗನ ಪಾತ್ರ. ಜನವರಿ ಒಂದನೇ ತಾರೀಕು ನಡೆಯುವ ಒಂದು ಘಟನೆ ಸುತ್ತ ಚಿತ್ರ ಸಾಗುತ್ತದೆ. `ನೆರಳು~ ಚಿತ್ರದಲ್ಲಿ ಅವರ ಪಾತ್ರಕ್ಕೆ ಮೂರು ಛಾಯೆಯಿದೆಯಂತೆ. ಈ ಎರಡು ಚಿತ್ರಗಳ ಮೇಲೆ ಆಕಾಶ್ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ನಾಯಕನಾಗಿ ಬೆಳೆಯುವ ಆಸೆ ಇದ್ದರೂ, ಬದುಕು ರೂಪಿಸಿಕೊಳ್ಳುವಷ್ಟು ಅವಕಾಶಗಳು ಸಿಕ್ಕರೆ ಸಾಕು ಎಂಬ ಇತಿಮಿತಿ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry